ಮಡಿಕೇರಿ: ಕೊಡಗಿನ ಎರಡು ಕಡೆ ಕಾಡಾನೆ ದಾಳಿ ಮಾಡಿದೆ. ಬಿಟ್ಟಂಗಾಲ ಗ್ರಾಮದಲ್ಲಿ ಬಾಲಕನ ಮೇಲೆ ಆನೆ ದಾಳಿ ಮಾಡಿದರೆ , ವಿರಾಜಪೇಟೆ ಸಮೀಪದ ಅಮ್ಮತ್ತಿ ಒಂಟಿಯಂಗಡಿಯಲ್ಲಿ ಮಹಿಳೆಯ ಮೇಲೆ ಕಾಡಾನೆ ದಾಳಿ ಮಾಡಿದೆ. ಹೀಗಾಗಿ ಆತಂಕದ ಸ್ಥಿತಿ ಇದೆ.
ಕಾಡಾನೆಯೊಂದರ ಹಠಾತ್ ದಾಳಿಗೆ ಸಿಲುಕಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬ ಗಂಭೀರ ಸ್ವರೂಪದಲ್ಲಿ ಗಾಯಗೊಂಡು, ಆತನ ಸಹಪಾಠಿಗಳು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿರುವ ಘಟನೆ ನಗರದಂಚಿನ ಬಿಟ್ಟಂಗಾಲ ಗ್ರಾಮದಲ್ಲಿ ನಡೆದಿದೆ.
ಬಿಟ್ಟಂಗಾಲ ಗ್ರಾಮದ ನಿವಾಸಿ ಬಿ.ಎ.ಸುಭಾಷ್ ಚಂದ್ರ ಮತ್ತು ನೇತ್ರಾವತಿ ದಂಪತಿಗಳ ಪುತ್ರ ಚಂದನ್ ಬಿ.ಎಸ್.(11) ಎಂಬಾತ ಗಾಯಗೊಂಡ ವಿದ್ಯಾರ್ಥಿ. ಕಾಡಾನೆ ದಾಳಿಯಿಂದ ಈತನ ತಲೆ ಮತ್ತು ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಬಿಟ್ಟಂಗಾಲ ಗ್ರಾಮದ ಅಂಬಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಬೆಳಗ್ಗೆ ಸುಭಾಷ್‍ಚಂದ್ರ ಅವರ ಮಕ್ಕಳಾದ ಚಂದನ್, ಈತನ ಸಹೋದರ ಕೀರ್ತನ್, ತಂಗಿ ಶಾಲಿನಿ ಮತ್ತು ಸುಭಾಷ್ ಚಂದ್ರ ಅವರ ತಮ್ಮನ ಮಗ ಪವನ್ ಅವರು ತೆರಳುತ್ತಿದ್ದರು. ಇವರು ಶಾಲೆಗೆ ತೆರಳುವ ಮಾರ್ಗದ ಸಮೀಪದ ಆಲ್ಬರ್ಟ್ ಎಂಬವರ ತೋಟದಲ್ಲಿ ಐದು ಕಾಡಾನೆಗಳ ಹಿಂಡು ಬೀಡುಬಿಟ್ಟಿತ್ತು ಎನ್ನಲಾಗಿದೆ.
ಮಕ್ಕಳು ಶಾಲೆಯತ್ತ ಸಾಗುತ್ತಿದ್ದ ಸಂದರ್ಭ ಹಠಾತ್ತನೆ ಕಾಡಾನೆಯೊಂದು ಮಕ್ಕಳ ಮೇಲೆ ದಾಳಿ ನಡೆಸಿ, ಚಂದನ್‍ನನ್ನು ಸೊಂಡಿಲಿನಿಂದ ಎತ್ತಿ ಒಗೆದಿದೆ. ಈ ಹಂತದಲ್ಲಿ ಭಯಭೀತರಾದ ಸಹಪಾಠಿಗಳು ಜೋರಾಗಿ ಕಿರುಚಿಕೊಂಡು ಸ್ಥಳದಿಂದ ಓಡಿ ಅಪಾಯದಿಂದ ಪಾರಾಗಿ, ಸುತ್ತಮುತ್ತಲಿನ ಮನೆಮಂದಿಗೆ ವಿಷಯ ಮುಟ್ಟಿಸಿದರು.
ತಕ್ಷಣ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಗಾಯಗೊಂಡು ಬಿದ್ದಿದ್ದ ಚಂದನ್‍ನನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು. ನಂತರ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಮಂಗಳೂರಿಗೆ ಕರೆದೊಯ್ಯಲಾಯಿತು.
ಕಾರ್ಮಿಕ ಮಹಿಳೆಯರ ಮೇಲೆ ಕಾಡಾನೆ ದಾಳಿ
ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆಯರ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ವಿರಾಜಪೇಟೆ ಸಮೀಪದ ಅಮ್ಮತ್ತಿ ಒಂಟಿಯಂಗಡಿಯಲ್ಲಿ ನಡೆದಿದೆ. ಒಂಟಿಯಂಗಡಿ ಚಾಮುಂಡಿ ಪೈಸಾರಿಯ ಕಾರ್ಮಿಕ ಮಹಿಳೆ ಅಮ್ಮಾಲು ಬಾಲಕೃಷ್ಣ ಮತ್ತು ಕಮಲಾ ಮಣಿ ಎಂಬುವವರು ಗಾಯಗೊಂಡವರಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಎದುರಾದ ಆನೆ ಈ ಇಬ್ಬರು ಕಾರ್ಮಿಕ ಮಹಿಳೆಯರಿಗೆ ಸೊಂಡಿಲಿನಿಂದ ಗುದ್ದಿ ಪರಾರಿಯಾಗಿದೆ. ಗಾಯಾಳುಗಳನ್ನು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಣ್ಯಾಧಿಕಾರಿ ಗೊಪಾಲ್ ಹಾಗೂ ಸಿಬ್ಬಂದಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಳುಗಳ ಯೋಗಕ್ಷೇಮ ವಿಚಾರಿಸಿದರು.
ಕಾಡಾನೆ ಭಯದಿಂದ ಬಿಟ್ಟಂಗಾಲ ಮಕ್ಕಳು ಶಾಲೆಗೆ ಬರುತ್ತಿಲ್ಲ
ಬಿಟ್ಟಂಗಾಲ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿರುವುದರಿಂದ ಕಾರ್ಮಿಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬಿಟ್ಟಂಗಾಲ ಅಂಬಲ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಕಮಲಾಕ್ಷಿ ಟಿ.ಎನ್. ಕಳವಳ ವ್ಯಕ್ತಪಡಿಸಿದ್ದಾರೆ.
ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿ ಚಂದನ್‍ನನ್ನು ಭೇಟಿ ಮಾಡಿದ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಟ್ಟಂಗಾಲ ವಿಭಾಗದಲ್ಲಿ ಕಾರ್ಮಿಕ ಸಮೂಹ ಹೆಚ್ಚಾಗಿದೆ. ಕಾಡಾನೆಗಳ ಹಾವಳಿಯ ಹಿನ್ನೆಲೆಯಲ್ಲಿ ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆಯೂ ಕ್ಷೀಣಿಸಿದೆ. ಅರಣ್ಯ ಇಲಾಖೆ ಕಾಡಾನೆ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.Advertisement
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…