ಏಕಾಂತವೆಂಬುದು ಸುಂದರ ಅನುಭವ. ಬೇಕೆಂದಾಗ ಸಿಗದು, ಸಿಕ್ಕಿದಾಗ ಬಿಡಲಾಗದು. ಅಲ್ಲಿ ಮನಸು ಮಾತನಾಡುತ್ತದೆ. ಪ್ರಶ್ನೆಗಳು ಹುಟ್ಟುತ್ತವೆ, ಉತ್ತರಕ್ಕಾಗಿ ಹುಡುಕಾಟ ನಡೆಯುತ್ತದೆ, ಸರಿಯೋ ತಪ್ಪೋ ಮತ್ತೆ ಮತ್ತೆ ವಿಮರ್ಶೆಗಳು ನಡೆಯುತ್ತವೆ. ಉತ್ತರ ಕೆಲವೊಮ್ಮೆಮನಸ್ಸಿಗೆ ಹಿತವಾಗಿಯೂ ಇರಬಹುದು, ಕಹಿಯೂ ಆಗಬಹುದು. ಆದರೆ ಅಲ್ಲಿ ಯಾವ ಒತ್ತಡವೂ ಇಲ್ಲ, ಯಾರ ಹಿಡಿತವೂ ಇರುವುದಿಲ್ಲ, ಅವರವರವರ ಮನಸ್ಸಿನ ಮಾತುಗಳಷ್ಟೇ. ಮನಸಿನ ನೋವು ಬೇಸರಿಕೆಗಳು ಹೊರ ಹೊಮ್ಮುವುದಕೆ ಏಕಾಂತ ಕ್ಷಣಗಳು ಸಾಕ್ಷಿ.
ಏಕಾಂತವಿರುವುದು ಮನಸ್ಸಿನಲ್ಲಿ. ಜೊತೆಗೆ ಯಾರು ಇಲ್ಲದೆ ಒಬ್ಬರೇ ಇದ್ದರೂ ಏಕಾಂತವಿರಬೇಕೆಂದೇನೂ ಇಲ್ಲ. ಹತ್ತು ಹಲವು ಯೋಚನೆಗಳು, ಯೋಜನೆಗ ಳು, ಕೆಲಸಗಳು ಮುತ್ತಿಕೊಂಡು ನಮ್ಮನ್ನು ಕಾರ್ಯ ಪ್ರವೃತ್ತರಾಗುವಂತೆ ಮಾಡುತ್ತವೆ. ಕೆಲವೊಮ್ಮೆ ಜನ ಜಾತ್ರೆಯಲ್ಲಿ ದ್ದರೂ ಆರಾಮವಾಗಿ ,ಇರುವ ಸ್ವಲ್ಪ ವೇ ಜಾಗದಲ್ಲಿ ಸುಖ ನಿದ್ದೆ ಯನ್ನು ಮಾಡಿಬಿಡು ತ್ತಾರೆ. ನಾಳಿನ ಚಿಂತೆ ಇದ್ದರೂ ಅದು ಅವರ ನಿತ್ಯ ಕರ್ಮಕ್ಕೆ ಯಾವತ್ತೂ ಅಡ್ಡಿಯಾಗಲಾರದು. ಎಷ್ಟೇ ಬ್ಯುಸಿ ಇದ್ದರೂ ಸ್ವಂತ ಕಾರ್ಯಕ್ರಮ ಗಳಿಗೆ ಸಮಯ ಹೊಂದಿಸಿಕೊಳ್ಳುತ್ತಾರೆ. ಒಂದಿಷ್ಟು ಹೊತ್ತು ತಮಗಾಗಿ ಮೀಸಲಿಟ್ಟು ಕೊಳ್ಳುವಷ್ಟು ಸ್ವಾತಂತ್ರ್ಯ ಉಳಿಸಿಕೊಂಡಿರುತ್ತಾರೆ. ಅದು ಅವರವರ ಸ್ವಭಾವ.
ಇಂದು ಏಕಾಂತ ಬೇಕು ಎನ್ನುವರು ಮೊದಲು ಮೊಬೈಲ್ ನ್ನು ಸ್ವಿಚ್ ಆಫ್ ಮಾಡಬೇಕು. ನಮ್ಮ ಪ್ರತಿ ಕ್ಷಣವನ್ನು ಮೊಬೈಲ್ ಆಕ್ರಮಿಸಿ ಕೊಳ್ಳುತ್ತಿದೆ. ಆಟ, ಊಟ, ಪಾಠ ಯಾವುದನ್ನೂ ಮಾಡಬೇಕಾ ದಾ ಸಮಯಕ್ಕೆ ಮಾಡಲೂ ಬಿಡದೆ ಸತಾಯಿಸುವ ಮೊಬೈಲ್ ನಮ್ಮನ್ನು ಅದರ ಗುಲಾಮರನ್ನಾಗಿ ಮಾಡುತ್ತಿದೆ. ಒಂದರೇ ಕ್ಷಣ ಮಲಗುವ ಎಂದರೆ ಬೇಕೊ ಬೇಡವೋ ಯಾವುದೋ ಮೆಸೇಜ್ ಬಂದು ಬಿದ್ದ ಸೂಚನೆಯಾಗುತ್ತದೆ. ಅಗತ್ಯ ವುಂಟೋ ಇಲ್ಲವೋ ಬಂದ ಎಲ್ಲವನ್ನೂ ( ಗುಂಪಿನಲ್ಲಿ ಬಂದದ್ದೂ ಆಗಿರಬಹುದು) ಓದಲೇ ಬೇಕು ಎಂಬ ಭಾವನೆ!
ಲೇಖಕರು ತಮ್ಮ ಮುಖ್ಯ ಕಥೆ , ಕಾದಂಬರಿ , ಆತ್ಮಕಥೆಗಳನ್ನು ಬರೆಯುವ ಸಂಧರ್ಭದಲ್ಲಿ ದೂರದ ಊರುಗಳನ್ನು ಅರಸಿ ಹೋಗುತ್ತಿದ್ದರಂತೆ. ತಮ್ಮ ಬರಹಗಳಿಗೆ ಯಾವುದೇ ಅಡ್ಡಿ ಆತಂಕಗಳು ಎದುರಾಗಬಾರದು ಎಂಬ ಮುಂದಾಲೋಚನೆ ಅವರದಾಗಿರುತ್ತಿತ್ತು. ಶಿವರಾಮ ಕಾರಂತರು ತಮ್ಮ ‘ಬೆಟ್ಟದ ಜೀವ ‘ ಕಾದಂಬರಿ ಯನ್ನು ನಮ್ಮ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ದ ಪಕ್ಕದ ಕಡಮ್ಮಕಲ್ಲು ಕಟ್ಟದ ಕಟ್ಟ ಗೋವಿಂದಯ್ಯ ನವರ ಮನೆಯಲ್ಲಿದ್ದು ಬರೆದರಂತೆ. ಪ್ರಕೃತಿಯ ಮಡಿಲಲ್ಲಿ ಸುಂದರ ಕೃತಿಯೊಂದು ರಚನೆಯಾಯಿತು.
ಏಕಾಂತ ವೆಂದರೆ ಒಂಟಿತನವಲ್ಲ, ಏಕಾಂತವೆಂದರೆ ವೈರಾಗ್ಯ ವಲ್ಲ. , ಏಕಾಂತವೆಂಬುದು ಒಂದು ಸುಂದರ ಅನುಭವ . ಅನುಭವಿಸುವ ಮನಸ್ಸು ಬೇಕಷ್ಟೇ.