ಮಡಿಕೇರಿ : ನಾಪೋಕ್ಲು ಬಳಿಯ ಈಸ್ಟ್ ಕೊಳಕೇರಿ ಗ್ರಾಮದ ಮೂಟೇರಿ ಭಗವತಿ (ಶ್ರೀ ಉಮಾಮಹೇಶ್ವರಿ) ದೇವಸ್ಥಾನಕ್ಕೆ ನುಗ್ಗಿರುವ ಕಳ್ಳರು ಎರಡು ಬೆಳ್ಳಿಯ ವಿಗ್ರಹಗಳು, 40 ಸಾವಿರ ನಗದು ಸೇರಿದಂತೆ ಒಂದು ಲಕ್ಷಕ್ಕೂ ಅಧಿಕ ಬೆಲೆಯ ವಸ್ತುಗಳನ್ನು ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶನಿವಾರ ರಾತ್ರಿ ಕೃತ್ಯ ನಡೆದಿದ್ದು, ದೇವಾಲಯದ ಬಾಗಿಲು ತೆರೆದಿರುವ ಕಳ್ಳರು ಗಣಪತಿ ಗುಡಿಯಲ್ಲಿದ್ದ ಎರಡು ಬೆಳ್ಳಿಯ ವಿಗ್ರಹಗಳು, ಒಂದು ಬೆಳ್ಳಿಯ ಚೆಂಬು, ಒಂದು ಶಂಖ ಸೇರಿದಂತೆ ಭಂಡಾರದಲ್ಲಿದ್ದ ಅಂದಾಜು 40 ಸಾವಿರ ನಗದನ್ನು ದೋಚಿದ್ದಾರೆ. ಭಾನುವಾರ ಬೆಳಗ್ಗೆ ಗ್ರಾಮಸ್ಥರಾದ ಮುಕ್ಕಾಟಿರ ಅಣ್ಣಯ್ಯ ಎಂಬುವರು ದೇವಸ್ಥಾನಕ್ಕೆ ತೆರಳಿದ ಸಂದರ್ಭ ದೇವಸ್ಥಾನದ ಗರ್ಭಗುಡಿ, ಗಣಪತಿ ಗುಡಿಯ ಬಾಗಿಲು ತೆರೆದಿರುವುದನ್ನು ಗಮನಿಸಿ ದೇವಾಲಯದ ಆರ್ಚಕರಾದ ಗಜಾನನ ಭಟ್ ಹಾಗೂ ಗ್ರಾಮಸ್ಥರಿಗೆ ತಿಳಿಸಿದರು.
ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಅಪ್ಪಚ್ಚೀರ ರಮ್ಮಿ ನಾಣಯ್ಯ ಹಾಗೂ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ನಾಪೋಕ್ಲು ಪೊಲೀಸರಿಗೆ ದೂರು ನೀಡಿದರು. ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ದಿವಾಕರ್, ನಾಪೋಕ್ಲು ಠಾಣಾಧಿಕಾರಿ ಮಂಚಯ್ಯ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪೊಲೀಸ್ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.