ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಏನು ಮಾಡ ಬೇಕೆಂದು ತಿಳಿಯುತ್ತಿಲ್ಲ. ಮನೆಯೊಳಗೆ ಎಷ್ಟೆಂದು ಕುಳಿತುಕೊಳ್ಳಬಹುದು. ಮಳೆ ಸುರಿಯುವ ಸಮಯಕ್ಕೆ ಬರಬೇಕು. ಅದು ಸಹಜ. ಹಾಗೆಂದು ಆಗುವ ಕೆಲಸ ಆಗಬೇಕಲ್ಲ.
ನಿತ್ಯ ದುಡಿದು ಉಣ್ಣುವವರಿಗೆ ಗಂಜಿಯ ಚಿಂತೆ. ಹೊಲದೊಡೆಯನಿಗೆ ಹೊಲದ ಕೆಲಸದ ಗಡಿಬಿಡಿ, ಅಡಿಕೆ ತೋಟದಲ್ಲಿ ರೋಗದಿಂದ ಉದುರುವ ಅಡಿಕೆಯನ್ನು ಹೆಕ್ಕುವುದೋ ಅಲ್ಲೇ ಬಿಡುವುದೋ ಒಟ್ಟಾರೆ ಮದ್ದು ಬಿಡಲಾಗದೆ ಸೋತೆವಲ್ಲಾ ಎಂದು ಕಣ್ಣು ಕಣ್ಣು ಬಿಡುವ ಪರಿಸ್ಥಿತಿ. ಮನೆಮುಂದೆ ಕೆಲಸಕ್ಕಾಗಿ ಬಂದವರಿಗೆ ಏನು ಹೇಳುವುದು ಎಂದು ತಲೆ ತುರಿಸುವುದೆ ಆಯಿತು.
ಮನೆಯ ಸುತ್ತಮುತ್ತಲಿನ ಕೆಲಸಗಳನ್ನು ಮಾಡುತ್ತಾ ಹೊತ್ತು ಕಳೆಯುತ್ತದ್ದವರಿಗೆ ಮಳೆಯಿಂದಾಗಿ ದಿಗ್ಬ್ಂಧನ ವಿಧಿಸಿದಂತಾಗಿದೆ. ಪೇಪರ್, ಕಥೆ ಪುಸ್ತಕಗಳನ್ನು ಓದುವ ಅಭ್ಯಾಸವಿದ್ದವರಿಗೆ ಸಮಯ ಕಳೆದೀತು. ಇನ್ನೂ ಟಿ.ವಿ ಧಾರಾವಾಹಿ ಸಿನೆಮಾಗಳಲ್ಲಿ ಮುಳುಗುವವರು ಮಳೆ ಮೋಡಗಳಿಗೂ, ಕರೆಂಟ್ ಗೂ ಹಿಡಿಶಾಪ ಹಾಕಬೇಕಷ್ಟೇ. ಒಂದು ಗಾಳಿ ಬಂದರೆ ಮತ್ತೆ ಕರೆಂಟ್ ದರ್ಶನ ಮರುದಿನವೇ. ಈಗ ಪರಿಸ್ಥಿತಿ ಸುಧಾರಿಸಿದೆ. ಸೋಲರ್, ಇನ್ವರ್ಟರ್ ಗಳು ಎಲ್ಲಾ ಮನೆಗಳಲ್ಲಿ ಇರುವ ಕಾರಣ ದೀಪ, ಕ್ಯಾಂಡಲ್ ಗಳ ಬಳಕೆ ಬಹು ಅಪರೂಪ.
ಮಕ್ಕಳು ಮಳೆಗೆ ಸಿಗುವ ರಜೆಯನ್ನು ಎದುರು ನೋಡುತ್ತಿದ್ದರೆ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ಇನ್ನೂ ಗರಿಗರಿಯಾದ ಹಪ್ಪಳ ,ಸಂಡಿಗೆ, ಚಿಪ್ಸ , ಬಿಸಿ ಬಿಸಿ ಕಾಫಿಯೊಂದಿಗೆ ಪೋಡಿ ತಿನ್ನುತ್ತಾ ಮಳೆಯನ್ನು ಅನುಭವಿಸುವ ಮನಸ್ಥಿತಿಗೆ ಬಿ.ಪಿ., ಶುಗರ್ ,ಕೊಲೆಸ್ಟರಾಲ್ ಅಡ್ಡಿಯಾಗುತ್ತಿದೆ. ಮಳೆ ಬಿಸಿಲು, ಬದುಕಿನ ಅವಿಭಾಜ್ಯ ಅಂಗವಾದರೂ ಅವುಗಳ ತೀವ್ರತೆಯನ್ನು ಒಪ್ಪಿಕೊಳ್ಳುವುದು ಮನಸ್ಸಿಗೆ ಹಿಂಸೆಯೇ ಸರಿ.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel