ಮಡಿಕೇರಿ :ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಮತ್ತು ಅಂತರ್ಜಲವನ್ನು ಸಂರಕ್ಷಿಸಿಕೊಳ್ಳುವ ಶಕ್ತಿಯ ಕೊರತೆ ಭೂಮಿಯಲ್ಲಿ ಕಂಡು ಬರುತ್ತಿದೆ. ಇದೇ ಕಾರಣಕ್ಕೆ ಪ್ರವಾಹ ಅಥವಾ ಬರಗಾಲ ಸೃಷ್ಟಿಯಾಗಿ ಮಾನವ ಕುಲ ಕಷ್ಟ, ನಷ್ಟಗಳನ್ನು ಅನುಭವಿಸುತ್ತಿದೆ. ಗಿಡ ಮರಗಳನ್ನು ನೆಡುವ ಮೂಲಕ ಇಂತಹ ಅನಾಹುತಗಳನ್ನು ಶಾಶ್ವತವಾಗಿ ತಪ್ಪಿಸಬಹುದಾಗಿದೆ ಎಂದು ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅಭಿಪ್ರಾಯಪಟ್ಟಿದ್ದಾರೆ.
ಅರಣ್ಯ ಕೃಷಿಗೆ ಸ್ಫೂರ್ತಿ ನೀಡುವ “ಕಾವೇರಿ ಕೂಗು” ಅಭಿಯಾನಕ್ಕೆ ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಸದ್ಗುರು ಮಾತನಾಡಿದರು.
“ಕಾವೇರಿ ಕೂಗು” ಅಭಿಯಾನ ತಲಕಾವೇರಿಯಿಂದ ತಮಿಳುನಾಡಿನ ಪೂಂಪ್‍ಹಾರ್ ವರೆಗೆ ಬೈಕ್ ರ್ಯಾಲಿ ಮೂಲಕ ಸಾಗಲಿದ್ದು, ಸಾರ್ವಜನಿಕರಿಗೆ ಹಾಗೂ ರೈತರಿಗೆ ಗಿಡ, ಮರ ಬೆಳೆಸುವ ಅರಿವು ಮೂಡಿಸಲಾಗುತ್ತಿದೆ ಎಂದು ಸದ್ಗುರು ಹೇಳಿದರು.
ಈ ಸಂದರ್ಭ ಹಾಜರಿದ್ದ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕಾವೇರಿ ನದಿ ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಸದ್ಗುರುಗಳು ಇದಕ್ಕೆ ಪೂರಕವಾಗಿ ಹಮ್ಮಿಕೊಂಡಿರುವ ಅಭಿಯಾನಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಶಾಸಕ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ಬಗ್ಗೆ ನೈಜ ಕಾಳಜಿ ಹೊಂದಿರುವ ಜನರಿದ್ದಾರೆ. ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಜನರ ಸಂಕಷ್ಟಗಳಿಗೆ ಎಲ್ಲರೂ ಸಹಕರಿಸುವ ಅಗತ್ಯವಿದೆ ಎಂದರು.
ಚಲನಚಿತ್ರ ನಟರಾದ ರಕ್ಷಿತ್ ಶೆಟ್ಟಿ, ದಿಗಂತ್, ಬಿಗ್‍ಬಾಸ್ ವಿಜೇತ ಶಶಿ ಬೈಕ್ ಜಾಥಾಗೆ ಸಾಥ್ ನೀಡುವುದರೊಂದಿಗೆ ಒಟ್ಟು 25 ಜನರ ತಂಡ ತಲಕಾವೇರಿಯಿಂದ ಭಾಗಮಂಡಲ ಮೂಲಕ ಮಡಿಕೇರಿ ಕಡೆಗೆ ತೆರಳಿತು. ಸದ್ಗುರುಗಳು ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ನಂತರ ತಮ್ಮ ತಂಡದೊಂದಿಗೆ ಬೈಕ್ ಜಾಥಾದಲ್ಲಿ ತೆರಳಿದರು. ಕ್ಷೇತ್ರದ ಅರ್ಚಕರಾದ ನಾರಾಯಣ ಆಚಾರ್, ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಸ್ಥಳೀಯ ಪ್ರಮುಖರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಸದ್ಗುರು ಜಗ್ಗಿ ವಾಸುದೇವ್ ಮತ್ತು ತಂಡವನ್ನು ಬರಮಾಡಿಕೊಂಡು ಅಭಿಯಾನಕ್ಕೆ ಶುಭ ಹಾರೈಸಿದರು.