ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಕಳೆದ 10 ದಿನಗಳಿಂದ ಸತತವಾಗಿ ಶುಭ ಸುದ್ದಿ. ಮಂಗಳವಾರ ಕೊರೊನಾ ವೈರಸ್ ಸೋಂಕಿತ ವ್ಯಕ್ತಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇದೇ ವೇಳೆ ಮಂಗಳವಾರವೂ ಕೊರೊನಾ ವೈರಸ್ ನೆಗೆಟಿವ್ ವರದಿ ಬಂದಿದೆ. ಸದ್ಯ ದ ಕ ಜಿಲ್ಲೆ ನೆಮ್ಮದಿಯತ್ತ ಸಾಗಿದೆ.
ಮಂಗಳವಾರದ ಪುತ್ತೂರು ಮೂಲದ ಕೊರೊನಾ ವೈರಸ್ ಸೋಂಕಿತ ವ್ಯಕ್ತಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ದುಬೈಯಿಂದ ಪುತ್ತೂರಿಗೆ ಆಗಮಿಸಿದ್ದ ಸುಮಾರು 49 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡುಬಂದಿತ್ತು. ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮಾಡಲಾಗಿದೆ. ನಿರಂತರ ಚಿಕಿತ್ಸೆ ಬಳಿಕ ಇದೀಗ ಅವರು ಗುಣಮುಖರಾಗಿದ್ದು, ಇದೀಗ ನಡೆಸಿರುವ ಪರೀಕ್ಷೆಗಳಲ್ಲಿ ನೆಗೆಟಿವ್ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆಗೊಳಿಸಲಾಗಿದೆ.
ಒಟ್ಟು 12 ಮಂದಿ ಕೊರೊನಾ ವೈರಸ್ ಸೋಂಕಿತರ ಪೈಕಿ ಒಟ್ಟು 9 ಮಂದಿ ಡಿಸ್ಚಾರ್ಜ್ ಆದಂತಾಗಿದೆ. ಮಂಗಳವಾರ ಲಭ್ಯವಾದ ಎಲ್ಲಾ 12 ವರದಿಗಳೂ ನೆಗೆಟಿವ್ ಬಂದಿದೆ. ಮಂಗಳವಾರ ಕಳುಹಿಸಿದ 156 ಮಂದಿಯ ಗಂಟಲ ದ್ರವ ಸಹಿತ ಒಟ್ಟು 168 ಮಂದಿಯ ಗಂಟಲ ದ್ರವದ ಪರೀಕ್ಷಾ ವರದಿ ಬರಲು ಬಾಕಿ ಇದೆ.