ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸುರಿದ ಮಹಾಮಳೆಗೆ ಇದುವರೆಗೆ 9 ಮಂದಿ ಸಾವಿಗೀಡಾಗಿದ್ದು, 147 ಮನೆಗಳು ಭಾಗಶಃ ಹಾಗೂ 90 ಮನೆಗಳು ಸಂಪೂರ್ಣವಾಗಿ ಹಾನಿಯಾಗಿರುವುದಾಗಿ ಜಿಲ್ಲಾಧಿಕಾರಿಗಳು ಅಧಿಕೃತವಾಗಿ ಘೋಷಿಸಿದ್ದಾರೆ.
ಆದರೆ ಜಿಲ್ಲೆಯ ನದಿ ತೊರೆಗಳಲ್ಲಿ ಈಗಷ್ಟೇ ಪ್ರವಾಹ ಇಳಿಮುಖವಾಗುತ್ತಿರುವುದರಿಂದ ಮನೆ ಹಾನಿಯ ಪ್ರಮಾಣ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಅಲ್ಲದೆ ತೋರ ಗ್ರಾಮದಲ್ಲಿ ಭೂಕುಸಿತದ ಸಂದರ್ಭ ನಾಪತ್ತೆಯಾದ 7 ಮಂದಿಯ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.
ಕೊಡಗು ಜಿಲ್ಲೆಯಲ್ಲಿ ಒಟ್ಟು 45 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 2270 ಕುಟುಂಬಗಳ 7873 ಜನರು ಆಶ್ರಯ ಪಡೆದಿದ್ದಾರೆ. ಒಟ್ಟು 79 ಪ್ರದೇಶಗಳು ಪ್ರವಾಹದಿಂದ ಪೀಡಿತವಾಗಿವೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 1507 ಜನರು ಮತ್ತು 19 ಜಾನುವಾರುಗಳನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ವೀರಾಜಪೇಟೆ ತಾಲೂಕಿನಲ್ಲಿ ಭೂಕುಸಿತವಾದ ತೋರ ಪ್ರದೇಶದಲ್ಲಿ ಕಾಣೆಯಾದ ಒಟ್ಟು 8 ಮಂದಿ ಪೈಕಿ ಸೋಮವಾರ ಒಬ್ಬರ ಮೃತದೇಹ ಪತ್ತೆಯಾಗಿದ್ದು, 7 ಮೃತದೇಹಗಳಿಗಾಗಿ ಶೋಧ ಕಾರ್ಯವನ್ನು ಮುಂದುವರೆಸಲಾಗಿದೆ. ಸೋಮವಾರದವರೆಗೆ ಎರಡು ಹಿಟಾಚಿಗಳನ್ನು ಬಳಸಲಾಗಿದ್ದರೆ, ಮಂಗಳವಾರದಿಂದ ಆರು ಹಿಟಾಚಿ ಯಂತ್ರಗಳನ್ನು ಬಳಸುವ ಮೂಲಕ ಶೋಧ ಕಾರ್ಯವನ್ನು ಚುರುಕುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎನ್.ಡಿ.ಆರ್.ಎಫ್.ನ 34, ಭಾರತೀಯ ಸೇನೆಯ 17, ಪೊಲೀಸ್ ಇಲಾಖೆಯ 30 ಮತ್ತು ಗರುಡ ಫೋರ್ಸ್‍ನ 17 ಸೇರಿದಂತೆ ಒಟ್ಟು 98 ಅಧಿಕಾರಿ ಮತ್ತು ಬ್ಬಂದಿಗಳು ತೊಡಗಿಸಿಕೊಂಡಿದ್ದಾರೆ, ಜಿಲ್ಲೆಯ ಪ್ರದೇಶಗಳಲ್ಲೂ ಸಾರ್ವಜನಿಕರು ಹಾಗೂ ಸಾಕು ಪ್ರಾಣಿಗಳ ರಕ್ಷಣೆಗಾಗಿ ಎನ್.ಡಿ.ಆರ್.ಎಫ್., ಭಾರತೀಯ ಸೇನಾ ತುಕಡಿ, ಪೊಲೀಸ್ ಇಲಾಖೆಯ ಗರುಡ ಫೋರ್ಸ್, ಗೃಹ ರಕ್ಷಕ ದಳ, ಅಗ್ನಿಶಾಮಕ ದಳಗಳು ಕಾರ್ಯಾಚರಣೆ ನಡೆಸುವುದರೊಂದಿಗೆ ಹೆಚ್ಚಿನ ಪ್ರಾಣ ಹಾನಿಯಾಗುವುದನ್ನು ತಪ್ಪಿಸಿವೆ ಎಂದು ಅವರು ಹೇಳಿದ್ದಾರೆ.
ಸಾಮಾಗ್ರಿ ದಾಸ್ತಾನು ಸಾಕಷ್ಟಿದೆ:
ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಆದ ಅನಾಹುತಗಳನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ಜಿಲ್ಲಾಡಳಿತವು ಪ್ರಕೃತಿ ವಿಕೋಪವನ್ನು ಎದುರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಾಗ ಪರಿಹಾರ ಕೇಂದ್ರಗಳ ನಿರ್ವಹಣೆಗೆ ಬೇಕಾಗುವ ಎಲ್ಲಾ ಅಗತ್ಯ ದಿನಬಳಕೆಯ ವಸ್ತುಗಳನ್ನೂ ಸಹ ಖರೀದಿಸಿ ದಾಸ್ತಾನಿಟ್ಟುಕೊಂಡಿದೆ. ಅಲ್ಲದೆ, ನೆರೆ ಜಿಲ್ಲೆಗಳಾದ ಉಡುಪಿ ಮತ್ತು ಮೈಸೂರು ಜಿಲ್ಲೆಗಳಿಂದಲೂ ದಿನಬಳಕೆಯ ವಸ್ತುಗಳನ್ನು ಖರೀದಿಸಿ ಈ ಜಿಲ್ಲೆಗೆ ಕಳುಹಿಸಿದ್ದು, ಪ್ರಸ್ತುತ ಪರಿಹಾರ ಕೇಂದ್ರ ನಡೆಸಲು ಬೇಕಾಗುವಷ್ಟು ದಿನಬಳಕೆಯ ಸಾಮಾಗ್ರಿಗಳು ಜಿಲ್ಲಾಡಳಿತದ ಬಳಿ ದಾಸ್ತಾನಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.