ಮಡಿಕೇರಿ : ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯಲು ರೈತರಿಗೆ ಅರ್ಜಿ ಸಲ್ಲಿಸಲು ಜೂ.25 ಕೊನೆಯ ದಿನವೆಂದು ತಿಳಿಸಲಾಗಿದೆ. ಆದರೆ ಈ ಅಲ್ಪಾವಧಿಯಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ರೈತರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಇರುವುದರಿಂದ ಇನ್ನೂ ಒಂದು ತಿಂಗಳ ಕಾಲಾವಕಾಶ ನೀಡಬೇಕೆಂದು ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮಂಡುವಂಡ ಬಿ.ಜೋಯಪ್ಪ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಆದಾಯ ವೃದ್ಧಿಸಲು ಜಿಲ್ಲೆಯ ಎಲ್ಲಾ ರೈತ ಕುಟುಂಬಗಳಿಗೆ ಪ್ರತಿ ವರ್ಷ ಆರು ಸಾವಿರ ರೂಪಾಯಿಗಳನ್ನು ಪ್ರತಿ 4 ತಿಂಗಳಿಗೊಮ್ಮೆ ಒಟ್ಟು 3 ಸಮಾನ ಕಂತುಗಳಲ್ಲಿ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಕೃಷಿ ಇಲಾಖೆ ತಿಳಿಸಿದೆ. ಆದರೆ ಅರ್ಜಿ ಸಲ್ಲಿಕೆಗೆ ಅಲ್ಪಾವಧಿಯನ್ನು ನೀಡಿದ್ದು, ಇದರಿಂದ ತಾಲ್ಲೂಕು ಕಚೇರಿ ಸೇರಿದಂತೆ ಎಲ್ಲಾ ರೈತ ಸೇವಾ ಕೇಂದ್ರಗಳಲ್ಲಿ ನೂಕುನುಗ್ಗಲು ಕಂಡು ಬಂದಿದೆ. ಅಲ್ಲದೆ ಅಗತ್ಯ ದಾಖಲೆಗಳನ್ನು ಕ್ರೋಢೀಕರಿಸಲು ಕಾಲಾವಕಾಶ ಬೇಕಾಗಿದೆ.
ಆದ್ದರಿಂದ ಅರ್ಹ ರೈತರಿಗೆ ಈ ಮಹತ್ವಾಕಾಂಕ್ಷೆಯ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಕೆಗೆ ಇನ್ನೂ ಒಂದು ತಿಂಗಳ ಕಾಲಾವಕಾಶ ನೀಡಬೇಕು. ಆ ಮೂಲಕ ರೈತರು ಸೌಲಭ್ಯದಿಂದ ವಂಚಿತರಾಗುವುದನ್ನು ತಪ್ಪಿಸಬೇಕೆಂದು ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಗೆ ಮನವಿ ಮಾಡಿದ್ದಾರೆ.