ಮಂಗಳೂರು: ‘ಮಂಗಳೂರಿನ ಜನತೆಯಲ್ಲಿ ಕರ್ನಾಟಕ ಸಂಗೀತ ಪರಂಪರೆಯ ಬಗ್ಗೆ ಹೆಚ್ಚಿನ ಒಲವು ಮೂಡಿಸುವ ಅಗತ್ಯ ಇದೆ, ಈ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನಗಳು ನಡೆಯಬೇಕಾಗಿದೆ’ ಎಂದು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್.ವಾಸುದೇವ್ ಅವರು ಹೇಳಿದರು.
ನಗರದ ರಥಬೀದಿಯ ವಾಸುದೇವ ಆರ್ಕೇಡ್‌ನಲ್ಲಿ ಭಾನುವಾರ ನಡೆದ ‘ಸ್ವರಲಯ’ದ 25ನೇ ವಯೊಲಿನ್ ವಿಶೇಷ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಮಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಸಂಗೀತದ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಇದೀಗ ಹೆಚ್ಚಿನವರ ಒಲವು ಹಿಂದೂಸ್ತಾನಿ, ಯಕ್ಷಗಾನ ಕಾರ್ಯಕ್ರಮಗಳ ಕಡೆಗೆ ವಾಲುತ್ತಿದೆ. ಕರ್ನಾಟಕ ಸಂಗೀತಕ್ಕೆ ಭಕ್ತಿಯನ್ನು ಜಾಗೃತ ಗೊಳಿಸುವ ಶಕ್ತಿ ಇದೆ. ಪರಮಾತ್ಮನೊಂದಿಗೆ ಏಕತಾಭಾವ ಮೂಡಿಸಲು ಈ ಸಂಗೀತ ಪ್ರಕಾರದಿಂದ ಸಾಧ್ಯ. ಈ ನಿಟ್ಟಿನಲ್ಲಿ ನಗರದಲ್ಲಿರುವ ವಿವಿಧ ಸಂಗೀತ ಸಂಘ, ಸಂಸ್ಥೆಗಳು ಸಂಘಟಿತರಾಗಿ ಆಸಕ್ತರನ್ನು ಕರ್ನಾಟಕ ಸಂಗೀತ ಕಾರ್ಯಕ್ರಮಗಳತ್ತ ಸೆಳೆಯುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕಾಗಿದೆ’ ಎಂದು ಸಲಹೆ ನೀಡಿದರು.
ಯಾವುದೇ ದೊಡ್ಡ ಸಂಘ, ಸಂಸ್ಥೆಗಳ ಸಹಾಯ ಇಲ್ಲದೆ ಏಕಾಂಗಿಯಾಗಿ ಪ್ರತಿ ತಿಂಗಳು ವಯೊಲಿನ್ ವಿಶೇಷ ಶಿಬಿರಗಳನ್ನು ನಡೆಸಿ ಇದೀಗ 25ನೇ ವಿಶೇಷ ತರಬೇತಿ ಶಿಬಿರ ನಡೆಸುತ್ತಿರುವುದು ಅಭಿನಂದನೀಯ ಹಾಗೂ ಅನುಕರಣೀಯ. ವಿಶ್ವಾಸ್‌ಕೃಷ್ಣ ಅವರು ನಿಜವಾಗಿಯೂ ಕರ್ನಾಟಕ ಸಂಗೀತದ ‘ವಿಕಾಸಕೃಷ್ಣ’ರೇ ಆಗಿದ್ದಾರೆ’ ಎಂದು ಪ್ರಶಂಸಿಸಿದರು.
‘ನಗರದ ಬೇರೆ ಬೇರೆ ಕಂಪೆನಿಗಳಲ್ಲಿ ಸಂಗೀತದ ಕಾರ್ಯಕ್ರಮಗಳಿಗೆ ಧನ ಸಹಾಯ ಮಾಡುವ ಉತ್ಸಾಹಿಗಳು ಇದ್ದಾರೆ. ಆ ಕಂಪೆನಿಗಳಲ್ಲಿರುವ ಸಾಮಾಜಿಕ ಹೊಣೆಗಾರಿಕಾ ನಿಧಿಗಳನ್ನು (ಸಿಎಸ್‌ಆರ್) ಸಂಗೀತದ ಕಾರ್ಯಕ್ರಮಗಳಿಗಾಗಿ ಬಳಸಿಕೊಳ್ಳುವ ಅವಕಾಶಗಳೂ ಇವೆ. ಆದರೆ ಅಂತಹವರನ್ನು ಸಂಪರ್ಕಿಸಿ ಆ ನಿಧಿಗಳನ್ನು ಬಳಸಿಕೊಳ್ಳುವ ಪ್ರಯತ್ನಗಳು ಮಾತ್ರ ನಡೆಯುತ್ತಿಲ್ಲ, ಕರ್ಣಾಟಕ ಬ್ಯಾಂಕ್ ಈ ನಿಟ್ಟಿನಲ್ಲಿ ನಿರಂತರವಾಗಿ ಸಹಾಯ ಹಸ್ತ ಚಾಚುತ್ತಿರುವುದು ಶ್ಲಾಘನೀಯ. ನಗರದಲ್ಲಿರುವ ಇತರ ಕಂಪೆನಿಗಳನ್ನು ಸಂಪರ್ಕಿಸಿ ಅವರಿಂದ ಆರ್ಥಿಕ ಸಹಾಯ ಪಡೆಯಲು ಪ್ರಯತ್ನಿಸುವುದು ಬಹಳ ಅಗತ್ಯ. ಸಂಗೀತದ ಕಾರ್ಯಕ್ರಮಗಳಿಗೆ ಸಿಎಸ್‌ಆರ್ ನಿಧಿಗಳ ಸದ್ಬಳಕೆ ಆಗಬೇಕಾಗಿದೆ’ ಎಂದು ವಾಸುದೇವ್ ರಾವ್ ಸಲಹೆ ನೀಡಿದರು.
ಎರಡು ವರ್ಷಗಳ ಹಿಂದೆ ದೀಪಾವಳಿ ದಿನದಂದೇ ಈ ವಿಶೇಷ ಅಭ್ಯಾಸ ಶಿಬಿರಕ್ಕೆ ಚಾಲನೆ ನೀಡಲಾಗಿತ್ತು, ಇದೀಗ 25ನೇ ವಿಶೇಷ ಅಭ್ಯಾಸ ಶಿಬಿರ ದೀಪಾವಳಿ ಹಬ್ಬದ ದಿನದಂದೇ ನಡೆದಿರುವುದು ವಿಶೇಷವಾಗಿತ್ತು. ಬೆಳಗ್ಗಿನಿಂದ ಸಂಜೆಯವರೆಗೆ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳು ವಯೊಲಿನ್ ವಿಶೇಷ ಅಭ್ಯಾಸ ನಡೆಸಿದರು. ಬಳಿಕ ನಡೆದ ವಿದ್ವಾನ್ ಪಿ ಮಧೂರು ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ಎಂ.ಆರ್.ವಾಸುದೇವ ನಡೆಸಿಕೊಟ್ಟರು.
ನಂತರ ಮಧೂರು ಬಾಲಸುಬ್ರಹ್ಮಣ್ಯಂ ಅವರಿಂದ ಸಂಗೀತ ಕಛೇರಿ ನಡೆಯಿತು. ವಯೊಲಿನ್‌ನಲ್ಲಿ ವಿಶ್ವಾಸ್‌ಕೃಷ್ಣ ಹಾಗೂ ಮೃದಂಗದಲ್ಲಿ ಮನೋಹರ ರಾವ್ ಸಹಕರಿಸಿದರು.
ರಾಗತರಂಗ ಸಂಸ್ಥೆಯ ಅಧ್ಯಕ್ಷ ಅನಂತಕೃಷ್ಣ ಉಡುಪ, ಮಧುರಧ್ವನಿ ಸಂಸ್ಥೆಯ ರವಿಪ್ರಸಾದ್, ವೆಂಕಟೇಶ್ ಭಟ್, ಸಂಗೀತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…