ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ನೂತನ ಬ್ರಹ್ಮರಥದ ಮೇಲೆ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಏರಿದ್ದು ಈಗ ಇನ್ನೊಂದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಹಾಗೂ ಸಾರ್ವಜನಿಕ ಹತ್ತು ಸಮಸ್ತರು ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಹಾಗೂ ಸಮೀಪದ ಸಂಪುಟ ನರಸಿಂಹ ಸ್ವಾಮಿ ಮಠದ ನಡುವೆ ಕಳೆದ ಕೆಲವು ಸಮಯಗಳಿಂದ ವಿವಾದಗಳು, ದೂರು-ಪ್ರತಿದೂರು ನಡೆಯುತ್ತಿತ್ತು. ಸರ್ಪಸಂಸ್ಕಾರದಿಂದ ಆರಂಭಗೊಂಡ ವಿವಾದ ತಣ್ಣಗಾಗಲಿಲ್ಲ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯಬೇಕಾದ ಸರ್ಪಸಂಸ್ಕಾರ ಸೇವೆಯು ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ಕೂಡಾ ನಡೆಯುತ್ತಿರುವುದರ ಬಗ್ಗೆ ಚರ್ಚೆ ಆರಂಭವಾಗಿ ದೂರು-ಪ್ರತಿದೂರು ನಡೆದ ಬಳಿಕ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಗಿತ್ತು. ಅಲ್ಲೂ ಅಂತಿಮ ನಿರ್ಧಾರವಾಗದೆ ಮಂಗಳೂರಿನಲ್ಲಿ ಸಭೆ ನಡೆಸಿ ಇತ್ಯರ್ಥ ನಡೆಸುವ ನಿರ್ಧಾರಕ್ಕೆ ಬರಲಾಗಿತ್ತು. ಹಾಗಿದ್ದರೂ ವಿವಾದ ತಣ್ಣಗಾಗಲಿಲ್ಲ. ಬೇರೆ ಬೇರೆ ಸಂಗತಿಗಳಲ್ಲಿ ವಿವಾದ ನಡೆಯುತ್ತಲೇ ಇತ್ತು. ಇದೀಗ ಮತ್ತೊಂದು ವಿವಾದ ಎದ್ದಿದೆ.
ಕುಕ್ಕೆ ಸುಬ್ರಹ್ಮಣ್ಯದ ನೂತನ ಬ್ರಹ್ಮರಥವು ಅದ್ದೂರಿಯಾಗಿ ಕುಕ್ಕೆ ತಲಪಿದ ಬಳಿಕ ಇದೀಗ ಧಾರ್ಮಿಕ, ವೈದಿಕ ವಿಧಿವಿಧಾನಗಳು ನಡೆಯುತ್ತಿದೆ. ಈ ಸಂದರ್ಭ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ರಥ ಏರಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಹಾಗೂ ಸಾರ್ವಜನಿಕ ಹತ್ತು ಸಮಸ್ತರು ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದೆ.
ಶ್ರೀ ದೇವಳದ ಬ್ರಹ್ಮರಥಕ್ಕೆ ತನ್ನದೇ ಆದ ಘನತೆ , ಗೌರವ ಇದೆ. ಬ್ರಹ್ಮರಥಕ್ಕೆ ಶ್ರೀ ದೇವರನ್ನು ಹೊರುವ ಅರ್ಚಕರು, ತಂತ್ರಿಗಳು ಮಾತ್ರಾ ಏರಬೇಕು ವಿನಹ ಬೇರೆ ಯಾರೂ ಹತ್ತುವಂತಿಲ್ಲ ಹೀಗಿರುವಾಗ ಸಂಪುಟ ನರಸಿಂಹನ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥರು ನೂತನ ಬ್ರಹ್ಮರಥ ಏರಿದ್ದಾರೆ. ಅಲ್ಲದೆ ಮಠಕ್ಕೆ ದೇವಸ್ಥಾನದಲ್ಲಿ ಪೂಜಾ ಕಾರ್ಯದಲ್ಲಿ , ವಿಧಿವಿಧಾನದಲ್ಲಿ ಯಾವುದೇ ಹಕ್ಕಿಲ್ಲ. 1886 ರ ತೀರ್ಪಿನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರಿ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಯಾವುದೇ ರೀತಿಯ ಹಕ್ಕಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಅಲ್ಲದೆ ಪ್ರತ್ಯೇಕ ಪೂಜಾ ವಿಧಿವಿಧಾನಗಳನ್ನು ಮಾಡಿಕೊಂಡು ಬರಲಾಗುತ್ತದೆ. ಹೀಗಾಗಿ ಈಗ ರಥ ಏರಿರುವುದು ಶಿಷ್ಟಾಚಾರ ಉಲ್ಲಂಘನೆ ಇದಾಗಿದೆ. ಆದ್ದರಿಂದ ರಥಕ್ಕೆ ಹತ್ತಲು ಅವಕಾಶ ಮಾಡಿಕೊಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮುಂದೆ ಇಂತಹದ್ದಕ್ಕೆ ಅವಕಾಶ ನೀಡಬಾರದು ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಹಾಗೂ ಸಾರ್ವಜನಿಕ ಹತ್ತು ಸಮಸ್ತ ದೂರಿನಲ್ಲಿ ತಿಳಿಸಲಾಗಿದೆ.