ಕೊಡಗಿನ ಪ್ರಮುಖ ನದಿ ಸಂರಕ್ಷಣೆಯತ್ತ ಈಗ ಚಿತ್ತ ಹರಿದಿದೆ. ‘ಕಾವೇರಿ ಕೂಗು’ ಎಂಬ ಆಂದೋಲನ ನಡೆಯಲಿದ್ದು, ಇದಕ್ಕಾಗಿ ಈಶ ಫೌಂಡೇಶನ್‍ನ ಸಂಸ್ಥಾಪಕ ಹಾಗೂ ಚಿಂತಕ ಜಗ್ಗಿ ವಾಸುದೇವ್ ಆಗಮಿಸುವರು. ಕಾವೇರಿ ನದಿ ಸ್ವಚ್ಛವಾಗಬೇಕು ಎಂಬ ಹಿನ್ನೆಲೆಯಲ್ಲಿ ಈ ಆಂದೋಲನ.ಈ ಅಭಿಯಾನದ ಮೂಲಕ ನದಿಯ ಅಚ್ಚುಕಟ್ಟು ಪಾತ್ರದಲ್ಲಿ 242 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಈ ಕಡೆಗೆ ಫೋಕಸ್…
ನದಿ ರಕ್ಷಣೆಯ ಆಂದೋಲನದ ರೀತಿಯಲ್ಲೇ ಕಾವೇರಿ ನದಿಯನ್ನು ಸಂರಕ್ಷಿಸುವ ‘ಕಾವೇರಿ ಕೂಗು’ ಆಂದೋಲನಕ್ಕೆ ಕೊಯಮತ್ತೂರು ಈಶ ಫೌಂಡೇಶನ್‍ನ ಸಂಸ್ಥಾಪಕ ಹಾಗೂ ಚಿಂತಕ ಜಗ್ಗಿ ವಾಸುದೇವ್ ಅವರ ಉಪಸ್ಥಿತಿಯಲ್ಲಿ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ ಸೆ. 3 ರಂದು ತಲಕಾವೇರಿಯಲ್ಲಿ ಚಾಲನೆ ನೀಡಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ತಲಕಾವೇರಿಯಲ್ಲಿ ಬೈಕ್ ರಾಲಿಗೆ ಹಸಿರು ನಿಶಾನೆ ತೋರುವ ಮೂಲಕ ಸದ್ಗುರು ಅವರು ತಾವೇ ಬೈಕ್ ಚಲಾಯಿಸಲಿದ್ದಾರೆ. ಅವರ ಜೊತೆಯಲ್ಲಿ ಸುಮಾರು 25 ಮಂದಿಯ ಬೈಕ್ ತಂಡ ತಲಕಾವೇರಿಯಿಂದ ಪೂಂಪುಹಾರ್‍ವರೆಗೆ ಪ್ರಯಾಣ ಬೆಳಸಲಿದ್ದಾರೆ.
ಕಳೆದ 50 ವರ್ಷಗಳಲ್ಲಿ ಕಾವೇರಿ ನದಿ ಶೇ.40 ರಷ್ಟು ಪ್ರಮಾಣದಲ್ಲಿ ನೀರನ್ನು ಕಳೆದುಕೊಂಡಿದ್ದು, ನದಿ ನಾಶವಾಗದಂತೆ ತಡೆಯಲು ಕಾವೇರಿ ಪ್ರದೇಶಗಳಲ್ಲಿ ರೈತರು ಮರಗಳನ್ನು ನೆಡುವಂತೆ ಪ್ರೇರಿಪಿಸಲು ‘ಕಾವೇರಿ ಕೂಗು’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ರೈತರ ಜಮೀನಿನಲ್ಲಿ ಹೆಚ್ಚು ಮರಗಳನ್ನು ನೆಟ್ಟರೆ ವರ್ಷವಿಡೀ ಕಾವೇರಿಯ ಪ್ರಮಾಣದಲ್ಲಿ ಏರುಪೇರಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿದೆ. ಈಗಾಗಲೇ 70 ಸಾವಿರ ರೈತರು ತಮಿಳುನಾಡಿನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು, ಇದೇ ತಾ. 5 ರಂದು ಮೈಸೂರಿನಲ್ಲಿ ಅಭಿಯಾನದ ರೈತ ಸಂಪರ್ಕ ಕಾರ್ಯಕ್ರಮ ಆರಂಭಗೊಂಡಿದೆ. ಸೆ. 3 ರಂದು ತಲಕಾವೇರಿಯಲ್ಲಿ ಆರಂಭಗೊಳ್ಳಲಿರುವ ಬೈಕ್ ರಾಲಿ 3 ತಿಂಗಳವರೆಗೆ ರೈತ ಜಾಗೃತಿ ಕಾರ್ಯಕ್ರಮ ನಡೆಸಲಿದೆ.
ಕಾವೇರಿ ನದಿ ಪಾತ್ರದಲ್ಲಿ 242 ಕೋಟಿ ಸಸಿಗಳನ್ನು ನೆಟ್ಟರೆ ಸುಮಾರು 10 ವರ್ಷದಲ್ಲಿ ಕಾವೇರಿ ನದಿ ನೀರಿನ ಹರಿವಿನ ಪ್ರಮಾಣ ಶೇ.50ರಷ್ಟು ಹೆಚ್ಚಾಗಲಿದೆ. ಆಗ ಕಾವೇರಿ ನದಿ ವ್ಯಾಜ್ಯವೂ ದೂರವಾಗುತ್ತದೆ ಎಂದು ಸದ್ಗುರು ಹೇಳುತ್ತಾರೆ. ಮೊದಲಿಗೆ ಯವತ್ಮಾಲ್ ಜಿಲ್ಲೆಯ ವಘಾರಿ ನದಿಯ ಪುನಃಶ್ಚೇತನ ಕೈಗೊತ್ತಿಕೊಳ್ಳಲಾಗಿತ್ತು. ಇದೀಗ ಕಾವೇರಿ ನದಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ನದಿ ಪಾತ್ರದಲ್ಲಿನ ಕೃಷಿ ಭೂಮಿಯಲ್ಲಿ ಅರಣ್ಯ ಬೆಳೆಸುವುದು, ಆ ಬಗ್ಗೆ ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶ ಎಂದು ಜಗ್ಗಿ ವಾಸುದೇಚ್ ಹೇಳುತ್ತಾರೆ.’ಕಾವೇರಿ ನದಿ ಪಾತ್ರದ 85ಸಾವಿರ ಚದರ ಕಿ.ಮೀಗಳಲ್ಲಿ ನೂರು ತಾಲೂಕುಗಳಲ್ಲಿ ಒಳಗೊಂಡಂತೆ ಸಸಿ ನಡೆಲಾಗುವುದು.ರೈತರಿಗೆ ಉಚಿತವಾಗಿ ಸಸಿಗಳನ್ನು ನೀಡಲಾಗುವುದು. ಅಭಿಯಾನದಲ್ಲಿ ಸ್ವಯಂ ಸೇವಕರು(ನದಿವೀರರು) ಪಾಲ್ಗೊಳ್ಳಲಿದ್ದಾರೆ. ಸರಕಾರಗಳಿಂದ ರೈತರಿಗೆ 3-4 ವರ್ಷಗಳವರೆಗೆ ಸಬ್ಸಿಡಿ ಕೊಡಿಸಲಾಗುವುದು, ಆ ನಂತರ ಆ ಮರಗಳಿಂದಲೇ ರೈತರಿಗೆ ಹೆಚ್ಚಿನ ಆದಾಯ ಬರಲಿದೆ ಎನ್ನುವುದು ಅಭಿಯಾನದಲ್ಲಿ ರೈತರಿಗೆ ತಿಳಿಸಲಾಗುತ್ತದೆ ಎನ್ನುತ್ತಾರೆ ಜಗ್ಗಿ ವಾಸುದೇವ್.ಕಾವೇರಿ ನದಿ ನೀರಿನ ಪ್ರಮಾಣ ಶೇ.46ರಷ್ಟು ತಗ್ಗಿದೆ. ಪ್ರತಿವರ್ಷ 7ರಿಂದ 8 ಕಿಲೋಮೀಟರ್ ನದಿ ಒಣಗುತ್ತಿದೆ. ಕಾವೇರಿ ಕೂಗು ಅಭಿಯಾನದಿಂದ ನದಿಯನ್ನು ರಕ್ಷಿಸುವ ಜೊತೆಗೆ ಮಣ್ಣಿನ ಫಲವತ್ತತೆ ಹೆಚ್ಚಲಿದೆ.ಇದರಿಂದ ಉತ್ತಮ ಇಳುವರಿ ಪಡೆಯಬಹುದಾಗಿದೆ’ ಎಂದು ಅವರು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಮಡಿಕೇರಿಯಲ್ಲಿ ಸಾರ್ವಜನಿಕ ಸಭೆ:ಸೆ. 3 ರಂದು ತಲಕಾವೇರಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಧ್ಯಾಹ್ನ 3.30 ಗಂಟೆಗೆ ಮಡಿಕೇರಿಯ ಕ್ರಿಸ್ಟಲ್ ಹಾಲ್‍ನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.