ಸುಳ್ಯ: ತ್ರಿಸ್ತರ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖವಾದ ಮತ್ತು ಜನರಿಗೆ ಅತ್ಯಂತ ಹತ್ತಿರವಾದ ವ್ಯವಸ್ಥೆ ಗ್ರಾಮ ಪಂಚಾಯತ್ ಗಳು. ತಮ್ಮ ಅತ್ಯುತ್ತಮ ಆಡಳಿತ ವ್ಯವಸ್ಥೆ ಮತ್ತು ನಿರ್ವಹಣೆಯ ಮೂಲಕ ಸುಳ್ಯ ತಾಲೂಕಿನ ಕಲ್ಮಡ್ಕ ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ಐದು ಗ್ರಾಮ ಪಂಚಾಯತ್ ಗಳು ರಾಜ್ಯ ಸರಕಾರ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿದೆ.
ಸುಳ್ಯ ತಾಲೂಕಿನ ಕಲ್ಮಡ್ಕ, ಪುತ್ತೂರು ತಾಲೂಕಿನ ಕುಟ್ರುಪ್ಪಾಡಿ, ಬೆಳ್ತಂಗಡಿ ತಾಲೂಕಿನ ಮಡಂತ್ಯಾರು, ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಮತ್ತು ಮಂಗಳೂರಿನ ಕಲ್ಲಮುಂಡ್ಕೂರು ಪುರಸ್ಕಾರಕ್ಕೆ ಆಯ್ಕೆಯಾದ ಗ್ರಾಮಗಳು. ಈ ಗ್ರಾಮಗಳಿಗೆ ಐದು ಲಕ್ಷ ರೂ ನಗದು ಪುರಸ್ಕಾರ ದೊರೆಯಲಿದೆ. ಅಕ್ಟೋಬರ್ ಎರಡರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ.
ಮಾನದಂಡ ಏನು..?
ಗ್ರಾಮ ಪಂಚಾಯತ್ ಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಪ್ರಶಸ್ತಿಯನ್ನು ನೀಡುತಿದೆ.
ವಿವಿಧ ಯೋಜನೆಗಳು, ಯೋಜನೆಗಳ ಅನುಷ್ಠಾನದ ಪ್ರಗತಿಯ ಆಧಾರದಲ್ಲಿ ದ.ಕ.ಜಿಲ್ಲಾ ಪಂಚಾಯತ್ ಈ ಗ್ರಾಮಗಳನ್ನು ಪುರಸ್ಕಾರಕ್ಕೆ ಶಿಫಾರಸು ಮಾಡಿದೆ. ಆಡಳಿತಾತ್ಮಕ ಕಾರ್ಯಕ್ಷಮತೆ, ಆವಿಷ್ಕಾರ, ತೆರಿಗೆ ವಸೂಲಿ, ತೆರಿಗೆ ಪರಿಷ್ಕರಣೆ, ಅನುದಾನಗಳ ಸಮರ್ಪಕ ಬಳಕೆ, ಕುಡಿಯುವ ನೀರಿನ ಸರಬರಾಜು, ದಾರಿದೀಪಗಳ ಅಳವಡಿಕೆ ಮತ್ತು ನಿರ್ವಹಣೆ, ವಸತಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಆಡಳಿತದಲ್ಲಿ ತಂತ್ರಜ್ಞಾನ ಬಳಕೆ, ಶೌಚಾಲಯಗಳ ನಿರ್ಮಾಣ, ತ್ಯಾಜ್ಯ ವಿಲೇವಾರಿ, ಯೋಜನೆಗಳ ಜಾರಿ ಹೀಗೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ ಹೇಗೆ..?
ಪಂಚತಂತ್ರ ತಂತ್ರಾಂಶದ ಮೂಲ ವಿವಿಧ ಮಾನದಂಡವನ್ನು ನಿಗದಿಪಡಿಸಿ ರಾಜ್ಯದ ಎಲ್ಲಾ ಗ್ರಾ.ಪಂ.ಗಳಿಂದ ಅರ್ಜಿ ಆಹ್ವಾನಿಸಲಾಗುತ್ತದೆ. ಎಲ್ಲಾ ಪಂಚಾಯಿತಿಗಳು ತಮ್ಮ ಕಾರ್ಯಸಾಧನೆ ಸಂಬಂಧಿಸಿ 150 ಅಂಕಗಳ ಪ್ರಶ್ನೆಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಪಂಚತಂತ್ರದ ತಂತ್ರಾಂಶ ಮೂಲಕ ಉತ್ತರ ನೀಡಲು ಅವಕಾಶ ಕಲ್ಪಿಸಲಾಗುತ್ತದೆ. ಆಯಾ ಗ್ರಾ.ಪಂ.ಗಳು ಗಳಿಸಿದ ಹೆಚ್ಚಿನ ಅಂಕದ ಮೇಲೆ ಪ್ರಥಮ ಹಂತದಲ್ಲಿ ಪ್ರತಿ ತಾಲೂಕಿನಿಂದ ತಲಾ ಐದು ಗ್ರಾಮಗಳನ್ನು ಆಯ್ಕೆ ಮಾಡಲಾಗುತ್ತದೆ. ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಈ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಾಲೂಕಿಗೆ ತಲಾ ಒಂದರಂತೆ ಐದು ಗ್ರಾಮಗಳನ್ನು ಆಯ್ಕೆ ಮಾಡಿ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ.
ಪ್ರಥಮ ಸುತ್ತಿನಲ್ಲಿ 25 ಗ್ರಾಮಗಳು ಆಯ್ಕೆ:
ಸುಳ್ಯ ತಾಲೂಕಿನ ಕಲ್ಮಡ್ಕ, ಕನಕಮಜಲು, ಕಳಂಜ, ಐವರ್ನಾಡು, ಎಡಮಂಗಲ ಗ್ರಾಮಗಳು, ಪುತ್ತೂರು ತಾಲೂಕಿನ ಕುಟ್ರುಪ್ಪಾಡಿ, ನೆಲ್ಯಾಡಿ, ಅರಿಯಡ್ಕ, ಅಲಂಕಾರು, ಗೋಳಿತೊಟ್ಟು. ಬೆಳ್ತಂಗಡಿ ತಾಲೂಕಿನ ಮಡಂತ್ಯಾರು, ಅಂಡಿಂಜೆ, ಕುವೆಟ್ಟು, ಉಜಿರೆ, ನಡ. ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು, ಅಳಕೆ, ಕೊಳ್ನಾಡು, ಇಡ್ಕಿದು, ಅಮ್ಮುಂಜೆ. ಮಂಗಳೂರು ತಾಲೂಕಿನ ಕಲ್ಲಮುಂಡ್ಕೂರು, ಅಡ್ಯಾರು, ಗುರುಪುರ, ಮುನ್ನೂರು, ಪಡು ಪಣಂಬೂರು ಗ್ರಾಮ ಪಂಚಾಯತಿಗಳು ಆಯ್ಕೆಯಾಗಿದ್ದವು. ಗ್ರಾಮ ಪಂಚಾಯತ್ ಗಳು ಮಾದರಿಯಾಗಿ ಬೆಳೆಯಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರವನ್ನು ಸರಕಾರ ನೀಡುತ್ತದೆ. ಗ್ರಾಮದಲ್ಲಿ ಇನ್ನಷ್ಟು ಮೂಲಭೂತ ಅಭಿವೃದ್ಧಿಗೆ ಪುರಸ್ಕಾರ ಮೊತ್ತ ಐದು ಲಕ್ಷವನ್ನು ಬಳಸಿಕೊಳ್ಳಲು ಗ್ರಾ.ಪಂಗಳಿಗೆ ಅವಕಾಶವಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮುಂದ್ರಾ ಬಂದರಿನಲ್ಲಿರುವ ಕಸ್ಟಮ್ಸ್ ವಿಶೇಷ ಗುಪ್ತಚರ ಮತ್ತು…
ದಾವಣಗೆರೆಯ 19 ಕೇಂದ್ರಗಳಲ್ಲಿ ಡಿ. 29 ರಂದು ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸುವ…
ಮೊಬೈಲ್ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿಯು ಜನವರಿ…
ವಿಜಯನಗರ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಖಾಲಿಯಿದ್ದ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕರ…
ಗುತ್ತಿಗಾರಿನ ಯಕ್ಷಕಲಾಭಿಮಾನಿ ಮಿತ್ರರ ವತಿಯಿಂದ ಹನುಮಗಿರಿ ಮೇಳದಿಂದ "ಪಾರಿಜಾತ-ಅಕ್ಷಯಾಂಬರ-ಕುಶಲವ" ಯಕ್ಷಗಾನ ಬಯಲಾಟ ಹಾಗೂ…
ಅಖಿಲ ಹವ್ಯಕ ಮಹಾಸಭೆಗೆ 81 ವರ್ಷಗಳು ತುಂಬಿದ ಸಂಭ್ರಮದಲ್ಲಿ ವಿಶ್ವಹವ್ಯಕ ಸಮ್ಮೇಳನವು ಬೆಂಗಳೂರಿನ…