ತೋಟದೊಳಗೆ ಅಲ್ಯೂಮಿನಿಯಂ ಏಣಿಯನ್ನು ಅಚೀಚೆ ಒಯ್ಯುವಾಗ ವಿದ್ಯುತ್ ವಯರಿಗೆ ತಾಗಿ ಇನ್ನು ಅವಘಡ ಸಂಭವಿಸದು. ಪುತ್ತೂರಿನ ಬೊಳ್ವಾರಿನಲ್ಲಿರುವ ಎಸ್.ಆರ್.ಕೆ. ಅಲ್ಯೂಮಿನಿಯಂ ಫೈಬರ್ಸ್ ಇವರು ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ನಿರೋಧ ರಕ್ಷಾಕವಚವನ್ನು (ಇನ್ಸೂಲೇಶನ್) ತೊಡಿಸಿದ್ದಾರೆ. ಇದು ವಿದ್ಯುತ್ ಶಾಕ್ ಆಗುವುದನ್ನು ತಪ್ಪಿಸುತ್ತದೆ.
ಈಚೆಗಿನ ದಿವಸಗಳಲ್ಲಿ ಹೆಚ್ಚಾಗಿ ಏಣಿಗಳನ್ನು ಅತ್ತಿತ್ತ ಒಯ್ಯುವಾಗ ಅಕಸ್ಮಾತ್ ವಿದ್ಯುತ್ ಲೈನಿಗೆ ತಾಗಿ ಅವಘಡಗಳು ಆಗುತ್ತಿರುವುದನ್ನು ನೋಡುತ್ತೇವೆ. ವಿದ್ಯುತ್ ಶಾಕಿಗೆ ಎಷ್ಟೋ ಜೀವ ಹಾನಿ ಸಂಭವಿಸಿದೆ. ರಕ್ಷಾಕವಚ ಹೊದೆಸಿದ ಏಣಿಗಳನ್ನು ಇನ್ನು ನಿರ್ಭೀತಿಯಿಂದ ತೋಟದೊಳಗೆ ಬಳಸಬಹುದು.
ಈಗಾಗಲೇ ಮಾರುಕಟ್ಟೆಯಲ್ಲಿರುವ ಅಲ್ಯೂಮಿನಿಯಂ ಏಣಿಗೆ – ಪೈಪು, ಮೆಟ್ಟಿಲು ಸೇರಿ – ಎಸ್.ಆರ್.ಕೆ. ಅಲ್ಯೂಮಿನಿಯಂ ಫೈಬರ್ಸ್ ಇವರು ರಕ್ಷಾವಚವನ್ನು ತೊಡಿಸಿ ಕೊಡುವಂತಹ ನೂತನ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಇವರಲ್ಲಿ ಹೊಸ ಅಲ್ಯೂಮಿನಿಯಂ ಏಣಿಯೂ ಲಭ್ಯ.
ಮೂರಿಂಚು ವ್ಯಾಸದ ಪೈಪಿಗೆ ಇನ್ಸೂಲೇಶನ್ ಕವಚವನ್ನು ತೂರಿಸಿ, ಅದಕ್ಕೆ ಶಾಖ ಪ್ರಕ್ರಿಯೆಯನ್ನು ಮಾಡಿದಾಗ ಕವಚವು ಪೈಪಿಗೆ ಅಂಟಿಕೊಳ್ಳುತ್ತದೆ. ಇದೊಂದು ಹೊಸ ತಂತ್ರಜ್ಞಾನ. ಅಲ್ಯೂಮಿನಿಯಂ ಏಣಿಗೆ ರಕ್ಷಾ ಕವಚ ಹೊದೆಸಿರುವುದು ಇದೇ ಮೊದಲು. ಇದು ಕೃಷಿಕರಿಗೆ ತುಂಬಾ ಉಪಕಾರವಂತೂ ಖಂಡಿತ.
“ಹಳೆಯ ಏಣಿಯು ಅದಾಗಲೇ ಸ್ಟೆಪ್‍ಗಳನ್ನು ಹೊಂದಿರುವುದರಿಂದ ಅದಕ್ಕೆ ಪ್ರತ್ಯೇಕವಾಗಿ ಕವಚ ತೊಡಿಸಲು ಕಷ್ಟಸಾಧ್ಯ. ಕೆಲವೊಮ್ಮೆ ಹೆಚ್ಚು ಬಳಕೆ ಮಾಡಿದ್ದರಿಂದಾಗಿ ಏಣಿಗಳು ಬೆಂಡ್ ಆಗಿರುವ ಸಾಧ್ಯತೆಯೂ ಹೆಚ್ಚು. ಹಾಗಾಗಿ ಹೊಸ ಏಣಿಗೆ ಮಾತ್ರ ಇನ್ಸೂಲೇಶನ್ ಕವಚವನ್ನು ಹೊದೆಸಲು ಸಾಧ್ಯವಾಗುತ್ತದೆ. “ ಎಂದು ಎಸ್.ಆರ್.ಕೆ. ಅಲ್ಯೂಮಿನಿಯಂ ಫೈಬರ್ಸ್ ಇದರ ಸದಾಶಿವ ಭಟ್ ಎಂ. ಹೇಳುತ್ತಾರೆ.
Advertisement
ಇಪ್ಪತ್ತು, ಹತ್ತು ಅಡಿ ಎತ್ತರದ ಎರಡು ಏಣಿಗಳನ್ನು ಒಂದಕ್ಕೊಂದು ಜೋಡಿಸಿಕೊಂಡರೆ ಸಲೀಸಾಗಿ ಮೂವತ್ತು ಅಡಿ ಎತ್ತರದ ಮರಗಳನ್ನು ಏರಬಹುದು. ಅಡಿಕೆಮರ, ತೆಂಗಿನಮರಗಳನ್ನು ಏರಬಹುದು. ಹೊಸ ತಂತ್ರಜ್ಞಾನದ ಇನ್ಸೂಲೇಶನ್ ಏಣಿಯು ಕೆಲವೇ ದಿನಗಳಲ್ಲಿ ಕೃಷಿಕರ ಕೈಗೆ ಲಭ್ಯ.
ಏಣಿಗೆ ಬುಕ್ಕಿಂಗ್ ಆರಂಭವಾಗಿದೆ. ಏಣಿಗೆ ರಕ್ಷಾಕವಚದ ಬಳಕೆಯನ್ನು ಮನಗಂಡ ಅನೇಕರು ಉತ್ಸುಕರಾಗಿದ್ದಾರೆ. ಇದು ಕೃಷಿಕ ಸ್ವೀಕೃತಿ ಪಡೆಯುವುದರಲ್ಲಿ ಸಂಶಯವಿಲ್ಲ. ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಶ್ರೀ ಡಾ.ವೀರೇಂದ್ರ ಹೆಗ್ಗಡೆಯವರು ಏಣಿಯ ರಕ್ಷಾಕವಚ ಹೊದಿಕೆಯನ್ನು ಪರೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
(ಸದಾಶಿವ ಭಟ್ ಎಂ. – 94485 49807)