ಮಡಿಕೇರಿ:ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಒಟ್ಟು 536 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಹಿಂದೆ ಘೋಷಣೆ ಮಾಡಲಾಗಿದೆ. ಇದರಲ್ಲಿ ಪ್ರಥಮ ಹಂತದಲ್ಲಿ ತಕ್ಷಣ ರೂ.100 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆಗೆ ಆಗಮಿಸಿದ ಸಂದರ್ಭ ಕೂಡಿಗೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.ಜಿಲ್ಲಾಡಳಿತದ ಖಾತೆಯಲ್ಲಿರುವ ಹಣವನ್ನು ತಕ್ಷಣ ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿಗಳು ಭೂಕುಸಿತದಿಂದ ನಾಪತ್ತೆಯಾದವರ ಕುಟುಂಬಕ್ಕೆ ತಕ್ಷಣ ಒಂದು ಲಕ್ಷ ಪರಿಹಾರ ನೀಡುವುದು, ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ 5 ಲಕ್ಷ ಪರಿಹಾರ ಒದಗಿಸುವಂತೆ ನಿರ್ದೇಶನ ನೀಡಿದರು. ಕೇಂದ್ರದಿಂದ ಆಗಮಿಸಿದ ನೆರೆ ಅಧ್ಯಯನ ಅಧಿಕಾರಿಗಳ ತಂಡದ ವರದಿಗಳ ಆಧಾರದ ಮೇರೆಗೆ ಕೇಂದ್ರದಿಂದ ಇನ್ನೂ ಅಧಿಕ ಮೊತ್ತದ ಪರಿಹಾರ ಬಿಡುಗಡೆಗೊಳ್ಳಲಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಪ್ರಕೃತಿ ವಿಕೋಪದ ಸಂದರ್ಭ ಅರಣ್ಯ ಇಲಾಖೆಯನ್ನು ಹೊರತುಪಡಿಸಿ ಉಳಿದೆಲ್ಲಾ ಇಲಾಖೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿವೆ ಎಂದು ಆರೋಪಿಸಿದರು.ಮಡಿಕೇರಿ ವಿಭಾಗ ಡಿಎಫ್‍ಒ ಜನಪ್ರತಿನಿಧಿಗಳೊಂದಿಗೆ ಉದ್ದಟತನದಿಂದ ವರ್ತಿಸುತ್ತಿದ್ದಾರೆ. ಶಾಸಕರ ಕರೆಗಳಿಗೆ ಮನ್ನಣೆ ನೀಡುತ್ತಿಲ್ಲ. ಅರಣ್ಯ ನಡುವೆ ವಿದ್ಯುತ್ ಸಂಪರ್ಕ ಸಂದರ್ಭ ಇನ್ಸುಲೇಟಡ್ ಲೈನ್ ಅಳವಡಿಕೆ ಹೆಸರಿನಲ್ಲಿ ಮಾಲ್ದಾರೆ ಗಿರಿಜನರ ಹಾಡಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಬಾಡಗದಲ್ಲಿ ಬೆಳೆಗಾರರೊಬ್ಬರ ಮನೆಗೆ ನುಗ್ಗಿ ಅರಣ್ಯ ಇಲಾಖೆ ದೌರ್ಜನ್ಯ ಎಸಗಿದೆ ಎಂದು ಗಂಭೀರ ಆರೋಪ ಮಾಡಿದರು.ಡಿಎಫ್‍ಓ ಮತ್ತು ಸೆಸ್ಕ್ ಅಧಿಕಾರಿಗಳಿಂದ ವಿವರ ಬಯಸಿದ ಸಿಎಂ ಡಿಎಫ್‍ಒ ಪ್ರಭಾಕರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕೂಡಲೆ ವಿದ್ಯುತ್ ಸಂಪರ್ಕ ಕಲ್ಪಿಸಿ ಮುಂದಿನ 15 ದಿನಗಳ ಒಳಗಾಗಿ ಶಾಶ್ವತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಆದೇಶಿಸಿದರು.
ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ಜಿಲ್ಲೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಹಾನಿ ಉಂಟಾಗಿಲ್ಲ. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹೆಚ್ಚಿನ ಹಾನಿಯನ್ನು ತಡೆದಿದ್ದು ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು.
ಸಭೆಯಲ್ಲಿ ಸಚಿವರುಗಳಾದ ಆರ್.ಅಶೋಕ್, ಎಸ್.ಸುರೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಪಂ ಸಿಇಒ ಲಕ್ಷ್ಮಿಪ್ರಿಯ, ಸದಸ್ಯರಾದ ಚಂದ್ರಕಲಾ, ಮಂಜುಳಾ, ಚುನಾಯಿತ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಅಧಿಕಾರಿಗಳು ಇದ್ದರು.