ಸುಳ್ಯ: ರಾಜ್ಯದಲ್ಲಿ ಕಂಡು ಕೇಳರಿಯದಷ್ಟು ಭೀಕರವಾದ ಪ್ರಳಯದಿಂದ ಜನತೆ ಸಂಪೂರ್ಣ ತತ್ತರಿಸಿ ಹೋಗಿದ್ದರೂ ಕೇಂದ್ರ ಸರಕಾರ ಒಂದು ರೂಪಾಯಿಯವನ್ನೂ ಪರಿಹಾರ ನೀಡದೆ ತೀವ್ರ ಅನ್ಯಾಯ ಮಾಡಿದೆ ಎಂದು ಕೆಪಿಸಿಸಿ ನೇಮಕ ಮಾಡಿದ ಪ್ರಕೃತಿ ವಿಕೋಪ ಅಧ್ಯಯನ ತಂಡ ಹೇಳಿದೆ.
ಸುಳ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವರಾದ ಬಿ.ರಮಾನಾಥ ರೈ ಮತ್ತು ಯು.ಟಿ.ಖಾದರ್ ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪ್ರವಾಹ ಉಂಟಾದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ರಾಜ್ಯಕ್ಕೆ ಆಗಮಿಸಿ ವೈಮಾನಿಕ ಸಮೀಕ್ಷೆ ನಡೆಸಿ ತಕ್ಷಣ ಎರಡು ಸಾವಿರ ಕೋಟಿ ಪರಿಹಾರ ಘೋಷಣೆ ಮಾಡಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಪರಿಹಾರವನ್ನೂ ಘೋಷಿಸದೆ, ರಾಜ್ಯಕ್ಕೆ ಭೇಟಿ ನೀಡಿ ಪ್ರಳಯ ಬಾಧಿತ ಪ್ರದೇಶದ ವೀಕ್ಷಣೆಯನ್ನು ಮಾಡದೆ ಕರ್ನಾಟಕದ ಜನತೆಯನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು. ಅಮಿತ್ ಷಾ, ನಿರ್ಮಲಾ ಶೀತಾರಾಮನ್ ರಾಜ್ಯಕ್ಕೆ ಭೇಟಿ ನೀಡಿ ಪ್ರವಾಹ ಪೀಡಿತ ಪ್ರದೇಶವನ್ನು ವೀಕ್ಷಿಸಿದರೂ ಯಾವುದೇ ಪರಿಹಾರ ಘೋಷಣೆ ಮಾಡದೆ ಬರಿಗೈಯಲ್ಲಿ ಹಿಂತಿರುಗಿದ್ದಾರೆ ಎಂದರು.
ಸರ್ವಪಕ್ಷ ಸಭೆ ಕರೆಯಲಿ:ರಾಜ್ಯದಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪದ ಕುರಿತು ಚರ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಲಿ ಎಂದು ಯು.ಟಿ.ಖಾದರ್ ಒತ್ತಾಯಿಸಿದರು. ಕೊಡಗಿನಲ್ಲಿ ಪ್ರಕೃತಿ ವಿಕೋಪ ಉಂಟಾದ ಸಂದರ್ಭದಲ್ಲಿ ಸಮ್ಮಿಶ್ರ ಸರಕಾರ ಜನರ ಜೊತೆಯಲ್ಲಿ ನಿಂತು ಕೆಲಸ ಮಾಡಿ ಎಲ್ಲಾ ನೆರವನ್ನೂ ನೀಡಿತ್ತು. ಆದರೆ ಈಗ ಸರಕಾರ ಪ್ರಳಯ ಪರಿಸ್ಥಿತಿಯನ್ನು ಎದುರಿಸುವಲ್ಲಿ ಎಡವಿದೆ ಎಂದು ಟೀಕಿಸಿದರು.