ಮಂಗಳೂರು: ಕೊರೋನಾ ವೈರಸ್ ಹರಡುವ ಭೀತಿಯಿಂದ ಭಾರತ 21 ದಿನಗಳ ಲಾಕ್ ಡೌನ್ ಆಗಿದೆ. ಅಗತ್ಯ ಸೇವೆಗಳ ಲಭ್ಯವಿದೆ ಎಂದು ಸರಕಾರ ಹೇಳಿದ್ದರೂ ಮಂಗಳೂರಿನಲ್ಲಿ ನಾಳೆಯಿಂದ ಸಂಪೂರ್ಣ ಬಂದ್ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟಿಲು ಹೇಳಿದ್ದಾರೆ. ಇಂದು ಅಗತ್ಯ ವಸ್ತು ಖರೀದಿಗೆ ಸಮಯ ಕೊಡಲಾಗಿದೆ. ನಾಳೆಯಿಂದ ಮಂಗಳೂರಿನಲ್ಲಿ ಯಾವ ದಿನಸಿ ಅಂಗಡಿಗಳು ತೆರೆದಿರುವುದಿಲ್ಲ. ಈ ಬಗ್ಗೆ ಜಿಲ್ಲೆಯ ಎಲ್ಲಾ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಆದರೆ ಜನರಿಗೆ ಬೇಕಾದ ಎಲ್ಲಾ ವಸ್ತುಗಳನ್ನು ನಾವೇ ಮನೆಗೆ ತಲುಪಿಸುತ್ತೇವೆ. ಆದರೆ ಇದನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಯೋಚನೆ ನಡೆಯುತ್ತಿದೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಕೇರಳ ಭಾಗದಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಂಬ್ಯುಲೆನ್ಸ್ ಗಳ ಮೂಲಕ ಮಂಗಳೂರಿಗೆ ರೋಗಿಗಳು ಬರುತ್ತಿರುವುದು ಗಮನಕ್ಕೆ ಬಂದಿದೆ. ಸದ್ಯದ ಸ್ಥಿತಿಯಲ್ಲಿ ಮಂಗಳೂರಿನಲ್ಲಿರುವ ಆಸ್ಪತ್ರೆ ಜಿಲ್ಲೆಯ ಜನರಿಗೇ ಸಾಕಾಗುವುದಿಲ್ಲ. ಹೀಗಾಗಿ ಹೊರಗಿನ ಯಾವುದೇ ವಾಹನ, ಅಂಬ್ಯುಲೆನ್ಸ್ ಗಳನ್ನು ಜಿಲ್ಲೆಯ ಒಳಗೆ ಬಿಡಬಾರದು ಎಂದು ನಿರ್ಧರಿಸಲಾಗಿದೆ. ಎಲ್ಲಾ ಅಂಬ್ಯುಲೆನ್ಸ್ ಗಳನ್ನು ತಲಪಾಡಿ ಗಡಿಯಲ್ಲೇ ನಿರ್ಬಂಧಿಸಲಾಗುತ್ತಿದೆ ಎಂದಿದ್ದಾರೆ.