ಕಳೆದ 19 ವರ್ಷಗಳಿಂದ ದೇವಸ್ಥಾನದ ಭಕ್ತರಿಂದಲೇ ಶ್ರಮದಾನದ ಮೂಲಕ ಬೇಸಾಯ ನಡೆಯುತ್ತಿದೆ. ನಿರಂತರವಾಗಿ ಈ ಕಾರ್ಯ ನಡೆಯಲು ವರ್ಷಕ್ಕೊಂದು ಬೈಲು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತದೆ. ಹೀಗಾಗಿ ಸುಮಾರು 300 ಮನೆಯ ಭಕ್ತರಿಗೆ ಮನೆ ತುಂಬಿಸುವುದಕ್ಕೆ ಬೇಕಾದ ಭತ್ತದ ತೆನೆ ಇಲ್ಲಿ ಲಭ್ಯವಾಗುತ್ತದೆ. ಕೃಷಿ ಸಂದೇಶ ನೀಡುವ ದೇವಸ್ಥಾನದ ಬಗ್ಗೆ ವಿವರ ಇಲ್ಲಿದೆ.
Advertisement Advertisement
ಕಾಣಿಯೂರು: ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕುಂಬ್ಲಾಡಿ ಕುಕ್ಕೇನಾಥ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಗದ್ದೆಯಲ್ಲಿ ಭಕ್ತರೇ ಪ್ರತೀ ವರ್ಷ ಬೇಸಾಯ ಮಾಡಿ ಪರಂಪರೆ ಉಳಿಸಿಕೊಂಡು ಬಂದಿರುವುದು ಈಗ ಗಮನ ಸೆಳೆದಿದೆ. ದೇವಸ್ಥಾನವೊಂದು ಭಕ್ತಿಗೆ ನೀಡಿರುವ ಸಂದೇಶ ಮಹತ್ವದ್ದಾಗಿದೆ.
ಇಂದಿನ ಪೀಳಿಗೆಗೆ ಭತ್ತದ ಬೇಸಾಯ ಎಂದರೆ ಪ್ರಾತ್ಯಕ್ಷಿಕೆ ಮಾಡಿ ತೋರಿಸಬೇಕಾದ ಅನಿವಾರ್ಯತೆ ಇದೆ, ದ.ಕ ಜಿಲ್ಲೆಯಲ್ಲಿ ಹಿಂದೆ ಹಾಸು ಹೊಕ್ಕಾಗಿದ್ದ ಭತ್ತದ ಬೇಸಾಯ ನಶಿಸಿ ಹೋಗಿ ಈಗ ಅಲ್ಲೊಂದು ಇಲ್ಲೊಂದು ಬೇಸಾಯ ಮಾಡುವ ಗದ್ದೆಗಳು ಕಾಣ ಸಿಗುತ್ತವೆ. ಎಲ್ಲಡೆ ವಾಣಿಜ್ಯ ಬೆಳೆಯಾದ ಅಡಕೆ ರಬ್ಬರ್ ವ್ಯಾಪಿಸಿಕೊಂಡು ಗದ್ದೆ ಬೇಸಾಯವನ್ನು ಕಾಣುವುದು ಅಪರೂಪ ಎನ್ನುವ ಸನ್ನಿವೇಶ ಇರುವಾಗ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಗದ್ದೆಯಲ್ಲಿ ಭಕ್ತರೇ ಪ್ರತೀ ವರ್ಷ ಬೇಸಾಯ ಮಾಡಿ ಪರಂಪರೆ ಉಳಿಸಿಕೊಂಡು ಬಂದಿದ್ದಾರೆ. ಇದು ಕೃಷಿ ಸಂದೇಶವನ್ನೂ ಸಮಾಜಕ್ಕೆ, ಭಕ್ತವಲಯಕ್ಕೆ ನೀಡುತ್ತಿದೆ.
ಕಳೆದ 19 ವರ್ಷಗಳಿಂದ ಭಕ್ತರ ಶ್ರಮದಾನದ ಮೂಲಕ ವ್ಯವಸ್ಥಿತವಾಗಿ ಗದ್ದೆ ಬೆಸಾಯ ಮಾಡಿಕೊಂಡು ಬಂದು ಇತರರಿಗೆ ಮಾದರಿಯಾಗಿದ್ದಾರೆ. 2000 ನೇ ಇಸವಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಂದಿನ ಅಧ್ಯಕ್ಷ ದಿ|ಸಿ.ಪಿ.ಜಯರಾಮ ಗೌಡರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ನಡೆದ ಬಳಿಕ ದೇವಸ್ಥಾನದ ಹತ್ತಿರದ ಗದ್ದೆಯೊಂದನ್ನು ದೇವಸ್ಥಾನಕ್ಕಾಗಿ ಖರೀದಿ ಮಾಡಿ ಮುಖ್ಯವಾಗಿ ತೆನೆ ಹಬ್ಬ(ಕೊರಲ್ ಪರ್ಬ)ದ ಕೊರಲ್ ಕಟ್ಟುವ ಉದ್ದೇಶಕ್ಕಾಗಿಯೇ ಬೇಸಾಯ ಮಾಡುತ್ತಾ ಬರಲಾಗಿದೆ. ಪ್ರತೀ ವರ್ಷ ಕ್ಲಪ್ತ ಸಮಯಕ್ಕೆ ಭತ್ತದ ಬಿತ್ತನೆ ಮಾಡಿ ನೇಜಿ ತಯಾರಿ ಮಾಡಲಾಗುತ್ತದೆ. ಜೂನ್ ತಿಂಗಳಲ್ಲೇ ನಾಟಿ ಮಾಡಲಾಗುತ್ತದೆ. ಅದು ಗಣೇಶ ಚೌತಿ ಸಂದರ್ಭದಕ್ಕೆ ಪೈರಾಗಿ ಕೊರಲ್ ಹಬ್ಬಕ್ಕೆ ತಯಾರಾಗಬೇಕು ಎನ್ನುವ ಉದ್ದೇಶದಿಂದ ಜೂನ್ ತಿಂಗಳಲ್ಲೇ ನೇಜಿ ನಾಟಿ ಮಾಡಲಾಗುತ್ತದೆ. ಗಣೇಶ್ ಚೌತಿಯಂದು ಅರ್ಚಕರು ಗದ್ದೆಗೆ ಹಾಲು ಇಡುವ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ದೇವಸ್ಥಾನಕ್ಕೆ ಸಂಬಂಧಪಟ್ಟ 300 ಮನೆಯ ಭಕ್ತರು ಪೈರನ್ನು ಮನೆಗೆ ಕೊಂಡೊಯ್ದು ಮನೆತುಂಬಿಸುವ ಕಾರ್ಯವನ್ನು ಮಾಡುತ್ತಾರೆ. ಇಂದಿನ ದಿನಗಳಲ್ಲಿ ಗದ್ದೆ ಬೇಸಾಯಗಳು ಇಲ್ಲದೆ, ಕೊರಲ್ ಕಟ್ಟುವ, ಮನೆ ತುಂಬಿಸಿಕೊಳ್ಳು ವ ಹಾಗೂ ಹೊಸಕ್ಕಿ ಊಟ(ಪುದ್ವಾರ್) ಮರೆಯಾಗುತ್ತಿವೆ, ಕನಿಷ್ಟ ಕೊರಲ್ ಕಟ್ಟುವ ಕಾರ್ಯ ಕೂಡಾ ನಡೆಯುತ್ತಿಲ್ಲ, ಆದರೆ ಕುಂಬ್ಲಾಡಿ ದೇವಸ್ಥಾನದ ಭಕ್ತರಿಗೆ ಇದ್ಯಾವುದೇ ಸಮಸ್ಯೆ ಇಲ್ಲ. ಕುಂಬ್ಲಾಡಿ, ಖಂಡಿಗಾ, ಮಾಚಿಲ, ಅಂಬುಲ, ಅರ್ವ, ಕಂಪ ಕರಂದ್ಲಾಜೆ, ಅಗತ್ತಬೈಲು, ಗೌಡ ಮನೆ, ನಾಣಿಲ, ಉಳವ, ಕೊಪ್ಪ ಮುಂತಾದ ಬೈಲಿನ ಭಕ್ತರಿಗೆ ಇಲ್ಲಿ ಭರಪೂರ ಪೈರು ದೊರೆಯುತ್ತದೆ, ಇಲ್ಲಿನ ಭಕ್ತರಿಗೆ ಮಾತ್ರವಲ್ಲದೆ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾದ ಭಕ್ತರಿಗೆ ಕೂಡಾ ಇಲ್ಲಿಂದ ಪೈರು ಕೊಂಡೊಯ್ಯತ್ತಾರೆ. ಮಾತ್ರವಲ್ಲ ಪೆರ್ವಾಜೆ ದೇವಸ್ಥಾನದವರೂ ಪೈರು ತೆಗೆದುಕೊಂಡು ಹೋಗುತ್ತಾರೆ. ಇಷ್ಟೆಲ್ಲಾ ಆದ ಮೇಲೆ ಉಳಿದ ಪೈರು ಒಣಗಿದ ಬಳಿಕ ಕಟಾವು ಮಾಡಿ ಅದರಲ್ಲಿ ಬಂದ ಭತ್ತದ ಹಾಗೂ ಬೈಹುಲ್ಲನ್ನು ಮಾರಾಟ ಮಾಡಿ ದೇವಸ್ಥಾನಕ್ಕ ಸಮರ್ಪಿಸಲಾಗುತ್ತದೆ. ಈ ಬಾರಿ ಮಳೆಯ ಕೊರತೆ ಇದ್ದರೂ ಕ್ಲಪ್ತ ಸಮಯಕ್ಕೆ ಪೈರು ಸಿಗಬೇಕು ಎನ್ನುವ ಉದ್ದೇಶದಿಂದ ಗದ್ದೆ ನೀರು ಹಾಯಿಸಿ ಬೇಸಾಯ ಮಾಡಲಾಗಿದೆ. ಈ ಗದ್ದೆಯನ್ನು ದೇವಸ್ಥಾನದ ಜಾತ್ರೆ ಸಂದರ್ಭದಲ್ಲಿ ಅನ್ನಛತ್ರವಾಗಿ ಬಳಸಿಕೊಳ್ಳಲಾಗುತ್ತದೆ.
ದೇವಸ್ಥಾನದಲ್ಲಿ ಒಂದು ವರ್ಷದ ಕೆಲಸ ಕಾರ್ಯಗಳ ನಿರ್ವಹಣೆಗಾಗಿ ನಾಲ್ಕು ಬೈಲಿನ ಸುಮಾರು ನೂರು ಮನೆಯ ಒಂದು ಪಂಗಡದಂತೆ ಮೂರು ಪಂಗಡವನ್ನು ಮಾಡಿಕೊಂಡು ದೇವಸ್ಥಾನದ ಜಾತ್ರೆಯಿಂದ ಹಿಡಿದು ಗದ್ದೆ ಬೇಸಾಯ, ಇತರ ಕೆಲಗಳನ್ನು ಒಂದು ವರ್ಷದ ಮಟ್ಟಿಗೆ ಒಂದು ಪಂಗಡಕ್ಕೆ ವಹಿಸಿಕೊಡಲಾಗುತ್ತದೆ. ಇಲ್ಲಿ ಜನವರಿಯಲ್ಲಿ ಜಾತ್ರೋತ್ಸವ ಮುಗಿಯುತ್ತದೆ, ಫೆಭ್ರವರಿಯ ಸಂಕ್ರಮಣದಂದು ಎಲ್ಲಾ ಲೆಕ್ಕಾಚಾರಗಳು ಮುಗಿದ ಬಳಿಕ ಮುಂದಿನ ಜನವರಿಯ ತನಕ ಇನ್ನೊಂದು ಪಂಗಡಕ್ಕೆ ಜವಾಬ್ದಾರಿಯನ್ನು ಹಂಚಲಾಗುತ್ತದೆ. ಆ ತಂಡ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾರ್ಗದರ್ಶನದಲ್ಲಿ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಲಾಗುತ್ತದೆ. ದೇವಸ್ಥಾನದ ಕೆಲಸ ಕಾರ್ಯಗಳನ್ನು ಮಾಡುವಾಗ ದೇವಸ್ಥಾನದಿಂದ ಊಟ, ತಿಂಡಿಯ ಖರ್ಚು ಭರಿಸಲಾಗುತ್ತದೆ. ಆದರೆ ಅಡುಗೆ ಇನ್ನಿತರ ತಯಾರಿ ಎಲ್ಲಾ ಭಕ್ತರದ್ದೇ ಆಗಿರುತ್ತದೆ. ಈ ಬಾರಿಯ ಜವಾಬ್ದಾರಿ ಕಂಪ ಕರಂದ್ಲಾಜೆ, ನಾಣಿಲ 1,2, ಉಳವ ಬೈಲಿನ ಮನೆಗಳ ಮೂರನೇ ಪಂಗಡಕ್ಕೆ ವಹಿಸಲಾಗಿದೆ. ಈಗ ತಂಡಕ್ಕೆ ಬೇಸಾಯದ ಕೆಲಸವನ್ನು ಕಳೆದ ವಾರ ಯಶಸ್ವಿಯಾಗಿ ಮುಗಿಸಿದೆ. ಪ್ರತೀ ವರ್ಷ ನೇಜಿಗಾಗಿ ಗದ್ದೆಯಲ್ಲಿ ಭತ್ತದ ಬೀಜ ಹಾಕಲಾಗುತ್ತಿತ್ತು. ಆದರೆ ಈ ಬಾರಿ ಕಾರಣಾಂತರದಿಂದ ಬೇರೆಡೆ ಬಿತ್ತನೆ ಮಾಡಿ ನೇಜಿ ತೆಗೆದು, ಟ್ರಾಕ್ಟರ್‍ನಲ್ಲಿ ಉಳುಮೆ ಮಾಡಿ ನೇಜಿ ನಾಟಿ ಕಾರ್ಯವನ್ನು ಮುಗಿಸಲಾಗಿದೆ. ಯುವಜನತೆ ಇದರಲ್ಲಿ ಉತ್ಸಾಹದಿಂದ ಭಾಗವಹಿಸಿ ಸಂತಸ ಸಂಭ್ರದಿಂದ ಶ್ರಮದಾನ ಮಾಡಿ ಖಷಿಪಟ್ಟರು. ಈ ಭಾಗದ ಕೃಷಿಕ ಬಂಧುಗಳು ಒಂದೆರೆಡು ದಿನಗಳ ಕಾಲ ತಮ್ಮ ಎಲ್ಲಾ ಒತ್ತಡಗಳನ್ನು ಮರೆತು ಗದ್ದೆ ಬೇಸಾಯದಲ್ಲಿ ಭಾಗವಹಿಸಿ ಕೆಸರಿನಲ್ಲಿ ಕುಣಿದು ಕುಪ್ಪಳಿಸಿ ಸಂತಸ ಹಂಚಿಕೊಂಡರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋನಪ್ಪ ಗೌಡ ಉಳವ ಸೇರಿದಂತೆ ವಿವಿಧ ಸಮಿತಿ ಪದಾಧಿಕಾರಿಗಳು, ಪಂಗಡದ ಮುಖ್ಯಸ್ಥರಾದ ವಿಶ್ವನಾಥ ಕಂಪ ಹಾಗೂ ಕೇಶವ ಗೌಡ ಖಡಿಗ ಅವರ ಮಾರ್ಗದರ್ಶನದಲ್ಲಿ ಬೇಸಾಯ ಕಾರ್ಯ ಯಶಸ್ವಿಯಾಗಿ ನಡೆಯಿತು.
ಕೊರಲ್ ಕಟ್ಟುವ ಉದ್ದೇಶದಿಂದ 18 ವರ್ಷಗಳ ಹಿಂದೆ ದೇವಸ್ಥಾನದ ಹಿರಿಯರ ಮಾರ್ಗದರ್ಶನದಲ್ಲಿ ಪ್ರಾರಂಭವಾದ ಗದ್ದೆ ಬೇಸಾಯ ಇಂದಿಗೂ ಅಚ್ಚುಕಟ್ಟಾಗಿ ನಡೆಯುತ್ತಿದೆ. ಇದರಿಂದಾಗಿ ನಮ್ಮ ಯುವಜನತೆಯಲ್ಲಿ ಬೇಸಾಯದ ಪರಿಕಲ್ಪನೆಯನ್ನು ಉದ್ದೀಪನಗೊಳಿಸಿ ಉಳಿಸಿ ಬೆಳೆಸುವುದಕ್ಕೆ ಪ್ರೇರಣೆಯಾಗುತ್ತಿದೆ. ನಮ್ಮ ದೇವಸ್ಥಾನದ ಭಕ್ತರು ಮಾತ್ರವಲ್ಲದೆ ಹೊರಗಿನ ದೇವಸ್ಥಾನದ ಭಕ್ತರು ಆಗಮಿಸಿ ಇಲ್ಲಿಂದ ಭತ್ತದ ಪೈರು ಕೊಂಡೊಯ್ಯತ್ತಾರೆ. ಅವರುಗಳು ನಮ್ಮ ದೇವಸ್ಥಾನದ ಜಾತ್ರೆ ಸಂದರ್ಭದಲ್ಲಿ ಅಕ್ಕಿ , ಬೆಲ್ಲ ಮುಂತಾದ ವಸ್ತುಗಳನ್ನು ನೀಡಿ ಸಹಕರಿಸುತ್ತಾರೆ. ದೇವಸ್ಥಾನದ ಎಲ್ಲಾ ಕಾರ್ಯಗಳು ಮೂರು ಪಂಗಡಗಳಿಂದ ನಡೆಯುತ್ತಿದ್ದು, ನಮ್ಮಲ್ಲಿ ಒಗ್ಗಟ್ಟು ಹಾಗೂವಿಶ್ವಾಸವನ್ನು ಹೆಚ್ಚಿಸಿದೆ. –ಮೋನಪ್ಪ ಗೌಡ ಉಳವ , ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ.
Advertisement
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…