ಸುಳ್ಯ: ಮಹಾಬಲ ಕಲ್ಮಡ್ಕರು ಎಳೆಯ ವಯಸ್ಸಿನಲ್ಲಿಯೇ ಯಕ್ಷಗಾನ-ನಾಟಕ ಕಲಾವಿದರಾಗಿ, ಕಲಾಕೃತಿಗಳನ್ನು ರಚಿಸಿ, ವಿಶೇಷ ವಿದ್ಯಾರ್ಥಿಯಾಗಿ ಮೂಡಿಬಂದವರು. ವಸ್ತ್ರವಿನ್ಯಾಸ, ಧ್ವನಿ, ನಿರ್ದೇಶನ, ಸಂಗೀತ, ಬೆಳಕು ಪ್ರಸಾದಕರಾಗಿ ಬೆಳೆದು ಸಮಾಜಕ್ಕೆ ಅದನ್ನು ನೀಡಿದ್ದಾರೆ. ಈ ಕುರಿತು ವಿಶೇಷ ಅಧ್ಯಯನ, ಚಿಂತನೆಗಳನ್ನು ನಡೆಸಿ ದೇಶ-ವಿದೇಶದಲ್ಲಿ ಖ್ಯಾತಿಪಡೆದಿದ್ದಾರೆ. ಜತೆಯಲ್ಲಿ ಕಲಾಕೃತಿಯನ್ನು ರಚಿಸಿ ಸಾಕಷ್ಟು ಹೆಸರನ್ನು ಗಳಿಸಿ ಅದನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ನಿವೃತ್ತ ಪ್ರಾಂಶುಪಾಲ ಪದ್ಮನಾಭ ಗೌಡ ಬಿಳಿಮಲೆ ಹೇಳಿದರು.
ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವದ ಅಂಗವಾಗಿ ನಡೆದ ರಂಗಕರ್ಮಿ ಮಹಾಬಲ ಕಲ್ಮಡ್ಕ ಸನ್ಮಾನ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದರು. ಕಲ್ಮಡ್ಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ಹಾಗೂ ರಂಗಕರ್ಮಿ ಮಹಾಬಲ ಕಲ್ಮಡ್ಕರನ್ನು ಕಟೀಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಕಮಲಾದೇವಿಪ್ರಸಾದ್ ಅಸ್ರಣ್ಣ ಸನ್ಮಾನಿಸಿದರು. ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಕೆ.ಕೆ.ನಾರಾಯಣ ಚಳ್ಳಂಗಾರು ಅಧ್ಯಕ್ಷತೆ ವಹಿಸಿದ್ದರು. ಲೇಖಕ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಭಟ್ ಟಿ.ರಾಮಕುಂಜ, ಲೇಖಕ ನಾ.ಕಾರಂತ ಪೆರಾಜೆ, ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ, ಪಂಬೆತ್ತಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಅತಿಥಿಗಳಾಗಿದ್ದರು. ಕಲ್ಮಡ್ಕ ಸಹಕಾರಿ ಸಂಘದ ಅಧ್ಯಕ್ಷ ಉದಯಕುಮಾರ್ ಬೆಟ್ಟ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಜೋಷಿ,ಉಪಸ್ಥಿತರಿದ್ದರು.
ವೆಂಕಟ ಸುಬ್ಬಪಯ್ಯ ಸ್ವಾಗತಿಸಿ, ಸಚಿನ್ ವಂದಿಸಿದರು.ಶಿವರಾಮ ಬಿ. ನಿರೂಪಿಸಿದರು.