ಪುತ್ತೂರು: ನಮ್ಮ ಸುತ್ತಮುತ್ತಲಿನ ಪರಿಸರವು ಸ್ವಚ್ಚ ಹಾಗೂ ಸ್ವಸ್ಥವಾಗಿರಬೇಕೆಂಬುದು ಪ್ರತಿಯೊಬ್ಬರ ಆಶಯ. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ಯೋಜನಾರಹಿತವಾಗಿ ಗೊತ್ತುಗುರಿಯಿಲ್ಲದೆ ಬೆಳೆಯುತ್ತಿರುವ ಪಟ್ಟಣಗಳಿಂದಾಗಿ ಟನ್‍ಗಟ್ಟಲೆ ತ್ಯಾಜ್ಯಗಳು ಸಂಗ್ರಹಿಸಲ್ಪಡುತ್ತವೆ. ಇದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಏನೇ ಹೊಸ ಹೊಸ ಆವಿಷ್ಕಾರಗಳು ಸಾಧನಗಳು ಬಳಕೆಗೆ ಬಂದರೂ ಸ್ವಚ್ಚತೆ ಮರೀಚಿಕೆಯಾಗಿದೆ. ಹಾಗಾಗಿ ಇದರ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಲೇ ಇವೆ.
ಮಾಹಿತಿಗಳ ಪ್ರಕಾರ ದೇಶದಲ್ಲಿ ವಾರ್ಷಿಕ 62 ಸಾವಿರ ಮಿಲಿಯ ಟನ್ ತ್ಯಾಜ್ಯವು ಉತ್ಪಾದನೆಯಾಗುತ್ತದೆ. ಇದರಲ್ಲಿ ಮರುಬಳಕೆಗೆ ಯೋಗ್ಯವಾದ ತ್ಯಾಜ್ಯಗಳೂ ಒಳಗೊಂಡಿವೆ. ಇವನ್ನು ಸರಿಯಾಗಿ ನಿರ್ವಹಿಸದೆ ಎಲ್ಲೆಂದರಲ್ಲಿ ಬಿಸಾಕುವ ಪ್ರವೃತ್ತಿ ವ್ಯಾಪಕವಾಗಿದೆ. ಇದರಿಂದಾಗಿ ಪರಿಸರ ಮಾಲಿನ್ಯ, ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ಈ ಕಸವನ್ನು ನಿರ್ವಹಿಸುವ ಮತ್ತು ಸಂಸ್ಕರಿಸುವ ಆವಶ್ಯಕತೆ ಹೆಚ್ಚಾಗಿದೆ. ಪ್ರಜ್ಞಾವಂತರು ಮಾಡುವ ಅವಾಂತರಗಳಿಂದ ಕಸವನ್ನು ವಿಂಗಡಿಸುವುದೇ ತಲೆನೋವಾಗಿ ಪರಿಣಮಿಸಿದೆ.
ಈ ನಿಟ್ಟಿನಲ್ಲಿ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳು ಕಸ ವಿಂಗಡಣೆಗೆ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಅಟೋಮೇಟೆಡ್ ವೇಸ್ಟ್ ಸೆಗ್ರಿಗೇಶನ್ ಎಂಡ್ ಮಾನಿಟರಿಂಗ್ ಸಿಸ್ಟಮ್ ಎನ್ನುವ ಈ ಯಂತ್ರವನ್ನು ಅಪಾರ್ಟ್‍ಮೆಂಟ್‍ಗಳು ಅಥವಾ ಸಣ್ಣ ಸಣ್ಣ ಕಾಲನಿಗಳಲ್ಲಿ ಸ್ಥಾಪಿಸುವುದರಿಂದ ಕಸವನ್ನು ವ್ಯವಸ್ಥಿತವಾಗಿ ವಿಂಗಡಿಸಬಹುದು.
ಈ ಯಂತ್ರವು ಕಸ ಹಾಕುವ ತೊಟ್ಟಿ, ಕನ್ವೇಯರ್ ಬೆಲ್ಟ್, ಡಿಟೆಕ್ಟರ್ ವಿಭಾಗ ಹಾಗೂ ಮೂರು ಕಸ ಸಂಗ್ರಹಣಾ ವಿಭಾಗವನ್ನು ಹೊಂದಿದೆ. ತೊಟ್ಟಿಯಲ್ಲಿ ಸಂಗ್ರಹವಾಗುವ ಕಸವು ಕನ್ವೇಯರ್ ಬೆಲ್ಟ್ ಮುಖಾಂತರ ಡಿಟೆಕ್ಟರ್ ವಿಭಾಗಕ್ಕೆ ಬರುತ್ತದೆ. ಮೊದಲಿಗೆ ಇಂಡಕ್ಟಿವ್ ಪ್ರಾಕ್ಸಿಮಿಟಿ ಸೆನ್ಸರ್ ಮೂಲಕ ಅದು ಲೋಹವೇ ಎಂದು ಪರಿಶೀಲಿಸಲ್ಪಡುತ್ತದೆ. ಲೋಹವೆಂದಾದರೆ ಅದಕ್ಕೆಂದೇ ಇರುವ ಸಂಗ್ರಹ ವಿಭಾಗಕ್ಕೆ ತಳ್ಳಲ್ಪಡುತ್ತದೆ. ಅಲ್ಲವಾದಲ್ಲಿ ಅದು ಮುಂದುವರಿದು ಲೇಸರ್ ಹಾಗೂ ಎಲ್‍ಡಿಆರ್ ಸೆನ್ಸರ್ ಮೂಲಕ ಘನ ತ್ಯಾಜ್ಯವೇ ಎಂದು ಪರೀಕ್ಷಿಸಲ್ಪಡುತ್ತದೆ. ಇಲ್ಲಿ ಕಾಗದ ಮತ್ತು ಮರದ ವಸ್ತುಗಳು ವಿಭಾಗಿಸಲ್ಪಟ್ಟು ಅದರ ತೊಟ್ಟಿಯಲ್ಲಿ ಬಂದು ಬೀಳುತ್ತವೆ. ಅದು ಅಲ್ಲವೆಂದಾದಲ್ಲಿ ಪ್ಲಾಸ್ಟಿಕ್ ಎಂದು ಪರಿಶೀಲಿಸಲ್ಪಟ್ಟು ಅದರ ಸಂಗ್ರಹಣಾಗಾರಕ್ಕೆ ಬರುತ್ತದೆ. ಪ್ರತಿ ಸಂಗ್ರಹಣಾ ತೊಟ್ಟಿಗೂ ಸೆನ್ಸರ್‍ಗಳನ್ನು ಅಳವಡಿಸಲಾಗಿದ್ದು, ಅದು ತುಂಬಿದ ತಕ್ಷಣ ಮಹಿತಿಯನ್ನು ನೀಡುತ್ತದೆ.
ಪಠ್ಯಕ್ರಮಕ್ಕೆ ಅನುಗುಣವಾಗಿ ಚಿಕ್ಕ ಮಾದರಿಯನ್ನು ಇಲ್ಲಿ ನಿರ್ಮಿಸಲಾಗಿದ್ದು, ಇದೇ ತಂತ್ರಜ್ಞಾನದಿಂದ ದೊಡ್ಡ ಯಂತ್ರಗಳನ್ನು ನಿರ್ಮಿಸಿದರೆ ಕಸ ವಿಂಗಡೆಗೆ ಇದು ಸಹಕಾರಿಯಾಗುತ್ತದೆ ಎಂಬುದು ವಿದ್ಯಾರ್ಥಿಗಳ ಅಭಿಮತ.
ಇಲೆಕ್ಟ್ರಾನಿಕ್ಸ್ ವಿಭಾಗ ಮುಖ್ಯಸ್ಥ ಪ್ರೊ .ಶ್ರೀಕಾಂತ್ ರಾವ್ ಅವರ ಸಲಹೆಗಳ ಮೇರೆಗೆ ಸಹಾಯಕ ಪ್ರಾಧ್ಯಾಪಕ ಪ್ರೊ.ಗುರುಸಂದೇಶ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಶಾಶ್ವತ್.ಎನ್.ಜಿ, ಶೈಲೇಶ್ ಕುಮಾರ್.ಜಿ, ಶೈನಿತಾ.ಯು.ಎಂ ಮತ್ತು ಸಾನಿಯಾ ತಾಜ್ ಇದನ್ನು ನಿರ್ಮಿಸಿದ್ದಾರೆ.
ಕೇಂದ್ರ ಬಜೆಟ್ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…
ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…