ಸುಳ್ಯದಲ್ಲಿ ಕಳೆದ ಕೆಲವು ವರ್ಷಗಳ ಬಳಿಕ ಭೀಕರ ಅಪಘಾತವೊಂದು ನಡೆದಿದೆ. ಸಂಪಾಜೆ ಬಳಿ ಕೆಲ ವರ್ಷದ ಹಿಂದೆ ಭೀಕರವಾಗಿ ಅಪಘಾತ ನಡೆದಿದ್ದರೆ ಅದರ ಬಳಿಕ ಅರಂಬೂರು ಬಳಿ ನಡೆದ ಅಪಘಾತ ಮನ ಕರಗಿಸಿದೆ.
Advertisement
ಸುಳ್ಯ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ ಭಾನುವಾರ ಬೆಳಗ್ಗೆ ಕಾರು ಹಾಗೂ ಬಸ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಕೋಲೂರು ನಿವಾಸಿಗಳಾದ ಮಂಜುಳಾ(50) ಸಹೋದರ ನಾಗೇಂದ್ರ(40) ಮತ್ತು ಕಾರು ಚಲಾಯಿಸುತ್ತಿದ್ದ ಸೋಮಣ್ಣ(38) ಮೃತಪಟ್ಟವರು.
ರಾಮನಗರದಿಂದ ಹೊರಟಿದ್ದ ಇವರು ಸುಳ್ಯದ ತಾಲೂಕಿನ ಚೊಕ್ಕಾಡಿಯಲ್ಲಿನ ಶ್ರೀ ಸತ್ಯಸಾಯಿ ಶಾಲೆಯಲ್ಲಿ ಓದುತ್ತಿದ್ದ 9 ನೇ ತರಗತಿ ವಿದ್ಯಾರ್ಥಿ ಪೂರ್ವಿಕ್ ಭೇಟಿ ಮಾಡಲು ಬರುತ್ತಿದ್ದರು. ನಾಗೇಂದ್ರ(40) ಹಾಗೂ ಜಯಶೀಲ ಯಾನೆ ಮಲ್ಲಿಕಾ(37) ಅವರ ಪುತ್ರ ಪೂರ್ವಿಕ ಚೊಕ್ಕಾಡಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ. ಭಾನುವಾರದಾದ್ದರಿಂದ ನೋಡಿ ಮಾತನಾಡಿ ಹೋಗಲು ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಕೋಲೂರಿನಿಂದ ಹೊರಟಿದ್ದರು. ಈ ಸಂದರ್ಭ ನಾಗೇಂದ್ರ ಸಹೋದರಿ ಮಂಜುಳಾ(50) ಅವರೂ ಆಗಮಿಸಿದ್ದರು. ಇವರ ಮಿತ್ರ ಸೋಮಣ್ಣ(38) ಕಾರು ಚಲಾಯಿಸುತ್ತಿದ್ದರು. ಕಾರು ಅರಂಬೂರು ಬಳಿ ಬರುತ್ತಿದ್ದಂತೆಯೇ ರಿಕ್ಷಾವನ್ನು ಓವರ್ ಟೇಕ್ ಮಾಡುತ್ತಿದ್ದಾಗ ಎದುರಿನಿಂದ ಬಸ್ಸಿಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಎಲ್ಲರೂ ಗಾಯಗೊಂಡಿದ್ದರು. ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಸೇರಿ ಗಾಯಾಳುಗಳನ್ನು ಕಾರಿನಿಂದ ಹೊರ ತೆಗೆದು ಸುಳ್ಯದ ಆಸ್ಪತ್ರೆಗೆ ಸಾಗಿಸಿದರು. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದ್ದು ಬಸ್‍ನ ಮುಂಭಾಗಕ್ಕೆ ಅಂಟಿಕೊಂಡ ರೀತಿಯಲ್ಲಿತ್ತು. ಬಳಿಕ ರೋಪಿನ ಸಹಾಯದಿಂದ ಕಾರನ್ನು ಹಿಂದಕ್ಕೆ ಸರಿಸಿ ಗಾಯಾಳುಗಳನ್ನು ಹೊರ ತೆಗೆಯಲಾಯಿತು. ಕಾರಿನ ಮುಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ಬಸ್‍ನ ಮುಂಭಾಗವೂ ಜಖಂಗೊಂಡಿದೆ. ವಿಷಯ ತಿಳಿದು ಹಲವು ಮಂದಿ ಸಾರ್ವಜನಿಕರು ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಆಗಮಿಸಿದ್ದರು.
ತಲೆಗೆ ಗಂಭೀರ ಗಾಯಗೊಂಡ ಮಂಜುಳಾ ಅವರನ್ನು ಚಿಕಿತ್ಸೆಗಾಗಿ ಸುಳ್ಯದ ಖಾಸಗೀ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆ ತಂದರೂ ಮೃತಪಟ್ಟರು. ಗಂಭೀರ ಗಾಯಗೊಂಡ ಸೋಮಣ್ಣ ಮತ್ತು ನಾಗೇಂದ್ರ ಅವರಿಗೆ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯದರೂ ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ನಾಗೇಂದ್ರ ಪತ್ನಿ ಜಯಶೀಲ ಯಾನೆ ಮಲ್ಲಿಕಾ(37) ಮತ್ತು ಪುತ್ರಿ ತನ್ಮಯಿ(10) ಗಾಯಗೊಂಡಿದ್ದಾರೆ. ಇವರಿಗೆ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.