ನವದೆಹಲಿ: ಕರ್ನಾಟಕದಲ್ಲಿ ಅನರ್ಹಗೊಂಡಿರುವ 17 ಶಾಸಕರ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ತನ್ಮೂಲಕ ಅನರ್ಹಗೊಂಡಿರುವ ಶಾಸಕರಿಗೆ ಬಿಗ್ ಶಾಕ್ ನೀಡಿದೆ.
ಸೆ.23ರಂದು ಉಪಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಸೆ.30 ಕೊನೇ ದಿನ. ನಾಮಪತ್ರ ಪರಿಶೀಲನೆ ಅಕ್ಟೋಬರ್ 1ಕ್ಕೆ ನಡೆಯಲಿದೆ. ನಾಮಪತ್ರ ವಾಪಸು ಪಡೆಯಲು ಅಕ್ಟೋಬರ್ 3 ಕೊನೇ ದಿನವಾಗಿದೆ. ಅಕ್ಟೋಬರ್ 21ಕ್ಕೆ ಮತದಾನ ನಡೆಯಲಿದ್ದು, ಅಕ್ಟೋಬರ್ 24ಕ್ಕೆ ಫಲಿತಾಂಶ ಘೋಷಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ.
ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 15 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಕರ್ನಾಟಕ ವಿಧಾನಸಭೆಯ ಸ್ಪೀಕರ್ ನಮ್ಮನ್ನು ಅನರ್ಹಗೊಳಿಸಿರುವ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿದೆ. ಆದ್ದರಿಂದ ಈ ಕ್ಷೇತ್ರಗಳಿಗೆ ಚುನಾವಣೆ ನಡೆಸದಂತೆ ಅನರ್ಹಗೊಂಡಿರುವ ಶಾಸಕರು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದರು. ಆದರೆ, ಚುನಾವಣಾ ಆಯೋಗ ಈ ಮನವಿಯನ್ನು ಪುರಸ್ಕರಿಸಿಲ್ಲ.
ಗೋಕಾಕ್, ಅಥಣಿ, ರಾಣೆಬೆನ್ನೂರು, ಕಾಗವಾಡ, ಹಿರೇಕೆರೂರು, ಯಲ್ಲಾಪುರ, ಯಶವಂತಪುರ, ವಿಜಯನಗರ, ಶಿವಾಜಿನಗರ, ಹೊಸಕೋಟೆ, ಹುಣಸೂರು, ಕೆ.ಆರ್. ಪೇಟೆ, ಕೆ.ಆರ್. ಪುರಂ, ಮಹಾಲಕ್ಷ್ಮೀ ಲೇಔಟ್, ಚಿಕ್ಕಬಳ್ಳಾಪುರ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.