ಸೌತಾಂಪ್ಟನ್: ಫಾಸ್ಟ್ ಬೌಲರ್ ಮಹಮ್ಮದ್ ಶಮಿ ಕೊನೆಯ ಓವರ್ ನಲ್ಲಿ ಆಕರ್ಷಕ ಹ್ಯಾಟ್ರಿಕ್ ಪಡೆಯುವ ಮೂಲಕ ಭಾರತಕ್ಕೆ 11 ರನ್ ಗಳ ರೋಚಕ ಜಯ ಗಳಿಸಿದೆ.
ಕ್ರಿಕೆಟ್ ನ ಶಿಶುಗಳು ಎಂದೇ ಹೇಳಲಾಗುತ್ತಿರುವ ಅಪ್ಘಾನಿಸ್ಥಾನದ ವಿರುದ್ದ ನಿರಾಶಾದಾಯಕ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ 225 ರನ್ ಗಳ ಗುರಿ ನೀಡಿತ್ತು. ಕೊನೆಯವರೆಗೆ ಹೋರಾಟ ನಡೆಸಿದ ಅಫಘಾನಿಸ್ಥಾನ 49.5 ಓವರ್ ಗಳಲ್ಲಿ 213 ರನ್ ಗಳಿಗೆ ಆಲೌಟಾಗಿ 11 ರನ್ ಗಳ ಸೋಲೊಪ್ಪಿಕೊಂಡಿತ್ತು.
ಅಫಘಾನ್ ತಂಡದ ಮಾಜಿ ನಾಯಕ ಮುಹಮ್ಮದ್ ನಬಿ (52 ರನ್, 55 ಎಸೆತ, 4 ಬೌಂಡರಿ, 1 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರೂ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.
ಅಫ್ಘಾನ್ ಗೆ ಕೊನೆಯ ಓವರ್‌ನಲ್ಲಿ 16 ರನ್ ಅಗತ್ಯವಿತ್ತು. ಆದರೆ, ಅದು 4 ರನ್ ಗಳಿಸಿ 11 ರನ್‌ಗಳ ವೀರೋಚಿತ ಸೋಲುಂಡಿತು. ಕೊನೆಯ ಓವರ್ ಎಸೆದ ಮುಹಮ್ಮದ್ ಶಮಿ(4-40) ಹ್ಯಾಟ್ರಿಕ್ ವಿಕೆಟ್ ಪಡೆದು ಗಮನ ಸೆಳೆದರು.
ಅಫ್ಘಾನ್ ಪರ ರಹ್ಮತ್ ಶಾ(36), ಗುಲ್ಬದ್ದೀನ್ ನೈಬ್(27) ಹಶ್ಮತುಲ್ಲಾ ಶಾಹಿದಿ(21), ನಜೀಬುಲ್ಲಾ ಝದ್ರಾನ್(21) ಹಾಗೂ ರಶೀದ್ ಖಾನ್(14)ಎರಡಂಕೆಯ ಸ್ಕೋರ್ ಗಳಿಸಿದರು.
ಭಾರತ ಪರ ಬುಮ್ರಾ(2-39), ಚಹಾಲ್(2-36) ಹಾಗೂ ಹಾರ್ದಿಕ್ ಪಾಂಡ್ಯ(2-51) ತಲಾ ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 224 ರನ್ ಗಳಿಸಿತು. ಆರಂಭದಿಂದಲೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಜಸಪ್ರೀತ್ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.