ಸುಬ್ರಹ್ಮಣ್ಯ: ಕುಮಾರಧಾರಾ ನದಿಯನ್ನು #ಕುಮಾರ_ಸಂಸ್ಕಾರ ಎಂಬ ಹೆಸರಿನಲ್ಲಿ ರಾಜ್ಯ ಯುವಬ್ರಿಗೆಡ್ ಹಾಗೂ ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ಸ್ವಚ್ಛ ಮಾಡುವ ಹಾಗೂ ಭಕ್ತಾದಿಗಳಿಗೆ, ಸ್ಥಳೀಯರಿಗೆ ಜಾಗೃತಿ ಉಂಟು ಮಾಡುವ ಕಾರ್ಯವನ್ನು ಮಾಡಿತು. ಎರಡು ದಿನದ ಸ್ವಚ್ಛತಾ ಕಾರ್ಯದಲ್ಲಿ ಸುಮಾರು 10 ಟನ್ ತ್ಯಾಜ್ಯಕ್ಕೆ ಮುಕ್ತಿ ದೊರೆತಿದೆ.
ದಕ್ಷಿಣ ಭಾರತದ ಅತ್ಯಂತ ಪವಿತ್ರ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ನಾಗಾರಾಧನೆಯ ಪ್ರಮುಖ ಕ್ಷೇತ್ರ. ನಾಗದೋಷ ನಿವಾರಣೆಗೆ ಸರ್ಪಸಂಸ್ಕಾರ ಮಾಡುವ ಪುಣ್ಯ ಕ್ಷೇತ್ರ ಇದು. ಹೀಗಾಗಿ ಲಕ್ಷಾಂತರ ಭಕ್ತರು ಈ ಕ್ಷೇತ್ರಕ್ಕೆ ಆಗಮಿಸಿ ಪಾಪ ಕಳೆಯುತ್ತಾರೆ. ದೋಷ ನಿವಾರಣೆ ಮಾಡಿ ಹೋಗುತ್ತಾರೆ. ಅದೇ ವೇಳೆ ಇದೇ ಕ್ಷೇತ್ರದಲ್ಲಿ ಹರಿಯುವ ಎರಡು ಪುಣ್ಯ ನದಿಗಳೂ ಮಲಿನವಾಗುತ್ತಿದೆ. ಇಂದಲ್ಲ, ನಿನ್ನೆಯಲ್ಲ, ಹತ್ತಾರ ವರ್ಷಗಳಿಂದ ಈ ಮಾಲಿನ್ಯ ಹೆಚ್ಚುತ್ತಲೇ ಇದೆ. ಹೀಗಾಗಿ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹರಿಯುವ ಎರಡು ಪ್ರಮುಖ ಪುಣ್ಯ ನದಿಗಳ ಸ್ವಚ್ಛತಾ ಕಾರ್ಯವನ್ನು ಯುವ ಬ್ರಿಗೇಡ್ ಕಾರ್ಯಕರ್ತರು #ಕುಮಾರ_ಸಂಸ್ಕಾರ ಎಂಬ ಹೆಸರಿನ ಮೂಲಕ ನದಿ ಸ್ವಚ್ಛತಾ ಕಾರ್ಯ ನಡೆಸಿದರು. ಈ ಹಿಂದೆ ರಾಜ್ಯದ ವಿವಿದೆಡೆ ಕಲ್ಯಾಣಿಗಳನ್ನು ಸ್ವಚ್ಛ ಮಾಡಿರುವ ಯುವಬ್ರಿಗೇಡ್ ನಂತರ ಪುಣ್ಯ ಕ್ಷೇತ್ರಗಳ ನದಿ ಸ್ವಚ್ಛತಾ ಕಾರ್ಯವನ್ನು ಮಾಡಿದ್ದಾರೆ. ಯುವ ಬ್ರಿಗೇಡ್ ಇದುವರೆಗೆ ಕಾವೇರಿ, ಭೀಮ, ಧರ್ಮಸ್ಥಳದ ನೇತ್ರಾವತಿ ಸಹಿತ ಏಳು ಪ್ರಮುಖ ನದಿ ಹಾಗೂ 150ಕ್ಕೂ ಹೆಚ್ಚು ಕಲ್ಯಾಣಿಗಳ ಸ್ವಚ್ಛತಾ ಕಾರ್ಯ ನಡೆಸಿದೆ. ಸುಬ್ರಹ್ಮಣ್ಯದಲ್ಲಿ ವಿಶೇಷ ರೀತಿಯಲ್ಲಿ ಈ ಕೆಲಸ ಮಾಡಲಾಯಿತು.
ಸರ್ಪದೋಷ ಪರಿಹಾರಕ್ಕೆ ಸರ್ಪಸಂಸ್ಕಾರ ಮಾಡುವಂತೆ ನದಿ ಹಾಳು ಮಾಡಿದ ದೋಷ ಪರಿಹಾರಕ್ಕಾಗಿ ಕುಮಾರ ಸಂಸ್ಕಾರ ಎಂಬ ಸಂಕಲ್ಪದೊಂದಿದೆ ನದಿ ಸ್ವಚ್ಚತಾ ಕಾರ್ಯವನ್ನು ಯುವ ಬ್ರಿಗೇಡ್ ನಡೆಸಿದೆ. ಎರಡು ದಿನಗಳ ಕಾಲ ಸುಮಾರು ಒಂದೂವರೆ ಸಾವಿರ ಮಂದಿ ನಿರಂತರ ಕೆಲಸ ಮಾಡಿದರು. ಇದರ ಪರಿಣಾಮ ಸುಮಾರು 10 ಟನ್ ತ್ಯಾಜ್ಯವನ್ನು ನದಿಯಿಂದ ಮೇಲೆ ತಂದು ಪಂಚಾಯತ್ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತಲುಪಿಸಿದ್ದಾರೆ. ಇದರಲ್ಲಿ ಭಕ್ತಾದಿಗಳು ಸ್ನಾನ ಮಾಡಿದ ನಂತರ ಬಿಟ್ಟಿರುವ ಬಟ್ಟೆಯಿಂದ ತೊಡಗಿ ಬಾಟಲಿಗಳು, ಪ್ಲಾಸ್ಟಿಕ್‍ಗಳು ಸೇರಿಕೊಂಡಿದೆ.
ಇದು ಯುವಬ್ರಿಗೇಡ್ ಭಕ್ತಾದಿಗಳೀಗೆ ನೀಡಿರುವ ಎಚ್ಚರಿಕೆ ಅಷ್ಟೇ. ನದಿ ಸ್ವಚ್ಛವಾಗಿರಬೇಕು, ಈ ಮೂಲಕ ಸಮಾಜವೂ ಸ್ವಚ್ಛವಾಗಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸ್ವಚ್ಛತೆಯ ಕಾಳಜಿ ಒಂದು ದಿನಕ್ಕಲ್ಲ, ಒಂದು ಸಂಘಟನೆಗೆ ಅಲ್ಲ. ಇದು ಎಲ್ಲರ ಜವಾಬ್ದಾರಿ. ಬನ್ನಿ ಪುಣ್ಯ ಕ್ಷೇತ್ರವೂ ಸೇರಿದಂತೆ ನಮ್ಮ ಗ್ರಾಮ, ನಗರವನ್ನು ಸ್ವಚ್ಛವಾಗಿಡೋಣ.
ಈ ಬಗ್ಗೆ ಯುವಬ್ರಿಗೆಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ತಮ್ಮ ಪೇಸ್ ಬುಕ್ ನಲ್ಲಿ ಹೀಗೆ ಬರೆದಿದ್ದಾರೆ…..
ಆತ್ಮೀಯ ಮಿತ್ರರೇ,
ಎರಡು ದಿನಗಳಿಂದ ಕುಕ್ಕೆ ಸುಬ್ರಹ್ಮಣ್ಯದ ಬಳಿಯಿರುವ ಕುಮಾರಧಾರ ನದಿ ಸ್ವಚ್ಛತೆಯಲ್ಲಿ ಭಾಗಿಯಾಗಿ ಮನಸ್ಸು ವಿಹ್ವಲಗೊಂಡಿದೆ. ದೇವಸ್ಥಾನದ ಹಿಂಬದಿಯಲ್ಲಿ ದರ್ಪಣತೀರ್ಥವೆಂದು ಕರೆಯಲ್ಪಡುವ ಈ ನದಿ ಅಕ್ಷರಶಃ ಚರಂಡಿಯಾಗಿಬಿಟ್ಟಿದೆ. ಕಸ, ತ್ಯಾಜ್ಯವಲ್ಲದೇ ಮಲ ವಿಸರ್ಜನೆಗೂ ಇದೇ ಜಾಗವನ್ನು ಬಳಸುತ್ತಿರುವುದು ದುರದೃಷ್ಟಕರ. ನದಿ ಸ್ವಚ್ಛತೆಯಲ್ಲಿ ಇಷ್ಟು ಕೊಳಕು ರಾಡಿಯನ್ನು ಕಂಡು ಬೇಸರಗೊಳ್ಳುತ್ತಿರುವುದು ಬಹುಶಃ ಇದು ಮೊದಲನೇ ಬಾರಿ ಎನಿಸುತ್ತದೆ.
ಸ್ನಾನಘಟ್ಟದ ಪರಿಸ್ಥಿತಿ ಭಿನ್ನವಲ್ಲ. ಸುಮಾರು 20ಕ್ಕೂ ಹೆಚ್ಚು ಟ್ರಾಕ್ಟರುಗಳಷ್ಟು ತ್ಯಾಜ್ಯವನ್ನು ನದಿಯಿಂದ ಹೊರಗೆಸೆದಿದ್ದೇವೆ. 2.5 ಕಿ.ಮೀ ಉದ್ದದ ರಸ್ತೆಯ ಇಕ್ಕೆಲಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಪ್ರಯತ್ನ ಮಾಡಿದ್ದೇವೆ. ಕನಿಷ್ಠ 10,000 ಪ್ಲಾಸ್ಟಿಕ್ ಮತ್ತು ಗಾಜಿನ ಬಾಟಲಿಗಳನ್ನು ಸಂಗ್ರಹಿಸಿದ್ದೇವೆ. ಇವುಗಳಲ್ಲಿ 3000ಕ್ಕೂ ಹೆಚ್ಚು ಹೆಂಡದ ಬಾಟಲಿಗಳೇ ಇವೆ!!
ಸ್ಥಳೀಯ ವರ್ತಕರಿಗೆ ಈ ಕುರಿತಂತೆ ಮಾಹಿತಿ ಕೊಟ್ಟು ಪರಿಸರ ಕಾಪಾಡಿಕೊಳ್ಳುವಂತೆ ಹೇಳಿದರೆ ಮುಕ್ಕಾಲು ಪಾಲು ಜನ ಅತ್ಯಂತ ಕೆಟ್ಟದಾಗಿಯೇ ನಡೆದುಕೊಂಡಿದ್ದಾರೆ. ಮುಜರಾಯಿ ಇಲಾಖೆಗೆ ದೇವಸ್ಥಾನಕೊಟ್ಟಿದ್ದೇ ತಪ್ಪಾಯ್ತೇನೋ ಎಂದೆನಿಸುವಷ್ಟು ಅಸಹನೆ ಇದು.
12 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧೀಕರಣ ಘಟಕ ಕೆಲಸ ಮಾಡುತ್ತಿಲ್ಲ. ನೀವು ತೀರ್ಥವೆಂದು ಸ್ನಾನ ಮಾಡುವ ಕುಮಾರಧಾರ ಸ್ನಾನಘಟ್ಟದಲ್ಲಿಯೇ ಚರಂಡಿಯಾಗುವುದನ್ನು ಕಣ್ಣಾರೆ ನೋಡಬಹುದು. ಕುಕ್ಕೆ ಸುಬ್ರಹ್ಮಣ್ಯದ ಉಳಿವಿಗಾಗಿ ನಾವು ಈಗ ಮಹತ್ವದ ಪ್ರಯಾಣ ಮಾಡಬೇಕಾಗಿದೆ. ದಯಮಾಡಿ ಎಲ್ಲರೂ ಕೈಜೋಡಿಸಿ.
#ಕುಮಾರ_ಸಂಸ್ಕಾರ
ಇದು ಎಲ್ಲರಿಗೂ ನೀಡಿದ ಸಂದೇಶ. ಕುಕ್ಕೆಯ ಪವಿತ್ರ ನದಿ ಕುಮಾರಧಾರಾ ಸ್ವಚ್ಛವಾಗಿಡುವುದು ಭಕ್ತರ ಜವಾಬ್ದಾರಿಗಿಂತಲೂ ಸ್ಥಳೀಯರ, ಸ್ಥಳೀಯರ ಜನನಾಯಕ ಜವಾಬ್ದಾರಿ ಹೆಚ್ಚಿದೆ.