ಸುಳ್ಯ: ಕಾಂಗ್ರೆಸ್ ಸಭೆಗೆ ತೆರಳಿ ಕಾಂಗ್ರೆಸ್ ಸಭೆಯನ್ನು ಅಡ್ಡಿಪಡಿಸುವ ಉದ್ದೇಶ ಇರಲಿಲ್ಲ ಎಂದು ನಗರ ಪಂಚಾಯತ್ ಪಕ್ಷೇತರ ಸದಸ್ಯ ರಿಯಾಝ್ ಕಟ್ಟೆಕ್ಕಾರ್ ತಿಳಿಸಿದ್ದಾರೆ.
ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಗೆ ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಮಂಗಳವಾರ ಸುಳ್ಯಕ್ಕೆ ಭೇಟಿ ನೀಡಿದರು. ಸಭೆಯ ಬಳಿಕ ಬೂಡು ವಾರ್ಡಿನ ಅಂಗನವಾಡಿಯ ತಡೆಗೋಡೆ ನಿರ್ಮಾಣದ ವಿಚಾರವಾಗಿ ಐವನ್ ಡಿಸೋಜಾ ಅವರನ್ನು ಬೂಡು ವಾರ್ಡಿಗೆ ಕರೆದುಕೊಂಡು ಹೋಗಲು ಯತ್ನಿಸಿದ್ದೆ. ಈ ವೇಳೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಐವನ್ ಡಿಸೋಜಾ ಅವರು ನನ್ನ ವಾರ್ಡಿಗೆ ಬರುವುದನ್ನು ತಡೆದರು. ನಂತರ ಐವನ್ ಡಿಸೋಜಾ ಅವರು ಪೂರ್ವ ನಿಗದಿಯಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ತೆರಳಿದ್ದರು.
ಸಭೆ ನಡೆಯುತ್ತಿದ್ದಾಗ ನಾನು ಐವನ್ ಡಿಸೋಜಾ ಅವರನ್ನು ನನ್ನ ವಾರ್ಡ್ ಗೆ ಕರೆದುಕೊಂಡು ಹೋಗಲು ನಿಂತಿದ್ದೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಚಕಮಕಿ ನಡೆದು ಸಭೆ ಅರ್ಧಕ್ಕೆ ಮೊಟಕುಗೊಂಡಿತು. ನನಗೆ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಅಡ್ಡಿಪಡಿಸುವ ಯಾವುದೇ ಉದ್ದೇಶವಿರಲಿಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.