ಬಂಟ್ವಾಳ: ಪತಂಜಲಿ ಯೋಗ ಪೀಠದ ಅಂತರಾಷ್ಟ್ರೀಯ ಯೋಗಗುರು ಬಾಬಾ ರಾಮ್‍ದೇವ್ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಮತ್ತು ವಿಟ್ಲಪಡ್ನೂರು ಗ್ರಾಮದ ಮೂರುಕಜೆ ಮೈತ್ರೇಯೀ ಗುರುಕುಲಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.
ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಅವರು ಮನುಷ್ಯನ ಜೀವನ ಬೀಜವಿದ್ದಂತೆ. ನಮ್ಮೊಳಗೆ ಒಳ್ಳೆದು ಕೆಟ್ಟದು ಎರಡೂ ಇದೆ. ನಾವು ಜೀವನದಲ್ಲಿ ಉತ್ತಮವಾದ ಬೀಜವನ್ನೇ ಬಿತ್ತಬೇಕು, ಕೆಟ್ಟದ್ದನ್ನು ನಾಶ ಮಾಡಬೇಕು ಅದುವೇ ಜೀವನದ ಪುರುಷಾರ್ಥ ಎಂದು ಹೇಳಿದರು. ನಾವು ಮಾಡುವ ಕೆಲಸವನ್ನು ನಿಷ್ಠೆಯಿಂದ, ಅತ್ಯುತ್ತಮವಾಗಿ ಮಾಡಬೇಕು. ಆಗ ರಾಷ್ಟ್ರ ಮಾತ್ರವಲ್ಲ, ವಿಶ್ವವೇ ನಮಗೆ ಗೌರವ ನೀಡುತ್ತದೆ. ಮನುಷ್ಯ ಜೀವನದಲ್ಲಿ ಕರ್ಮ ಆಧಾರಿತ, ಧರ್ಮ ಆಧಾರಿತ ವ್ಯವಸ್ಥೆಗಳಿವೆ. ಕರ್ಮಾಧಾರಿತದಿಂದ ಕಲಸ ಮಾಡಿದಾಗ ಖುಷಿ ಸಿಗುತ್ತದೆ ಎಂದರು. ದೇಶದಲ್ಲಿ ಸತ್ಯ,ನ್ಯಾಯ ,ರಾಮ ಮಾರ್ಗದಲ್ಲಿ ನಡೆದರೆ ಮಾತ್ರ ಬಲಿಷ್ಠ ದೇಶ ಮತ್ತು ಗೌರವ ಸಮಾಜ ನಿರ್ಮಾಣವಾಗಲಿದೆ ಎಂದ ಅವರು ಭಾರತ ಅತೀ ಶೀಘ್ರದಲ್ಲೇ ವಿಶ್ವಗುರುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ವದೇಶಿ ಅಭಿಯಾನ ಆರಂಭಿಸಲು ಪ್ರೇರಣೆ ಏನು ಎನ್ನುವ ವಿದ್ಯಾರ್ಥಿನಿ ಅಮೃತಳ ಪ್ರಶ್ನೆಗೆ ಉತ್ತರಿಸಿದ ರಾಮ್‍ದೇವ್ ಈ ಹಿಂದೆ 15 ಲಕ್ಷ ಕೋಟಿ ರೂಪಾಯಿ ಹಾಣ ವಿಧೇಶಿ ಕಂಪೆನಿಗಳು ಹೋಗುತ್ತಿತ್ತು. ಭಾರತದ ಸಾಂಸ್ಕೃತಿಕತೆ , ವೈಚಾರಿಕತೆ ಲೂಟಿಯಾಗುತ್ತಿತ್ತು. ಇದನ್ನು ತಡೆಯಲು ಏನಾದರೂ ಮಾಡಬೇಕು ಎಂದು ಕೊಂಡಿದ್ದೆ. ಕೇವಲ 500 ರೂ.ವಿನಲ್ಲಿ ಆರಂಭಗೊಂಡ ಪತಂಜಲಿ ಉತ್ತನ್ನಗಳು ಇಂದು 10 ಸಾವಿರ ಕೋಟಿ ಆದಾಯವನ್ನು ಪಡೆಯುವತ್ತ ಮುಂದುವರೆದಿದೆ ಎಂದರು.
ಈ ಸಂದರ್ಭ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತಮಾಧವ, ಸಹಸಂಚಾಲಕ ರಮೇಶ್, ರಾಷ್ಟ್ರ ಸೇವಿಕಾ ಸಮಿತಿಯ ಡಾ. ಕಮಲಾ ಪ್ರಭಾಕರಭಟ್, ಪತಂಜಲಿ ಯೋಗ ಪೀಠದ ಭವರ್‍ಲಾಲ್ ಆರ್ಯ, ಜಿಲ್ಲಾ ಪ್ರಮುಖರಾದ ರಾಜೆಂದ್ರ, ಸುಜಾತ ಮಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‍ಕಟ್ಟೆ ಸ್ವಾಗತಿಸಿ, ವಂದಿಸಿದರು. ಶಿಶುಮಂದಿರದಿಂದ ಕಾಲೇಜುವರೆಗಿನ ಮಕ್ಕಳ ಚಟುವಟಿಕೆ, ಶಿಸ್ತು ಕಂಡು ಸಂತಸ ವ್ಯಕ್ತಪಡಿಸಿದರು. ಗೋಶಾಲೆಯಲ್ಲಿ ಗೋವಿಗೆ ಬಾಳೆಹಣ್ಣು, ಧವಸಧಾನ್ಯವನ್ನು ನೀಡಿದರು.
ಮೈತ್ರೇಯಿ ಗುರುಕುಲ:
ವಿಟ್ಲ: ಜೀವನ ಪ್ರದರ್ಶನಕ್ಕಾಗಿ ಅಲ್ಲ, ಪ್ರಭುದರ್ಶನಕ್ಕಾಗಿ ಎಂಬ ಭಾವ ನಮ್ಮಲ್ಲಿ ಮೂಡಬೇಕು. ಗುರುಕುಲಗಳು ಸಂಪೂರ್ಣ ಶಿಕ್ಷಣ ನೀಡುವ ವಿಶ್ವವಿದ್ಯಾನಿಲಯ. ಬೌದ್ಧಿಕ ವಿಕಾಸದೊಂದಿಗೆ ಶರೀರ, ಮನಸ್ಸು, ಬುದ್ಧಿ, ಆತ್ಮದ ವಿಕಾಸವಾಗಬೇಕು. ಸಂಸ್ಕೃತ ವ್ಯಾಕರಣದ ಮೂಲ ಗ್ರಂಥ ಅಭ್ಯಸಿಸುವ ಮೂಲಕ ಅಷ್ಟಾಧ್ಯಾಯೀ ಆಗಬೇಕು ಎಂದು ವಿಟ್ಲಪಡ್ನೂರು ಗ್ರಾಮದ ಮೂರುಕಜೆ ಮೈತ್ರೇಯೀ ಗುರುಕುಲಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರ ಜತೆ ಸಂವಾದ ನಡೆಸಿದ ಬಾಬಾ ರಾಮ್‍ದೇವ್ ಹೇಳಿದರು.
ಯೋಗದ ಮೂಲಕ ಶರೀರ ಬಲ ವೃದ್ಧಿ ಮಾಡಲು ಸಾಧ್ಯವಿದೆ. ನಿತ್ಯದ ಚಟುವಟಿಕೆಗಳ ನಡುವೆ ಯೋಗಾಸನಕ್ಕಾಗಿ ಒಂದು ಗಂಟೆಯನ್ನು ಮೀಸಲುಗೊಳಿಸಬೇಕು ತಿಳಿಸಿದರು.
ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ, ಮೈತ್ರೇಯೀ ಗುರುಕುಲದ ಗೌರವಾಧ್ಯಕ್ಷ ಎನ್. ಕುಮಾರ್, ಅಜೇಯ ವಿಶ್ವಸ್ಥ ಮಂಡಳಿ ಸದಸ್ಯ ಪಿ. ರವೀಂದ್ರ, ಸೀತಾರಾಮ ಕೆದಿಲಾಯ ಮತ್ತಿತರರು ಉಪಸ್ಥಿತರಿದ್ದರು. ಮಾತೃಶ್ರೀ ಶೃತಿ ಸ್ವಾಗತಿಸಿ, ನಿರೂಪಿಸಿದರು. ಅನಂತ ಶರ್ಮ ವಂದಿಸಿದರು. ಸಿಂಚನ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಬಾಬಾ ರಾಮ್ ದೇವ್ ಅವರು ಆಗಮಿಸುತ್ತಿದ್ದಂತೆ ಅವರಿಗೆ ವೇದ ಘೋಷಗಳ ಜತೆಗೆ ಪೂರ್ಣಕುಂಬ ಸ್ವಾಗತವನ್ನು ನೀಡಲಾಯಿತು.