ಸುಳ್ಯ: ಕೃಷಿಕ ವಲಯದಲ್ಲಿರುವ ಅಡಿಕೆ ಹಳದಿ ರೋಗ, ಕಾಡು ಪ್ರಾಣಿಗಳ ಹಾವಳಿ, ಕೋವಿ ಪರವಾನಿಗೆ ನಿಯಮ ಸೇರಿದಂತೆ ಕೃಷಿಕರ ಸಮಸ್ಯೆ ಪರಿಹಾರಕ್ಕೆ ಜ.15ರೊಳಗೆ ಜಿಲ್ಲಾ ಮಟ್ಟದಲ್ಲಿ ಸಭೆ ಕರೆಯಲಾಗುವುದು. ಆ ಬಳಿಕ ಮುಖ್ಯಮಂತ್ರಿಗಳನ್ನೂ ಭೇಟಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಡಪ್ಪಾಡಿಯಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯಕ್ರಮ ಮತ್ತು ಸಮಾರೋಪ ಸಮಾರಂಭದಲ್ಲಿ ಅವರು ಗ್ರಾಮಸ್ಥರು ಮುಂದಿರಿಸಿದ ವಿವಿಧ ಬೇಡಿಕೆಗಳಿಗೆ ಉತ್ತರಿಸಿ ಮಾತನಾಡಿದರು. ಮಡಪ್ಪಾಡಿಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವ ನಿಟ್ಟಿನಲ್ಲಿ ಏನಾದರೂ ಮಾಡಲು ಸಾಧ್ಯವೇ ಎಂದು ಶಾಸಕರೊಂದಿಗೆ ಸೇರಿ ಚರ್ಚಿಸುವುದಾಗಿ ಸಚಿವರು ಹೇಳಿದರು.
ಶಾಸಕ ಎಸ್.ಅಂಗಾರ ಮಾತನಾಡಿ ಮಡಪ್ಪಾಡಿ ಗ್ರಾಮದಲ್ಲಿ ಒಟ್ಟು 64 ಕಿ.ಮಿ. ಉದ್ದದ 38 ಗ್ರಾಮೀಣ ರಸ್ತೆಗಳಿವೆ. ಈ ಪೈಕಿ ಆದ್ಯತೆಯ ಮೇರೆಗೆ ಪ್ರಮುಖ ರಸ್ತೆಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲಾಗುವುದು. ಸರ್ಕಾರದ ವಿವಿಧ ಯೋಜನೆಗಳು ಯಾರಿಗೆ ತಲುಪಿಲ್ಲ ಹಾಗೂ ಯಾರಿಗೆ ತಲುಪಿದೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ನೀಡುವಂತೆ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಅವರನ್ನು ಸನ್ಮಾನಿಸಲಾಯಿತು.
ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ಜಿ.ಪಂ.ಸದಸ್ಯೆ ಆಶಾ ತಿಮ್ಮಪ್ಪ, ತಾ.ಪಂ.ಸದಸ್ಯ ಉದಯಕುಮಾರ್ ಕೊಪ್ಪಡ್ಕ, ಗ್ರಾ.ಪಂ.ಅಧ್ಯಕ್ಷೆ ಶಕುಂತಲಾ ಕೇವಳ, ಉಪಾಧ್ಯಕ್ಷ ಎನ್.ಟಿ.ಹೊನ್ನಪ್ಪ, ಎ.ಪಿ.ಎಂ.ಸಿ.ನಿರ್ದೇಶಕ ವಿನಯಕುಮಾರ್ ಮುಳುಗಾಡು, ಮಡಪ್ಪಾಡಿ ಪ್ರಾಥಮಿಕ ಕೃಷಿಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಿ.ಸಿ.ಜಯರಾಂ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿ, ಲೋಕೇಶ್ ಪೆರ್ಲಂಪಾಡಿ ವಂದಿಸಿದರು. ಕಿರಣ್‍ಪ್ರಸಾದ್ ಕುಂಡಡ್ಕ ಸಂದೇಶ ವಾಚಿಸಿದರು. ಪತ್ರಕರ್ತ ಬಿ.ಎನ್.ಪುಷ್ಪರಾಜ್ ಕಾರ್ಯಕ್ರಮ ನಿರೂಪಿಸಿದರು.