ಪುತ್ತೂರು: ಮಾಣಿ- ಮೈಸೂರು ಹೆದ್ದಾರಿಯ ಶೇಖಮಲೆ ತಿರುವಿನಲ್ಲಿ ಸೋಮವಾರ ಓವರ್ಟೇಕ್ ಮಾಡುವ ಭರಾಟೆಯಲ್ಲಿ ಸರಣಿ ಅಪಘಾತ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ಸುಳ್ಯ ಕಡೆಯಿಂದ ಬರುತ್ತಿದ್ದ ಜಿಪ್ಸಿ- ಬೈಕ್ ಹಾಗೂ ಪುತ್ತೂರಿನಿಂದ ಸುಳ್ಯ ಕಡೆ ತೆರಳುತ್ತಿದ್ದ ಖಾಸಗಿ ಬಸ್ಸು ನಡುವೆ ಅಪಘಾತ ಸಂಭವಿಸಿದೆ. ರಸ್ತೆಯ ತಿರುವು ಅಪಾಯಕಾರಿಯಾಗಿದ್ದು ಈ ತಿರುವಿನಲ್ಲಿ ಸುಳ್ಯ ಕಡೆಯಿಂದ ಬರುತ್ತಿದ್ದ ವಾಹನ ಓವರ್ಟೇಕ್ ಮಾಡಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಭಾರೀ ಅಪಘಾತವನ್ನು ತಪ್ಪಿಸುವ ಉದ್ದೇಶದಲ್ಲಿ ಬಸ್ಸು ಚಾಲಕ ಬಸ್ಸನ್ನು ರಸ್ತೆಯ ಬದಿಯ ಇಳಿಜಾರಿಗೆ ಚಲಾಯಿಸಿದ್ದಾರೆ. ಅಪಘಾತದಿಂದ ಜಿಪ್ಸಿಯಲ್ಲಿದ್ದ ಮಹಿಳೆ ಮತ್ತು ಬೈಕ್ ಸಹಸವಾರೆ ಕಾಸರಗೋಡು ಜಿಲ್ಲೆಯ ದೇಲಂಪಾಡಿ ನಿವಾಸಿ ಸವಿತಾರವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಗಂಭೀರ ಗಾಯಗೊಂಡಿರುವ ಮಹಿಳೆಯೋರ್ವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಂಪ್ಸ್ ಅಳವಡಿಸಲು ಒತ್ತಾಯ:
ಶೇಖಮಲೆಯ ಈ ತಿರುವ ಅಪಾಯಕಾರಿಯಾಗಿದ್ದು ಈ ಹಿಂದೆಯೂ ಹಲವು ಬಾರಿ ಅಪಘಾತಗಳು ಸಂಭವಿಸಿದೆ. ಕುಂಬ್ರ ಕಡೆಯಿಂದ ತೆರಳುವ ವಾಹನಗಳಿಗೆ ತಿರುವಿನಲ್ಲಿ ಸುಳ್ಯ ಕಡೆಯಿಂದ ಬರುವ ವಾಹನಗಳು ಕಾಣದೆ ಇರುವುದು ಅಪಘಾತಕ್ಕೆ ಕಾರಣವಾಗುತ್ತಿದೆ. ರಸ್ತೆ ಅಗಲವಾಗಿರುವ ಕಾರಣ ವಾಹನಗಳನ್ನು ಅತೀ ವೇಗದಿಂದ ಚಲಾಯಿಸುವ ಕಾರಣ ತಿರುವಿನಲ್ಲಿ ನಿಯಂತ್ರಣಕ್ಕೆ ಸಿಗದೆ ಅಪಘಾತಗಳು ಸಂಭವಿಸುತ್ತಿದೆ. ವೇಗ ನಿಯಂತ್ರಣಕ್ಕೆ ಎರಡೂ ಕಡೆಗಳಲ್ಲಿ ಹಂಪ್ಸ್ ಅಳವಡಿಸಬೇಕೆಂದು ವಾಹನ ಚಾಲಕರು ಒತ್ತಾಯಿಸಿದ್ದಾರೆ. ಹಂಪ್ಸ್ ಹಾಕಲು ಸಾಧ್ಯವಿಲ್ಲದೇ ಇದ್ದಲ್ಲಿ ಬ್ಯಾರಿಕೇಡ್ ಅಳವಡಿಸಿ ಅಪಘಾತವನ್ನು ನಿಯಂತ್ರಿಸುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.