ಸುಬ್ರಹ್ಮಣ್ಯ: ಅಸೌಖ್ಯದಿಂದ ಬಳಲುತ್ತಿರುವ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಗಜಲಕ್ಷ್ಮಿ 16 ರ ವಯಸ್ಸಿನ ಯಶಸ್ವಿ ಆನೆಯ ಆರೋಗ್ಯ ಚೇತರಿಕೆಗೆ ಮತ್ತು ಚಿಕಿತ್ಸೆ ಫಲಿಸಲು ಪ್ರೇರಣೆ ಮತ್ತು ದೀರ್ಘಾಯುಷ್ಯಕ್ಕೆ ಭಗವಂತನ ಅನುಗ್ರಹ ಪ್ರಾರ್ಥಿಸಿ ದೇಗುಲದಲ್ಲಿ ಮಹಾಪೂಜೆ ನಡೆಸುವುದು, ಗ್ರಾಮ ದೇವರಾದ ಅಗ್ರಹಾರ ಸೋಮನಾಥೇಶ್ವರ ದೇವಸ್ಥಾನದಲ್ಲಿ ಅಭಿಷೇಕ. ಆನೆಶೆಡ್‍ನಲ್ಲಿ ವಾಸ್ತುಹೋಮ. ಸುದರ್ಶನ ಹೋಮ ನಡೆಸಲು ದೇಗುಲದಲ್ಲಿ ಬುಧವಾರ ಇರಿಸಲಾದ ಪ್ರಶ್ನೆ ಚಿಂತನೆಯಲ್ಲಿ ದೈವಜ್ಞರು ಪರಿಹಾರದ ಸಲಹೆ ನೀಡಿದ್ದಾರೆ.
ದೇಗುಲದ ಆನೆ ಯಶಸ್ವಿ ಅಸೌಖ್ಯಗೊಂಡ ಹಿನ್ನಲೆಯಲ್ಲಿ ಧಾರ್ಮಿಕ ಚಿಂತನೆಗಳ ಮೂಲಕ ಏನಾದರೂ ದೋಷಗಳು ಇವೆಯೇ ಎಂಬ ಕುರಿತು ಬುಧವಾರ ದೇಗುಲದಲ್ಲಿ ರಾಜೇಂದ್ರ ಭಟ್ ನೆಟ್ಟಾರು ಮೂಲಕ ತಾಂಬೂಲ ಪ್ರಶ್ನೆ ಚಿಂತನೆಯನ್ನು ಇರಿಸಲಾಯಿತು. ಈ ವೇಳೆ ದೈವಜ್ಞರು ಆನೆಗೆ ಕರುಳು ಮತ್ತು ಮೂತ್ರಕೋಶಕ್ಕೆ ಸಂಬಂದಿಸಿ ಸಮಸ್ಯೆಯಿದೆ. ಆನೆಯನ್ನು ನೋಡಿಕೊಳ್ಳುತ್ತಿರುವ ಮಾವುತರ ನಡುವೆ ಹೊಂದಾಣಿಕೆ ಕೊರತೆಯಿಂದ ಆನೆಯ ನಿರ್ವಹಣೆಯಲ್ಲಿ ಸಮಸ್ಯೆಗಳಾಗಿವೆ. ಆನೆಗೆ ಪ್ರತಿನಿತ್ಯ ಸೂಕ್ತವಾದ ವ್ಯಾಯಾಮ. ಯೋಗ, ಆಹಾರ ಪದ್ಧತಿಗಳ ವಿಚಾರದಲ್ಲಿ ನಿರ್ಲಕ್ಷ ವಹಿಸಿದ್ದರಿಂದ ಆನೆಯು ಆರೋಗ್ಯದ ಮೇಲೆ ಪರಿಣಾಮ ಬಿದ್ದಿರುವ ಬಗ್ಗೆ ಕಂಡುಬರುತ್ತಿದೆ. ಯಶಸ್ವಿಗೆ ಶನಿದೋಷ ಕೂಡ ಇದ್ದು ಅದು ಮುಂದಿನ ಆರು ತಿಂಗಳುಗಳ ಕಾಲ ಇರುತ್ತದೆ. ಹೀಗಾಗಿ ದೀರ್ಘ ಅವಧಿ ಚಿಕಿತ್ಸೆ ನೀಡಬೇಕಾಗುತ್ತದೆ. ಚೇತರಿಕೆಗೂ ಸಮಯ ತೆಗೆದುಕೊಳ್ಳಲಿದೆ ಎಂದಿದ್ದಾರೆ.
ಆನೆಶೆಡ್ ವಾಸ್ತು ಸಮಸ್ಯೆ ಕೂಡ ಇದ್ದು ವಾಸ್ತು ಹೋಮ ಅಗತ್ಯವಾಗಿ ನಡೆಸಬೇಕಿದೆ. ಆನೆಗೆ ಇನ್ನು ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎನ್ನುವ ವಿಚಾರಗಳು ಪ್ರಶ್ನೆ ಚಿಂತನೆಯಲ್ಲಿ ಕಂಡು ಬರುತ್ತಿರುವ ಕಾರಣ ಆಡಳಿತ ಮಂಡಳಿ ಪ್ರಶ್ನೆಯಲ್ಲಿ ಕಂಡು ಬಂದ ವಿಚಾರಗಳಿಗೆ ಸಂಬಂದಿಸಿ ನೀಡಲಾದ ಪರಿಹಾರ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಿದ್ದಾರೆ. ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದ ಎಲ್ಲ ಪರಿಹಾರ ಮಾರ್ಗಗಳನ್ನು ಶೀಘ್ರ ನಡೆಸಲಿದ್ದೇವೆ. ಆನೆಯ ಆರೋಗ್ಯ ಸುಧಾರಣೆಗೆ ಬೇಕಿರುವ ಎಲ್ಲ ವ್ಯವಸ್ಥೆಗಳನ್ನು ದೇಗುಲದ ಕಡೆಯಿಂದ ಮಾಡಲಾಗುತ್ತದೆ ಎಂದು ಪ್ರಶ್ನೆ ಚಿಂತನೆ ಬಳಿಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದರು.
Advertisement
ತಾಂಬೂಲ ಪ್ರಶ್ನೆ ಚಿಂತನೆ ವೇಳೆ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ. ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ ಎಂ.ಎಚ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಬಾಲಕೃಷ್ಣ ಬಳ್ಳೇರಿ, ಕೃಷ್ಣಮೂರ್ತಿ ಭಟ್, ಮಹೇಶ್‍ಕುಮಾರ್ ಕರಿಕ್ಕಳ, ರಾಜೀವಿ ಆರ್ ರೈ, ಮಾಧವ ಡಿ, ದೇಗುಲದ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಪಶುವೈದ್ಯ ಡಾ ವೆಂಕಟಾಚಲಪತಿ ಹಾಗೂ ಊರ ಭಕ್ತರು ಉಪಸ್ಥಿತರಿದ್ದರು.
ಚಿಕಿತ್ಸೆ ಮುಂದುವರಿಕೆ:
ಆನೆ ಯಶಸ್ವಿಯ ಆರೋಗ್ಯ ಯಥಾಸ್ಥಿತಿಯಲ್ಲಿದ್ದು ಚಿಕಿತ್ಸೆ ಮುಂದುವರೆದಿದೆ. ಮೈಸೂರಿನ ತಜ್ಞ ವೈದ್ಯ ಶ್ರೀನಿವಾಸ ಮಂಗಳವಾರ ಸಂಜೆ ಆನೆಯ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದಾರೆ. ಬಳಿಕ ಆನೆಗೆ ವ್ಯಾಯಾಮ ಮಾಡಿಸಲು ಶೆಡ್‍ನಿಂದ ಹೊರಗೆ ಕರೆತಂದು ಓಡಾಡಿಸಿದ್ದಾರೆ. ನಿತ್ಯವೂ ಆನೆಗೆ ವ್ಯಾಯಾಮ ಯೋಗ ಮಾಡಿಸುವಂತೆ ಮಾವುತರಿಗೆ ಮಾರ್ಗದರ್ಶನ ನೀಡಿದ್ದಾರೆ. ಜತೆಗೆ ಅನಾರೋಗ್ಯಕ್ಕೆ ಸಂಬಂದಿಸಿ ಆನೆಗೆ ಚಿಕಿತ್ಸೆ ನೀಡುತ್ತಿರುವ ಗುತ್ತಿಗಾರಿನ ಪಶುವೈದ್ಯ ಡಾ. ವೆಂಕಟಾಚಲಪತಿ ಚಿಕಿತ್ಸೆ ಮುಂದುವರೆಸಿದ್ದಾರೆ.