ಸುಬ್ರಹ್ಮಣ್ಯ: ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭೋಜನ ಶಾಲೆಯಲ್ಲಿ ಹುರಿದಿಟ್ಟ ಮಸಾಲೆ ಕಟಾರದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದೆ. ಸಾರ್ವಜನಿಕರು, ಗ್ರಾಪಂ ಸದಸ್ಯರೊಬ್ಬರು ಸೇರಿದಂತೆ ಸ್ಥಳೀಯ ಭಕ್ತಾದಿಗಳ ಕರ್ತವ್ಯ ಪ್ರಜ್ಞೆ ಅನಾಹುತ ತಪ್ಪಿಸಿತು.
ಆದದ್ದು ಏನು ?
ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭೋಜನಶಾಲೆಯಲ್ಲಿ ಹುರಿದಿಟ್ಟ ಮಸಾಲೆ ಕಟಾರದಲ್ಲಿ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತು. ಹೊತ್ತಿಕೊಂಡ ಬೆಂಕಿ ಬಳಿಯೇ ಸುಮಾರು ತುಂಬಿದ 30 ಕ್ಕೂ ಅಧಿಕ ಗ್ಯಾಸ್ ಸಿಲಿಂಡರ್ ಕೂಡಾ ಇತ್ತು. ಅಪಾಯವನ್ನು ಅರಿತ ಸ್ಥಳೀಯರು ಜಾಗೃತರಾದರು.
ಭೋಜನಶಾಲೆಯಲ್ಲಿ ಬೆಂಕಿ ಗಮನಿಸಿದ ಸ್ಥಳೀಯರೊಬ್ಬರು ರಮೇಶ ಎನ್ನುವವರಿಗೆ ಕರೆ ಮಾಡಿದರು. ಈ ಸಂದರ್ಭ ಸಮೀಪದ ನೂಚಿಲದಲ್ಲಿ ದೈವದ ನೇಮದಲ್ಲಿದ್ದ ಅವರು ಇತರರಿಗೂ ಮಾಹಿತಿ ನೀಡಿದರು. ತಕ್ಷಣವೇ ಅಲ್ಲಿದ್ದ ಸುಮಾರು 600 ರಷ್ಟು ಮಂದಿ ದೇವಸ್ಥಾನದ ಭೋಜನ ಶಾಲೆಗೆ ಬಂದು ಬೆಂಕಿ ನಂದಿಸಿದರು. ಬಳಿಕ ಮಸಾಲೆ ಸಹಿತ ಭೋಜನಶಾಲೆಯಿಂದ ಹೊರಗೆ ತಂದು ಭೋಜನ ಶಾಲೆಯನ್ನು ಸ್ವಚ್ಛಗೊಳಿಸಲಾಯಿತು.
ಬೆಂಕಿ ಹಿಡಿದ ಕಠಾರವನ್ನು ನಂದಿಸಲು ತಕ್ಷಣವೇ ಬಟ್ಟೆ ಸಿಗದೆ ಇದ್ದಾಗ ಗ್ರಾ.ಪಂ ಸದಸ್ಯ ಮಣಿಕಂಠ ಎಂಬವರು ಧರಿಸಿದ ಅಂಗಿ ಕಳಚಿ ಅದರ ಸಹಾಯದಿಂದ ಕಠಾರವನ್ನು ಹೊರಹಾಕಿದರು.