ಸುಳ್ಯ: ಪ್ರತಿ ಗ್ರಾಮಮಟ್ಟದಲ್ಲೂ ಕರ್ನಾಟಕ ಪಬ್ಲಿಕ್ ಸ್ಕೂಲ್‍ಗಳನ್ನು ತೆರೆಯಲು ಕ್ರಮ ವಹಿಸಬೇಕೆಂದು ಸುಳ್ಯ ಶಾಸಕ ಎಸ್.ಅಂಗಾರ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿ, ಮನವಿ ಮಾಡಿದರು. ಇಂಗ್ಲಿಷ್ ಶಿಕ್ಷಣದ ವ್ಯಾಮೋಹದಿಂದ ಶ್ರೀಮಂತರ ಮಕ್ಕಳು ಖಾಸಗೀ ಸಂಸ್ಥೆಗಳ ಮೂಲಕ ಶಿಕ್ಷಣ ಪಡೆಯುತ್ತಾರೆ. ಆದರೆ ಬಡವರ ಮಕ್ಕಳು ಮಾತ್ರ ಸರಕಾರಿ ಕನ್ನಡ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ ಇದ್ದು, ಕರ್ನಾಟಕ ಪಬ್ಲಿಕ್ ಸ್ಕೂಲ್‍ಗಳನ್ನು ಗ್ರಾಮ ಮಟ್ಟದಲ್ಲಿ ತೆರೆದಾಗ, ಬಡಮಕ್ಕಳಿಗೂ ಇಂಗ್ಲಿಷ್ ಶಿಕ್ಷಣ ಕೈಗೆಟಕುವಂತಾಗುತ್ತದೆ ಎಂದು ಅವರು ಮನವಿ ಮಾಡಿದರು.
ಸಚಿವರು ಮನವಿಗೆ ಸ್ಪಂದಿಸಿ, ಈ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದೇ ವೇಳೆ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋದಕೇತರ ಹುದ್ದೆಗಳನ್ನು ತುಂಬಲು ಕ್ರಮವಹಿಸಬೇಕೆಂದು ಸಚಿವರಲ್ಲಿ ವಿನಂತಿಸಿದರು. ಸುಳ್ಯ ತಾಲೂಕು ಪಂಚಾಯಿತಿ ಸದಸ್ಯ ರಾಧಾಕೃಷ್ಣ ಬೊಳ್ಳೂರು, ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ವೆಂಕಟ್ ವಳಲಂಬೆ ಇದ್ದರು.