ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಉತ್ಸವ ಆರಂಭವಾಗಿದೆ. ಡಿ.1 ರಿಂದ ಭಕ್ತರ ಸಂದಣಿ ಅಧಿಕವಾಗಲಿದೆ, ಈ ಹಿನ್ನೆಲೆಯಲ್ಲಿ ಭಕ್ತಾದಿಗಳ ವಾಹನ ಪಾರ್ಕಿಂಗ್ ಗೆ ಸೂಕ್ತ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಬಾರಿ ರಜಾದಿನದಲ್ಲಿ ಉತ್ಸವವಾಗುತ್ತಿರುವುದರಿಂದ ಹೆಚ್ಚಿನ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ.
ಡಿ.1 ರ ಮಧ್ಯಾಹ್ನದಿಂದ ಡಿ.2 ರ ಮಧ್ಯಾಹ್ನವರೆಗೆ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ನಿಲುಗಡೆಗೆ ಪ್ರತ್ಯೇಕವಾಗಿ ಕುಮಾರಧಾರೆಯಿಂದ ವ್ಯವಸ್ಥೆ ಮಾಡಿದ್ದು, ಇನ್ನಿತರ ಖಾಸಗಿ ವಾಹನಗಳ ಪಾರ್ಕಿಂಗ್‍ಗೆ ಸ್ಥಳೀಯ ಜೂನಿಯರ್ ಕಾಲೇಜು ಮೈದಾನ, ಡಿಗ್ರಿ ಕಾಲೇಜು ಮೈದಾನ, ಬಿಲದ್ವಾರದ ಎದುರಿನ ಪಾರ್ಕಿಂಗ್ ಸ್ಥಳ, ಸವಾರಿ ಮಂಟಪದ ಪಾರ್ಕಿಂಗ್ ಸ್ಥಳ ಮತ್ತು ಸುಳ್ಯ ಮಾರ್ಗದಲ್ಲಿ ಇಂಜಾಡಿ ರಸ್ತೆ ಬದಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ದ್ವಿಚಕ್ರ ವಾಹನಗಳಿಗೆ ಪೋಲಿಸ್ ಗ್ರೌಂಡ್ ಮತ್ತು ವಲ್ಲೀಶ ಸಭಾಭವನದ ಎದುರುಗಡೆ ವ್ಯವಸ್ಥೆ ಮಾಡಲಾಗಿದೆ.
ಭಕ್ತಾದಿಗಳಿಗೆ ಕುಡಿಯುವ ನೀರಿನ ಬಗ್ಗೆ ಕುಮಾರಧಾರೆ, ಬಿಲದ್ವಾರ, ಅಡ್ಡಬೀದಿ, ರಥಬೀದಿ, ಆದಿಸುಬ್ರಹ್ಮಣ್ಯ, ಸವಾರಿ ಮಂಟಪ ಇತ್ಯಾದಿ ಸುಮಾರು 11 ಕಡೆಗಳಲ್ಲಿ ಸಿಂಟೆಕ್ಸ್ ಟ್ಯಾಂಕಿಗಳ ಮೂಲಕ ವ್ಯವಸ್ಥೆ, ಈಗಾಗಲೇ ಶ್ರೀ ದೇವಳದ ವತಿಯಿಂದ ಇರುವ 125 ಶೌಚಾಲಯಗಳ ವ್ಯವಸ್ಥೆಯಲ್ಲದೆ ಜಾತ್ರಾ ಸಂಬಂಧವಾಗಿ ಹೆಚ್ಚುವರಿ 30 ಶೌಚಾಲಯಗಳನ್ನು ಮಾಡಲಾಗಿದೆ.
ಆದಿಸುಬ್ರಹ್ಮಣ್ಯದಲ್ಲಿರುವ ನೂತನ ವಸತಿಗೃಹಗಳ ಕೊಠಡಿಗಳನ್ನು ತುರ್ತಾಗಿ ಶುಚಿಗೊಳಿಸಿ ಭಕ್ತಾದಿಗಳಿಗೆ ಜಾತ್ರೆ ಸಂದರ್ಭದಲ್ಲಿ ನೀಡಲಾಗುತ್ತದೆ. ಭಕ್ತಾದಿಗಳ ಅನ್ನಸಂತರ್ಪಣೆ ಬಗ್ಗೆ ಅಂಗಡಿಗುಡ್ಡೆ, ಷಣ್ಮುಖ ಪ್ರಸಾದ ಭೋಜನಶಾಲೆ, ಶೃಂಗೇರಿ ಮಠ, ಆದಿಸುಬ್ರಹ್ಮಣ್ಯದಲ್ಲಿ ಒಟ್ಟಾಗಿ 4 ಕಡೆಗಳಲ್ಲಿ ವಿಶೇಷ ಅಡುಗೆ ವ್ಯವಸ್ಥೆ ಮಾಡಲಾಗಿದೆ. ಭಕ್ತಾದಿಗಳ ಒತ್ತಡ ಹೆಚ್ಚಿರುವುದರಿಂದ ಅಂಗಡಿಗುಡ್ಡೆ ಭೋಜನದ ವ್ಯವಸ್ಥೆಗೆ ಆದಿಸುಬ್ರಹ್ಮಣ್ಯ ದಾರಿಯಲ್ಲಿ ಏಕಮುಖವಾದ ದಾರಿ ಮಾತ್ರವೇ ಇರುವುದರಿಂದ ಈ ಬಗ್ಗೆ ಭಕ್ತಾದಿಗಳ ಒತ್ತಡ ನಿಯಂತ್ರಿಸಲು ಪ್ರತ್ಯೇಕ ಭದ್ರತಾ ಸಿಬ್ಬಂದಿಗಳ ನಿಯೋಜನೆಯನ್ನು ಮಾಡಲಾಗಿದೆ.
ಕ್ಷೇತ್ರದಲ್ಲಿ ಭದ್ರತೆ ವ್ಯವಸ್ಥೆ ಬಗ್ಗೆ ಹೆಚ್ಚುವರಿ ಸಿಸಿ ಟಿವಿ ಕ್ಯಾಮರಾಗಳು, ಕುಮಾರಧಾರೆ, ದೇವಳದ ಪಕ್ಕ ಹೆಚ್ಚುವರಿ ಲಗ್ಗೇಜ್ ಕೊಠಡಿಗಳು, ಮಾಹಿತಿ ಕೇಂದ್ರಗಳು, ಪ್ರಸಾದ ಕೌಂಟರ್‍ಗಳು, ಬ್ರಹ್ಮರಥೋತ್ಸವದ ಸಮಯ ಭಕ್ತಾದಿಗಳ ಒತ್ತಡ ನಿಯಂತ್ರಿಸಲು ಹೆಚ್ಚುವರಿ ಬಂದೋಬಸ್ತು ಸಿಬ್ಬಂದಿಗಳ ನಿಯೋಜನೆ, ಪ್ರಥಮ ಚಿಕಿತ್ಸೆ ಬಗ್ಗೆ 2 ವೈದ್ಯಕೀಯ ಶಾಪ್‍ಗಳು, ಅಂಬ್ಯುಲೆನ್ಸ್ ವ್ಯವಸ್ಥೆ, ಅಗ್ನಿಶಾಮಕ ವ್ಯವಸ್ಥೆ, ಪೌರಕಾರ್ಮಿಕರ ನಿಯೋಜನೆ ಮೂಲಕ ಕ್ಷೇತ್ರದ ಸಮಗ್ರ ಶುಚಿತ್ವದ ಹಾಗೂ ನೈರ್ಮಲ್ಯ ರಕ್ಷಣೆ ವ್ಯವಸ್ಥೆ, ಭಕ್ತಾದಿಗಳ ಹೊರೆಕಾಣಿಕೆ ಸ್ವೀಕಾರಕ್ಕೆ ಸೂಕ್ತ ಸಿಬ್ಬಂದಿಗಳ ನಿಯೋಜನೆ ವ್ಯವಸ್ಥೆ, ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಮೂಲಕ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ, ಹೆಚ್ಚುವರಿಯಾಗಿ ಆರಕ್ಷಕ ಠಾಣಾ ಸಿಬ್ಬಂದಿಗಳು, ಹೋಂಗಾರ್ಡ್, ಸೆಕ್ಯೂರಿಟಿ ಸಿಬ್ಬಂದಿಗಳ ನಿಯೋಜನೆ ಮೂಲಕ ಕ್ಷೇತ್ರದಲ್ಲಿ ಸೂಕ್ತ ಭದ್ರತೆ ವ್ಯವಸ್ಥೆ, ಸಂತೆ ವ್ಯಾಪಾರಸ್ಥರ ಅನುಕೂಲಕ್ಕಾಗಿ ಪ್ರತ್ಯೇಕ ವ್ಯವಸ್ಥೆ, ಕೃಷಿ ಮೇಳ ಮುಂತಾದ ಸಮಗ್ರ ವ್ಯವಸ್ಥೆಗಳ ಬಗ್ಗೆ ದೇವಳದ ಆಡಳಿತ ಕ್ರಮ ಕೈಗೊಂಡಿದೆ.
ವಿಶೇಷವಾಗಿ ಕುಮಾರಧಾರೆ ಪ್ರವೇಶ ಗೋಪುರದಿಂದ ಕಾಶಿಕಟ್ಟೆವರೆಗೆ ಒಟ್ಟು 5 ಮಿನಿ ಬಸ್ಸುಗಳ ಉಚಿತ ವ್ಯವಸ್ಥೆ, ಭಕ್ತಾದಿಗಳಿಗೆ ಸೇವೆ ಇತ್ಯಾದಿ ಸಂಪೂರ್ಣ ಮಾಹಿತಿ ಬಗ್ಗೆ ಕಚೇರಿ ದೂರವಾಣಿ ಸಂಖ್ಯೆ 08257 – 281423, 295244, 281265 ಗಳ ವ್ಯವಸ್ಥೆ, ಭದ್ರತೆ ಬಗ್ಗೆ ಹೆಚ್ಚುವರಿ ಸಿಸಿ ಟಿವಿಗಳ ಅಳವಡಿಕೆ, ರಥೋತ್ಸವಾದಿಗಳ ವೀಕ್ಷಣೆಗಾಗಿ ಸಿಸಿ ಟಿವಿಗಳ ಅಳವಡಿಕೆ, ಇತ್ಯಾದಿ ವ್ಯವಸ್ಥೆಗಳನ್ನು ಆಡಳಿತ ವತಿಯಿಂದ ಕೈಗೊಳ್ಳಲಾಗಿದೆ.