ನೆಟ್ಟಣ : ಕಿದು ಸುರಕ್ಷಿತಾರಣ್ಯದಲ್ಲಿ ಸಂಶೋಧನಾ ಉದ್ದೇಶಕ್ಕಾಗಿ ಗೇಣಿ ನೆಲೆಯಲ್ಲಿ ನೀಡಿದ 121 ಹೆಕ್ಟೇರ್ ಪ್ರದೇಶವನ್ನು ನವೀಕರಿಸಿ ಮೊತ್ತ ಪಾವತಿ ಮಾಡಬೇಕಿದ್ದು ಅದು ಪಾವತಿಯಾಗದ ಕಾರಣ ಈಗ ಒಟ್ಟು 19.26 ಕೋಟಿ ರೂಪಾಯಿಯನ್ನು 10 ದಿನಗಳೊಳಗಾಗಿ ಪಾವತಿ ಮಾಡದೇ ಇದ್ದರೆ ಭೂಮಿಯನ್ನು ಹಿಂಪಡೆಯಲು ಕ್ರಮ ಕೈಗೊಳ್ಳಲಾಗುವುದು…! ಈ ಅಂಶ ಒಳಗೊಂಡ ನೋಟೀಸ್ ಅರಣ್ಯ ಇಲಾಖೆ ನೆಟ್ಟಣದ ಕಿದು ಸಿ ಪಿ ಸಿ ಆರ್ ಐ ಕೇಂದ್ರದ ಕೇಂದ್ರ ಕಚೇರಿ ಕಾಸರಗೋಡಿಗೆ ನೀಡಿದೆ. ಈಗ ಮತ್ತೆ ಕೃಷಿಕರಿಗೇ ನಷ್ಟವಾಗುವ ಸೂಚನೆ ಇದೆ.
ಸುಮಾರು ಒಂದು ವರ್ಷದ ಹಿಂದೆ ಕಿದು ಕೇಂದ್ರೀಯ ತೋಟಗಾರಿಕೆ ಬೆಳೆಗಳ ಸಂಶೋಧನ ಕೇಂದ್ರ ಉಳಿಸಿ ಎಂದು ಕೃಷಿಕರು ಹೋರಾಟ ಮಾಡಿದ್ದರು. ಶಾಸಕರು, ಸಂಸದರು, ಕೇಂದ್ರ ಸಚಿವರು, ಉಸ್ತುವಾರಿ ಸಚಿವರೂ ಸೇರಿದಂತೆ ಎಲ್ಲರಿಗೂ ಮನವಿ ಮಾಡಿದ್ದರು. ಎಲ್ಲಾ ಜನಪ್ರತಿನಿಧಿಗಳೂ ಸೂಕ್ತವಾಗಿ ಸ್ಪಂದನೆ ಮಾಡಿದ್ದರು. ಕೇಂದ್ರ ಸಚಿವರ ಜೊತೆಗೂ ಮಾತನಾಡಿದ್ದರು. ಎಲ್ಲವೂ ಓಕೆ ಎಂದು ಕೃಷಿಕರು ನೆಮ್ಮದಿಯಿಂದ ಇದ್ದರು. ಇದೀಗ ಮೇ ತಿಂಗಳಲ್ಲಿ ತಯಾರಾದ ನೋಟೀಸ್ ಈಗ ಮತ್ತೆ ಸಿ ಪಿ ಸಿ ಆರ್ ಐ ತಲಪಿದೆ. ಹೀಗಾಗಿ ಮತ್ತೆ ಕೃಷಿಕರು ಎಚ್ಚೆತ್ತುಕೊಳ್ಳಬೇಕಾಗಿದೆ. ಸಿ ಪಿ ಸಿ ಆರ್ ಐ ಅಧಿಕಾರಿಗಳು ಏಕೆ ಈ ಬಗ್ಗೆ ಆಸಕ್ತಿ ತೆಗೆದುಕೊಳ್ಳುತ್ತಿಲ್ಲ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಲೀಸ್ ಅವಧಿ 2000ನೇ ಇಸವಿಗೆ ಮುಗಿದಿದ್ದರೂ ನವೀಕರಣಕ್ಕೆ ಅಧಿಕಾರಿಗಳು ಉತ್ಸಾಹ ತೋರಿಲ್ಲ. ಆದರೆ ಈ ಹಿಂದೆ ಕೃಷಿಕರು ಕಿದು ಉಳಿಸಿ ಎಂಬ ಹೋರಾಟ ಆರಂಭ ಮಾಡಿದಾಗ ಆಗ ಇದ್ದ ನಿರ್ದೇಶಕ ಚೌಡಪ್ಪ ಅವರು ಕೃಷಿ ಮೇಳವನ್ನು ಕಿದುವಿನಲ್ಲಿ ಮಾಡಿದ್ದರು. ಇದಕ್ಕೆ ಸಚಿವ ಡಿ.ವಿ.ಸದಾನಂದ ಗೌಡ ಅವರೂ ಬಂದಿದ್ದರು. ಕಿದು ಉಳಿಸುವುದಾಗಿ ಭರವಸೆಯನ್ನೂ ನೀಡಿದ್ದರು. ಅದಾದ ಬಳಿಕ ಅಧಿಕಾರಿಗಳ ಫಾಲೋಅಪ್ ಕಾರಣದಿಂದ ಪ್ರಕ್ರಿಯೆ ತಡವಾಯಿತೇ ಎಂಬ ಪ್ರಶ್ನೆಯೂ ಇದೆ. ಈ ಹಿಂದೆಯೇ ಕಿದು ಸಿಪಿಸಿಆರ್‌ಐ ಕೇಂದ್ರ ಪ್ರಾದೇಶಿಕ ಕೇಂದ್ರವಾಗಿ ಮೇಲ್ದರ್ಜೆಗೇರುವ ಎಲ್ಲ ಅರ್ಹತೆಗಳನ್ನು ಹೊಂದಿದ್ದರೂ ಉನ್ನತ ಮಟ್ಟ ಅಧಿಕಾರಿಗಳ ಅಸಡ್ಡೆಯಿಂದ ಅದು ಮುಚ್ಚುವ ಹಂತಕ್ಕೆ ತಲುಪಿದೆ ಎಂದು ಕೃಷಿಕರು ದೂರಿದ್ದರು. ಈಗ ಅದಕ್ಕೆ ಈ ಅಂಶವೂ ಪುಷ್ಟಿ ನೀಡಿದೆ. ಏಕೆಂದರೆ ಕಿದು ಕೇಂದ್ರದಲ್ಲಿ 30 ಸಿಬಂದಿ ಮಾತ್ರವೇ ಇದ್ದಾರೆ. ನಿವೃತ್ತರಾದ ಅಧಿಕಾರಿಗಳ ಹುದ್ದೆಗಳಿಗೆ ಮರುನೇಮಕ ಆಗಿಲ್ಲ. ಕಾಸರಗೋಡು ಸಿಪಿಸಿಆರ್‌ಐನಲ್ಲಿ 60 ವಿಜ್ಞಾನಿಗಳಿದ್ದಾರೆ. ಇಲ್ಲಿಗೆ ಮಾತ್ರಾ ನೇಮಕ ಮಾಡದೇ ಇರುವುದೂ ಅದೇ ಉದ್ದೇಶವೇ ಎಂಬ ಸಂದೇಹ ಇದೆ.
1972 ರಲ್ಲಿ ಸ್ಥಾಪಿತವಾದ ಕಿದು ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ನ ಸಂಶೋಧನಾ ಕೇಂದ್ರವು ವಿಶ್ವದಲ್ಲೇ ಅತಿದೊಡ್ಡ ತೆಂಗು ಆನುವಂಶಿಕ ಸಂಪನ್ಮೂಲ ಕೇಂದ್ರವಾಗಿದೆ . ವಿಶ್ವದ ಕೆಲವೇ ಕೆಲವು ತೆಂಗು ವಂಶಾಭಿವೃದ್ಧಿ ಬ್ಯಾಂಕ್ ಗಳಲ್ಲಿ ಒಂದಾಗಿರುವ ಕಿದು ಕೇಂದ್ರೀಯ ತೋಟಗಾರಿಕೆ ಬೆಳೆಗಳ ಸಂಶೋಧನ ಕೇಂದ್ರ ರಾಜ್ಯದಲ್ಲಿ ಇರುವುದು ಇನ್ನೊಂದು ಹೆಮ್ಮೆ. ಕೆಲವು ವರ್ಷದ ಹಿಂದೆ ಇದೇ ಕೇಂದ್ರಕ್ಕೆ ವಿದೇಶದ ತಂಡವೂ ಭೇಟಿ ನೀಡಿತ್ತು. ಇಲ್ಲಿ ವಾರ್ಷಿಕ 1.2 ಕೋಟಿ ರೂ. ಲಾಭಗಳಿಸುತ್ತಿದ್ದು ಈಗ ಇರುವ ಭೂಮಿಯನ್ನು ಅರಣ್ಯ ಇಲಾಖೆಯಿಂದ 30 ವರ್ಷಗಳ ಅವಧಿಗೆ ಲೀಸ್‌ಗೆ ಪಡೆದು, ಅಡಿಕೆ, ತೆಂಗು ಮತ್ತು ಕೊಕ್ಕೋ ಗಿಡ ಬೆಳೆಸಿ, ಸಂಶೋಧನೆ ಮಾಡಲಾಗುತ್ತಿದೆ. ಸಂಶೋಧನಾ ಕೇಂದ್ರವು ಕಳೆದ ಐದು ವರ್ಷಗಳಲ್ಲಿ ತೆಂಗು, ಅಡಿಕೆ ಮತ್ತು ಕೊಕೊಗಳ ಸುಮಾರು 25 ಲಕ್ಷ ಬೀಜ ಬೀಜಗಳು , ಸುಧಾರಿತ ಪ್ರಭೇದಗಳು ಮತ್ತು ಪೋಷಕ ರೇಖೆಗಳ ಗುಣಮಟ್ಟದ ಗಿಡಗಳನ್ನು ಉತ್ಪಾದಿಸಿದೆ.
ಕಳೆದ ವರ್ಷವೇ ಮನವಿ :
ಕಾಸರಗೋಡು ಸಿ.ಪಿ.ಸಿ.ಆರ್.ಐ ಮತ್ತು ಸಿ.ಪಿ.ಸಿ.ಆರ್.ಐ ರಿಸರ್ಚ್ ಸೆಂಟರ್ ಕಿದು ಗುತ್ತಿಗೆ ಒಪ್ಪಂದವನ್ನು ನವೀಕರಿಸಲು ಕಳೆದ ವರ್ಷ ಕೇಂದ್ರ ಸಚಿವ ಸದಾನಂದ ಗೌಡ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಕಾಸರಗೋಡು ಸಿ.ಪಿ.ಸಿ.ಆರ್.ಐನ ಆಗಿನ ನಿರ್ದೇಶಕ ಡಾ.ಪಿ.ಚೌಡಪ್ಪ ಅವರೊಂದಿಗೆ ಅಂದಿನ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರಾದ ಡಾ. ಹರ್ಷವರ್ಧನ್ ಅವರನ್ನು ಭೇಟಿ ಮಾಡಿ ಕಾಸರಗೋಡು ಸಿ.ಪಿ.ಸಿ.ಆರ್.ಐ ಮತ್ತು ಸಿ.ಪಿ.ಸಿ.ಆರ್.ಐ ರಿಸರ್ಚ್ ಸೆಂಟರ್ ಕಿದು ವನ್ನು ಪ್ರಸ್ತುತ ಮೌಲ್ಯವನ್ನು ಬಿಟ್ಟು ಈಗಿರುವ ಗುತ್ತಿಗೆ ಒಪ್ಪಂದವನ್ನು ನವೀಕರಿಸುವ ಮೂಲಕ ಹಾಲಿ ಸ್ಥಳದಲ್ಲೇ ಉಳಿಸಿಕೊಳ್ಳಲು ಒತ್ತುನೀಡುವಂತೆ ಮಾನ್ಯ ಕೇಂದ್ರ ಸಚಿವರನ್ನು ಕೋರಿದ್ದರು, ಇದಕ್ಕೆ ಸಚಿವರು ಸ್ಪಂದಿಸಿದ್ದರು ಕೂಡಾ. ಇದೀಗ ಮತ್ತೆ ಅರಣ್ಯ ಇಲಾಖೆ ನೋಟೀಸ್ ಮಾಡಿದೆ. ಹೀಗಾಗಿ ಮತ್ತೆ ಚರ್ಚೆಗೆ ಕಾರಣವಾಗಿದೆ.
26.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…