ಸುಳ್ಯ: ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಠಿಸಿದ್ದ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಚುನಾವಣೆಯ ಅಡ್ಡಮತದಾನಕ್ಕೆ ಬಿಜೆಪಿ ಕ್ರಮ ಕೈಗೊಳ್ಳಲು ಆರಂಭಿಸಿದೆ. ಚುನಾವಣೆಯಲ್ಲಿ ಮತದಾನದ ಪ್ರತಿನಿಧಿಗಳಾಗಿದ್ದ ಗಂಗಾಧರ ರೈ ಪುಡ್ಕಜೆ ಮತ್ತು ರಾಮಕೃಷ್ಣ ರೈ ಮಾಲೆಂಗ್ರಿಯವರನ್ನು ಪಕ್ಷದ ಜವಾಬ್ದಾರಿಯಿಂದ ಮುಕ್ತಗೊಳಿಸುವ ಮೂಲಕ ಇದೇ ಪ್ರಥಮವಾಗಿ ಅಡ್ಡಮತದಾನಕ್ಕೆ ಕ್ರಮ ಜರುಗಿಸಿದ್ದಾರೆ.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲಿ ಏಳು ಮಂದಿ ಅಡ್ಡಮತದಾನ ಮಾಡಿದ ಕಾರಣ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗೆ ಸೋಲಾಗಿತ್ತು.
ಅಡ್ಡಮತದಾನ ಮಾಡಿದವರನ್ನು ಪತ್ತೆ ಮಾಡಲು ಸಾಧ್ಯವಾಗದ ಹಿನ್ನಲೆಯಲ್ಲಿ ಚುನಾವಣಾ ಪ್ರತಿನಿಧಿಗಳಾಗಿದ್ದ ಎಲ್ಲರೂ ಜೂ.25ರೊಳಗೆ ರಾಜಿನಾಮೆ ನೀಡಬೇಕು ಎಂದು ಬಿಜೆಪಿ ಮತ್ತು ಸಂಘ ಪರಿವಾರದ ಕಡೆಯಿಂದ ಸೂಚನೆ ನೀಡಲಾಗಿತ್ತು. ಜೂನ್.30ರ ಬಳಿಕ ಪಕ್ಷದ ಕೋರ್ ಕಮಿಟಿ ಸಭೆ ಸೇರಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಘೋಷಿಸಿತು. ಈ ಹಿನ್ನಲೆಯಲ್ಲಿ ಕ್ರಮ ಜರುಗಿಸಲು ಆರಂಭಿಸಿದೆ.
ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗಂಗಾಧರ ರೈ ಪುಡ್ಕಜೆ ಮತ್ತು ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿಯವರನ್ನು ಕಾರಣನಿಮಿತ್ತ ಪಕ್ಷದ ಎಲ್ಲಾ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮತ್ತು ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಈ ಅಂಶವನ್ನು ಗಮನದಲ್ಲಿರಿಸಿಕೊಳ್ಳಬೇಕಾಗಿ ಈ ಮೂಲಕ ಕೋರಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಹೇಳಿಕೆಯಲ್ಲಿ ಅಡ್ಡಮತದಾನದ ಕುರಿತು ಪ್ರಸ್ತಾಪವಾಗಿಲ್ಲ. ಆದರೆ ಅಡ್ಡಮತದಾನಕ್ಕೆ ಸಂಬಂಧಪಟ್ಟು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಸೂಚನೆಯ ಮೇರೆಗೆ 5 ಮಂದಿ ಈಗಾಗಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಉಳಿದವರು ಒಂದೆರಡು ದಿನದಲ್ಲಿ ರಾಜಿನಾಮೆ ಸಲ್ಲಿಸುವ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಕ್ರಮ ಮುಂದುವರಿಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ.