ಸುಬ್ರಹ್ಮಣ್ಯ: ಕುಮಾರಪರ್ವತ ಚಾರಣ ಹೋದ ಯುವಕರ ತಂಡದಲ್ಲಿದ್ದ ಒಬ್ಬ ಯುವಕ ನಾಪತ್ತೆಯಾಗಿದ್ದಾನೆ. ಒಟ್ಟು 12 ಜನರ ತಂಡ ಕುಮಾರ ಪರ್ವತಕ್ಕೆ ಚಾರಣ ಬೆಳೆಸಿತ್ತು. ಈ ತಂಡದಲ್ಲಿದ್ದ ಬೆಂಗಳೂರಿನ ಖಾಸಗಿ ಉದ್ಯೋಗಿ ಬೆಂಗಳೂರು ಗಾಯತ್ರಿ ನಗರದ ನಿವಾಸಿ 25 ವರ್ಷದ ಯುವಕ ಸಂತೋಷ್ ಭಾನುವಾರ ಸಂಜೆ ನಾಪತ್ತೆಯಾಗಿದ್ದಾರೆ. ಇದೀಗ ಹುಡುಕಾಟ ಆರಂಭವಾಗಿದೆ. ನಾಳೆ ಬೆಳಗ್ಗೆ ಪೊಲೀಸ್ ಹಾಗೂ ಅರಣ್ಯ ಇಲಾಖಾ ಅಧಿಕಾರಿಗಳ 5 ತಂಡ ಹುಡುಕಾಟ ನಡೆಸಲಿದೆ.
ಬೆಂಗಳೂರಿನ 12 ಜನರ ಚಾರಣಿಗರ ತಂಡವು ಶನಿವಾರ ಬೆಳಗ್ಗೆ ಸುಬ್ರಹ್ಮಣ್ಯದಿಂದ ಕುಮಾರಪರ್ವತಕ್ಕೆ ಚಾರಣ ಬೆಳೆಸಿ ರಾತ್ರಿ ಗಿರಿಗದ್ದೆಯಲ್ಲಿ ವಾಸ್ತವ್ಯ ಹೂಡಿ ಭಾನುವಾರ ಬೆಳಗ್ಗೆ ಕುಮಾರಪರ್ವತ ಏರಿತ್ತು. ಮಧ್ಯಾಹ್ನದ ನಂತರ ವಾಪಾಸು ಗಿರಿಗದ್ದೆಗೆ ಬಂದು ಸಂಜೆ ಸುಬ್ರಹ್ಮಣ್ಯದ ಕಡೆಗೆ ಪ್ರಯಾಣ ಬೆಳೆಸಿತ್ತು. 12 ಜನರ ತಂಡದಲ್ಲಿದ್ದವರು ಸುಸ್ತಾದ್ದರಿಂದ ತಂಡ ತಂಡವಾಗಿ ನಡೆದುಕೊಂಡು ಬರುತ್ತಿದ್ದರು. 5 ಮಂದಿ ಮುಂದೆ ಹಾಗೂ ಆ ನಂತರ 6 ಜನ ಹಾಗೂ ನಡುವೆ ನಾಪತ್ತೆಯಾದ ಸಂತೋಷ್ ಒಬ್ಬರೇ ಬರುತ್ತಿದ್ದರು. ಈ ಸಂದರ್ಭ ಸಂತೋಷ್ ಹೇಗೆ ನಾಪತ್ತೆಯಾದರು ಎನ್ನುವುದು ಕುತೂಹಲ ಮೂಡಿಸಿದೆ. ಸೋಮವಾರ ಬೆಳಗ್ಗೆ ನಾಪತ್ತೆಯಾದ ಯುವಕನ ಪತ್ತೆಗೆ ಪ್ರಯತ್ನ ನಡೆಸಲಾಗಿದೆ. ಸಂಜೆಯವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕಾಣೆಯಾದ ವ್ಯಕ್ತಿಯ ಪತ್ತೆಯ ನಿಮಿತ್ತ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ 5 ತಂಡಗಳು ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಕಾರ್ಯಚರಣೆ ಪ್ರಾರಂಭಿಸಲಿದೆ.
ಬೆಂಗಳೂರು ಕಾಳಿಕಾ ನಗರ ನಿವಾಸಿ ದರ್ಶನ್ ನೀಡಿದ ದೂರಿನಂತೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.