ಕಡಬ: ಕಡಬ ಠಾಣೆಯಲ್ಲಿ ಸೂಕ್ತ ನ್ಯಾಯ ದೊರೆಯುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರು ಅಹವಾಲು ಸ್ವೀಕರಿಸಿ ವರದಿ ಕೊಡಬೇಕೆಂದು ಪುತ್ತೂರು ವಿಭಾಗದ ಡಿವೈಎಸ್ಪಿ ಮುರಳೀಧರ್ ಪಿ.ಕೆ ಅವರಿಗೆ ಸೂಚಿಸಿದ ಹಿನ್ನಲೆಯಲ್ಲಿ ಕಡಬ ಠಾಣೆಯಲ್ಲಿ ಸಾರ್ವಜನಿಕ ಸಭೆ ನಡೆಯಿತು.
ಸಭೆಯಲ್ಲಿ ಹಲವಾರು ವಿಚಾರಗಳು ಚರ್ಚೆಗೆ ಬಂದವು. ಡಿವೈಎಸ್ಪಿಯವರು ಮಾತನಾಡಿ, ಪೋಲಿಸರು ಜನಸ್ನೇಹಿಯಾಗಿರಬೇಕು ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು, ಪೋಲಿಸರೆಂದರೆ ಭಯದ ವಾತಾವರಣ ನಿರ್ಮಾಣ ಆಗಬಾರದು ಭಯ ಕಳ್ಳರಿಗೆ ಮಾತ್ರ ಆಗಬೇಕು ಎಂದರು.
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ತಮ್ಮಯ್ಯ ಗೌಡ ಮಾತನಾಡಿ, ಏ.20ರಂದು ಕಡಬ ಶ್ರೀ ಕಡಂಬಳಿತ್ತಾಯ ದೈವದ ನೇಮೋತ್ಸವದ ಪ್ರಯುಕ್ತ ದೈವದ ಪೇಟೆ ಸವಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಮೆರವಣಿಗೆಯಲ್ಲಿದ್ದ ಕೊಂಬಾರು ಗ್ರಾಮದ ರಾಮಣ್ಣ ಗೌಡ ಎಂಬವರಿಗೆ ಕ್ಷುಲ್ಲಕ ಕಾರಣಕ್ಕಾಗಿ ಸಾರ್ವಜನಿಕರ ಎದುರು, ಪೋಲಿಸ್ ಠಾಣೆಯ ಎದುರು ಭಾಗದ ಮುಖ್ಯ ರಸ್ತೆಯಲ್ಲಿ ಕಡಬ ಠಾಣಾ ಸಿಬ್ಬಂದಿ ಪಂಪಾಪತಿ ಎಂಬವರು ರಾಮಣ್ಣ ಗೌಡರವರಿಗೆ ಅಮಾನವೀಯವಾಗಿ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ, ಅವರು ಯಾಕಾಗಿ ಠಾಣೆಗೆ ಬರುತ್ತಿದ್ದು ಇತ್ಯಾದಿಗಳ ಬಗ್ಗೆಯೂ ಮಾಹಿತಿ ಇದೆಯೇ ಪೊಲೀಸ್ ಇಲಾಖೆಗೆ, ಇದರ ಬಗ್ಗೆಯೂ ಕ್ರಮ ಕೈಗೊಳ್ಳಲಿಲ್ಲ ಎಂದರು. ಈ ವಿಚಾರದ ಬಗ್ಗೆ ವಾಡ್ಯಪ್ಪ ಗೌಡ ಎರ್ಮಾಯಿಲ್ ಕೂಡ ದ್ವನಿಗೂಡಿಸಿದರು.
ಇದಕ್ಕೆ ಉತ್ತರಿಸಿದ ಡಿವೈಎಸ್ಪಿಯವರು ರಾಮಣ್ಣ ಗೌಡ ವಿಚಾರ ಈಗಾಗಲೇ ನಾನು ಮಾಹಿತಿ ಪಡೆದುಕೊಂಡಿದ್ದು ಮೆರವಣಿಗೆಯ ಸಂದರ್ಭ ಕುಡಿದು ಮೆರವಣಿಗೆಯಲ್ಲಿ ಶಾಂತಿ ಭಂಗ ಮಾಡುತ್ತಾ ಪೋಲಿಸ್ ಸಿಬ್ಬಂದಿಗಳತ್ತ ತೆಂಗಿನ ಕಾಯಿ ಎಸೆದಿದ್ದರು, ಇದರಿಂದ ಗೃಹರಕ್ಷಕದಳದ ಮಹಿಳಾ ಸಿಬಂದಿಗೆ ಗಾಯವಾಗಿದೆ, ನಾವು ಆ ವೃದ್ದರ ಮೇಲೆಯೆ ಕೇಸು ಮಾಡದ್ದು ತಪ್ಪಾಯ್ತು ನಾವು ವೃದ್ದ ಎಂಬ ಕಾರಣಕ್ಕೆ ಕೇಸು ಮಾಡಿರಲಿಲ್ಲ, ಅದೇ ತಪ್ಪಾಯ್ತು ಎಂದು ಹೇಳಿದ ಡಿವೈಎಸ್ಪಿ ಪೋಲಿಸ್ ಸಿಬಂದಿಯಿಂದ ತಪ್ಪಾಗಿರುವುದಕ್ಕೆ ಅವರಿಗೆ ಇಲಾಖೆಯಿಂದ ಯಾವ ಕ್ರಮ ಕೈಗೊಳ್ಳಬೇಕಾ ಅದನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ತಾ.ಪಂ. ಸದಸ್ಯ ಗಣೇಶ್ ಕೈಕುರೆ ಮಾತನಾಡಿ, ವೃದ್ದ ರಾಮಣ್ಣ ಗೌಡರ ಹಣ ಅವರ ಕೈಗೆ ವಾಪಾಸು ಸಿಗದೆ ಇದ್ದುದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಪದೆ ಪದೆ ಠಾಣೆಗೆ ಬರುತ್ತಿದ್ದರು ಎಂದರು.
ದ.ಸಂ.ಸ(ಅಂಬೇಡ್ಕರ್ ವಾದ)ದ ಮುಖಂಡೆ ಸುಗುಣಾ ದೇವಯ್ಯ , ವಸಂತ ಕುಬಲಾಡಿ, ಗುರುವಪ್ಪ ಕಲ್ಲುಗುಡ್ಡೆ ಮೊದಲಾದವರು ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್, ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ಐತ್ತೂರು ಗ್ರಾ.ಪಂ. ಅಧ್ಯಕ್ಷ ಸತೀಶ್.ಕೆ, ಎಪಿಎಂ.ಸಿ ನಿರ್ದೇಶಕ ಮೇದಪ್ಪ ಗೌಡ ಡೆಪ್ಪುಣಿ ಪ್ರಮುಖರಾದ ಸೀತಾರಾಮ ಗೌಡ ಪೊಸವಳಿಕೆ, ಸತೀಶ್ ನಾಯಕ್, ಜನಾರ್ದನ ಗೌಡ ಪಣೆಮಜಲು, ನೀತಿ ಟ್ರಸ್ಟ್‍ನ ರಾಜ್ಯ ಸಂಚಾಲಕ ಜಯನ್.ಟಿ, ಕ್ಷೇವಿಯರ್ ಬೇಬಿ, ಎ.ಪಿ. ಚೆರಿಯನ್, ಮೋನಪ್ಪ ಗೌಡ ನಾಡೋಳಿ, ಚಂದ್ರಶೇಖರ ಗೌಡ ಕೋಡಿಬೈಲು,ಜಯಶ್ರೀ, ಚಿನ್ನಮ್ಮ, ಜಯಶ್ರೀ ಹೊಸ್ಮಠ, ಜಯರಾಮ ಗೌಡ ಆರ್ತಿಲ, ಮಂಜುನಾಥ ಗೌಡ ಕೊಲಂತ್ತಾಡಿ ಉಪಸ್ಥಿತರಿದ್ದರು