ಮಡಿಕೇರಿ/ಕಾಸರಗೋಡು/ಸುಳ್ಯ : ಕೊಡಗು ಜಿಲ್ಲೆಯಾದ್ಯಂತ ಈಗ ಸಾಧಾರಣ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಸುಳ್ಯದಲ್ಲೂ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಸೋಮವಾರ ಬೆಳಗಿನಿಂದಲೇ ಮಳೆಯಾಗುತ್ತಿದೆ. ಕೇರಳದಲ್ಲಿ ಕಾಸರಗೋಡು ಸೇರಿದಂತೆ 10 ಜಿಲ್ಲೆಗಳಲ್ಲಿ ರೆಡ್ ಎಲರ್ಟ್ ಘೋಷಣೆ ಮಾಡಲಾಗಿದೆ.
ಮಡಿಕೇರಿಯಲ್ಲಿ ಮಳೆ ಕಡಿಮೆಯಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ನದಿ ನೀರು ರಸ್ತೆಯನ್ನು ಆವರಿಸಲು ಕೆಲವೇ ಅಡಿಗಳಷ್ಟೇ ಬಾಕಿ ಉಳಿದಿದ್ದು, ಅಧಿಕಾರಿಗಳು ಹಾಗೂ ರಕ್ಷಣಾ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೊಡಗು, ಕೇರಳ ಗಡಿಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಪಕ್ಕದ ಭಾಗಮಂಡಲದ ನದಿಪಾತ್ರದಲ್ಲಿ ನೀರಿನ ಹರಿವು ಹೆಚ್ಚಾಗಿದೆ.
ಕೊಡಗು ಜಿಲ್ಲೆಯ ಇತರ ಭಾಗಗಳಲ್ಲಿ ಸಾಧಾರಣ ಮಳೆಯಾಗುತ್ತಿದೆಯಾದರೂ ನಿರಂತರ ಮಳೆ ಸುರಿಯುತ್ತಿರುವುದರಿಂದ ಕೆಲವು ಭಾಗಗಳಲ್ಲಿ ಬರೆ ಕುಸಿದ ಘಟನೆಗಳು ನಡೆದಿದೆ. ವಿರಾಜಪೇಟೆ ತಾಲ್ಲೂಕಿನ ಮಲೆತಿರಿಕೆ ಬೆಟ್ಟದಲ್ಲಿರುವ ಎರಡು ಮನೆಗಳ ತಡೆಗೋಡೆಗಳ ಮೇಲೆ ಬರೆ ಕುಸಿದಿದೆ. ಕಳೆದ ವರ್ಷ ಮಹಾಮಳೆಗೆ ಭಾರೀ ಅನಾಹುತಗಳನ್ನು ಎದುರಿಸಿದ್ದ ಜೋಡುಪಾಲದಲ್ಲೂ ಬರೆಗಳು ಕುಸಿದಿದ್ದು ಕಳೆದ ಮಳೆಗಾಲದಲ್ಲಿ ಹಾನಿಗೀಡಾಗಿದ್ದ ಮಡಿಕೇರಿ ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಬೃಹತ್ ಬರೆ ಕುಸಿಯುತ್ತಲೇ ಇದ್ದು, ಇಂದೂ ಕೂಡ ಮಣ್ಣು ಕುಸಿದು ಬಿದ್ದಿದೆ.
ಕೇರಳದಲ್ಲಿ ರೆಡ್ ಹಾಗೂ ಆರೆಂಜ್ ಅಲರ್ಟ್ :
ಕಾಸರಗೋಡು ಸೇರಿದಂತೆ ಕಣ್ಣೂರು, ವಯನಾಡ್, ಕೋಝಿಕ್ಕೋಡ್, ಇಡುಕ್ಕಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ ಸೇರಿದಂತೆ 10 ಜಿಲ್ಲೆಗಳಲ್ಲಿ ರೆಡ್ ಹಾಗೂ ಆರೆಂಜ್ ಎಲರ್ಟ್ ಘೊಷಣೆ ಮಾಡಲಾಗಿದೆ. ಹೀಗಾಗಿ ಕೆಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಕಳೆದ ಎರಡು ದಿನಗಳಿಂದ ಕೇರಳದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.
ದಕ್ಷಿಣ ಕನ್ನಡದಲ್ಲೂ ಉತ್ತಮ ಮಳೆ:
ಮಂಗಳೂರು ಸೇರಿದಂತೆ ಜಿಲ್ಲೆಯ ವಿವಿದೆಡೆ ಉತ್ತಮ ಮಳೆಯಾಗಿದೆ. ಹವಾಮಾನ ಇಲಾಖೆಯ ವೆದರ್ ರಿಪೋರ್ಟ್ ಪ್ರಕಾರ ನಾಳೆ ಬೆಳ್ತಂಗಡಿ, ಕಾರ್ಕಳ, ಆಗುಂಬೆ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮಡಿಕೇರಿ ಪ್ರದೇಶದಲ್ಲೂ ಹೆಚ್ಚಿನ ಮಳೆಯಾಗಲಿದೆ.