ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಯಾಗಲಿದೆ. ಹಿಂದೂ ದೇವಸ್ಥಾನಗಳಿಗೆ ಪ್ರವೇಶ ಮಾಡಲು ಕೇರಳ ಮಾದರಿಯಲ್ಲಿ ಕರ್ನಾಟಕದ ದೇವಸ್ಥಾನಗಳಲ್ಲೂ ವಸ್ತ್ರಸಂಹಿತೆ ಜಾರಿ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಕೇರಳದಲ್ಲಿ ಎಡಪಂಥೀಯ ಸರಕಾರಗಳು ಇದ್ದರೂ ಹಿಂದೂ ನಂಬಿಕೆ ಹಾಗೂ ಆಚರಣೆಗಳಿಗೆ ಯಾವುದೇ ಚ್ಯುತಿ ಬಾರದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಅದರಲ್ಲೂ ದೇವಸ್ಥಾನದ ಆಚಾರ-ವಿಚಾರಗಳ ಪಾಲನೆ ಮಾಡಲಾಗುತ್ತಿದೆ. ಹೀಗಾಗಿ ಕೇರಳದಲ್ಲಿ ದೇವಸ್ಥಾನ ಪ್ರವೇಶ ಮಾಡಲು ಹಿಂದೂ ಸಂಪ್ರದಾಯದಂತೆ ಪುರುಷರು ಪಂಚೆ, ಶಲ್ಯ ತೊಟ್ಟಿರಬೇಕು, ಮಹಿಳೆಯರು ಹಾಗೂ ಯುವತಿಯರು ಸೀರೆ ಅಥವಾ ಪ್ಯಾಂಟ್, ಟೀಶರ್ಟ್ ರಹಿತವಾದ ಬಟ್ಟೆ ತೊಟ್ಟು ಪ್ರವೇಶ ಮಾಡಬೇಕಾಗುತ್ತದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಮುಜರಾಯಿ ಇಲಾಖೆಯ ಆದೀನತೆಯಲ್ಲಿನ ದೇವಳಗಳಲ್ಲಿ ಕೂಡಾ ವಸ್ತ್ರು ಸಂಹಿತೆ ಜಾರಿಗೆ ತರಲು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಧಾರ್ಮಿಕ ಮುಖಂಡರ ಜೊತೆ ಈಗ ಮಾತುಕತೆ ನಡೆಯುತ್ತಿದೆ. ಹೇಗೆ ಜಾರಿ ಮಾಡಬಹುದು ಎಂಬುದರ ಬಗ್ಗೆ ಮಾತುಕತೆ ಆರಂಭವಾಗಿದೆ.
ಕಳೆದ ವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ ರಾಜ್ಯ ಮುಜರಾಯಿ ಇಲಾಖೆಯ ಆದೀನತೆಯಲ್ಲಿನ ದೇವಳಗಳಲ್ಲಿ ವಸ್ತ್ರ ಸಂಹಿತೆ ಅಳವಡಿಸುವ ಬಗ್ಗೆ ಅನೇಕ ಸಂಘಟನೆಗಳ ಕಾರ್ಯಕರ್ತರು ಮನವಿ ನೀಡುತ್ತಿದ್ದಾರೆ.ವಸ್ತ್ರ ಸಂಹಿತೆ ಯಾವ ರೀತಿ ಇರಬೇಕು ಎನ್ನುವುದರ ಬಗ್ಗೆ ಜಿಜ್ಞಾಸೆ ಇದೆ.ದೇವಳಗಳ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ವಸ್ತ್ರ ಸಂಹಿತೆ ಜಾರಿ ತರುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಯಾವ ರೀತಿ ವಸ್ತ್ರ ಸಂಹಿತೆ ಮಾಡಬಹುದು.ಈ ಬಗ್ಗೆ ಅನೇಕರ ಅಭಿಪ್ರಾಯ ತೆಗೆದುಕೊಳ್ಳಬೇಕಾದ ಆವಶ್ಯಕತೆ ಇದೆ.ಇದನ್ನು ಯಾರ ಮೇಲೂ ಹೇರುವ ಭಾವನೆ ಇಲ್ಲ. ಸರ್ವರ ಅಭಿಪ್ರಾಯವನ್ನು ತೆಗೆದುಕೊಂಡು ಕ್ರಮ ಕೈಗೊಳ್ಳಲಾಗುವುದು.ಭಕ್ತರ ಮೇಲೆ ವಸ್ತ್ರ ಸಂಹಿತೆಯ ಪರಿಣಾಮಗಳೇನು.ಯಾವ ವಸ್ತ್ರ ವಿನ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ದೇವಳದ ಧಾರ್ಮಿಕ ವಿಚಾರಗಳನ್ನು ಸಮಗ್ರವಾಗಿ ಪರಿಶೀಲಿಸಿ, ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದರು.