ಜಲಮರುಪೂರಣ ಈಗ ಎಲ್ಲೆಡೆ ಕೇಳಿಬರುತ್ತಿರುವ ಮಾತು. ಸುಳ್ಯ ತಾಲೂಕಿನ ಪಂಜದ ಕೃಷಿಕ ಹಾಗೂ ಉದ್ಯಮಿ ಸಂಗಾತಿ ಸ್ಟೋರ್ಸ್ ನ ವೆಂಕಟ್ರಮಣ ಭಟ್ ಯೋಜನಾಬದ್ಧವಾಗಿ ಕೊಳವೆಬಾವಿಗೆ ಜಲಮರುಪೂರಣ ಮಾಡುತ್ತಿದ್ದಾರೆ. ಇದೀಗ ಈ ವ್ಯವಸ್ಥೆ ಗಮನ ಸೆಳೆದಿದೆ. ನೀರಿಗಾಗಿ 24 ಕೊಳವೆ ಬಾವಿ ತೆಗೆದು ಅದರಲ್ಲಿ 3 ಕೊಳವೆಬಾವಿಯಲ್ಲಿ ಮಾತ್ರವೇ ನೀರು ಕಾಣುತ್ತಿದೆ. ಉಳಿದವೆಲ್ಲಾ ಬತ್ತಿದೆ. ಇದೀಗ ಜಲಮರುಪೂರಣ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮಳೆ ನೀರು ಒಂದಾದ ನಂತರ ಒಂದು ಕೊಳವೆಬಾವಿಗೆ ತುಂಬುತ್ತದೆ. ಇಲ್ಲಿ ಬಳಕೆ ಮಾಡಿರುವ ಫಿಲ್ಟರ್ ಹಾಗೂ ಜಲಮರುಪೂರಣ ವ್ಯವಸ್ಥೆ ಮಾದರಿ ಎನಿಸಿದೆ.
Advertisement
ಪಂಜ: ಜಲಮರುಪೂರಣ ಆಗಲೇ ಬೇಕು. ಇದಕ್ಕೆ ಇಂಗುಗುಂಡಿ ಒಂದು ಮಾರ್ಗವಾದರೆ ಇತರ ಹಲವಾರು ಮಾರ್ಗಗಳು ಇವೆ. ಇದರಲ್ಲಿ ಕೊಳವೆ ಬಾವಿ ರೀಜಾರ್ಜ್ ಕೂಡಾ ಒಂದು ಉಪಾಯ. ಬೋರ್ ವೆಲ್ ರೀಚಾರ್ಜ್ ಮಾಡುವ ಹಲವಾರು ಮಂದಿ ಇದ್ದಾರೆ. ಆದರೆ ಪಂಜದ ಸಂಗಾತಿ ಸ್ಟೋರ್ಸ್ ನ ವೆಂಕಟ್ರಮಣ ಭಟ್ ಅವರ ಯೋಜನಾಬದ್ಧ ವ್ಯವಸ್ಥೆ ಗಮನಸೆಳೆದಿದೆ.
ವೆಂಕಟ್ರಮಣ ಭಟ್ ಅವರು ಇದುವರೆಗೆ 24 ಕೊಳವೆ ಬಾವಿ ತೆಗೆದಿದ್ದಾರೆ. ಅದರಲ್ಲಿ ಕೆಲವುದರಲ್ಲಿ ಮಾತ್ರಾ ನೀರಿದೆ. ಬೇಸಗೆಯಲ್ಲಿ ತೋಟ ಒಣಗುತ್ತದೆ ಎಂದು ಅನಿಸಿದ ತಕ್ಷಣವೇ ಕೊಳವೆಬಾವಿ ತೆಗೆಯುತ್ತಿದ್ದರು. ಈ ವರ್ಷ ಅವರಿಗೆ ಕೊಳವೆಬಾವಿ ರೀಜಾರ್ಜ್ ಮಾಡಬೇಕು ಎಂದು ಅನಿಸಿತು. ಕೊಳವೆ ಬಾವಿ ತೆಗೆಯುವುದೇ ಪರಿಹಾರವಲ್ಲ. ತೆಗೆದ ನೀರನ್ನು ತುಂಬಿಸಬೇಕು. ಅಂತರ್ಜಲ ತುಂಬಿಸುವುದೂ ನಮ್ಮ ಕರ್ತವ್ಯ ಎಂದು 24 ಕೊಳವೆ ಬಾವಿಗೂ ರೀಜಾರ್ಜ್ ಮಾಡಲು ಯೋಜನೆ ಹಾಕಿಕೊಂಡರು. ಇದರ ಫಲವಾಗಿ ಈ ವರ್ಷ ಕನಿಷ್ಟ 3 ಕೊಳವೆಬಾವಿಗೆ ರೀಚಾರ್ಜ್ ಮಾಡುವ ಉದ್ದೇಶ ಇರಿಸಿಕೊಂಡು ಕೆಲಸಕ್ಕೆ ಇಳಿದರು.
ಮನೆಯ ಛಾವಣಿ ನೀರನ್ನು ಸಂಗ್ರಹ ಮಾಡಿ ಅದಕ್ಕೆ ವಿಶೇಷ ಮಾದರಿಯ ಪಿಲ್ಟರ್ ಅಳವಡಿಕೆ ಮಾಡಿ ಆ ನೀರು ಮೊದಲನೇ ಕೊಳವೆಬಾವಿಗೆ ಸೇರುತ್ತದೆ. ಆ ಕೊಳವೆಬಾವಿ ಎಲ್ಲಾ ನೀರನ್ನು ಏಕಕಾಲಕ್ಕೆ ತೆಗೆದುಕೊಳ್ಳುವುದಿಲ್ಲ. ಕೊಂಚ ಕೊಂಚವೇ ರೀಜಾರ್ಜ್ ಆಗುತ್ತದೆ. ಹೆಚ್ಚಾದ ನೀರು ಕೊಳವೆಬಾವಿಯ ಮೇಲ್ಭಾಗದಲ್ಲಿ ತೆಗೆದು ತೂತಿನ ಮೂಲಕ ನೀರು ಇನ್ನೊಂದು ಕೊಳವೆಬಾವಿಗೆ ಹೋಗುತ್ತದೆ. ಅದರಲ್ಲೂ ಹೆಚ್ಚಾದ ನೀರು ಮತ್ತೊಂದು ಕೊಳವೆಬಾವಿಗೆ ಹೋಗುತ್ತದೆ. ಎಲ್ಲವೂ ಅಂಡರ್ ಗ್ರೌಂಡ್ ಪೈಪ್ ಮೂಲಕ ವ್ಯವಸ್ಥೆ. ಇದು ಅವರ ಯೋಜನೆ.
ಮನೆಯ ಛಾವಣಿಗೆ ಅಳವಡಿಕೆ ಮಾಡಿರುವ ಪಿಲ್ಟರ್ ಕೂಡಾ ಆಧುನಿಕ ವಿನ್ಯಾಸ ಹಾಗೂ ವ್ಯವಸ್ಥೆ ಒಳಗೊಂಡಿದೆ ಎಂದು ಅವರು ಹೇಳುತ್ತಾರೆ. ಮಳೆ ಬಂದಾಗ ಛಾವಭಿಯಲ್ಲಿದ್ದ ಕಸ, ಕಡ್ಡಿಗಳು ನೀರಿನ ಜೊತೆ ಬರುತ್ತದೆ. ಇದು ಕೊಳವೆಬಾವಿಗೆ ಸೇರದಂತೆ ಪಿಲ್ಟರ್ ಇದೆ. ಅದರ ಜೊತೆಗೆ ಪಿಲ್ಟರ್ ಕೆಳಭಾಗದಲ್ಲಿ ಟ್ಯಾಪ್ ಇದೆ. ಇದು ಬಿಟ್ಟಿದ್ದರೆ ಸೆಲ್ಫ್ ಕ್ಲೀನಿಂಗ್ ಆಗುತ್ತದೆ ಎನ್ನುತ್ತಾರೆ ಅವರು. ಇಲ್ಲಿ ಅಲ್ಪ ಪ್ರಮಾಣದ ನೀರು ಭೂಮಿಗೆ ಹೋದರೂ ಪರವಾಗಿಲ್ಲ. ಆದರೆ ಸ್ವಚ್ಛವಾದ ನೀರು ಕೊಳವೆಬಾವಿಗೆ ಇಳಿಯುತ್ತದೆ ಎಂದು ಹೇಳುತ್ತಾರೆ ವೆಂಕಟ್ರಮಣ ಭಟ್. ಇದೀಗ ಈ ಮಾದರಿಯ ಫಿಲ್ಟರ್ ಕೂಡಾ ಗಮನಸೆಳೆದಿದೆ.
ವೆಂಕಟ್ರಮಣ ಭಟ್ ಹೇಳುವ ಪ್ರಕಾರ ಪ್ರತಿಯೊಬ್ಬರೂ ಜಲಪಮರುಪೂರಣ ಮಾಡಬೇಕು. ನಾನು ಅನೇಕ ವರ್ಷಗಳಿಂದ ಭೂಮಿಯ ಒಳಗಿದ್ದ ನೀರು ತೆಗೆದೆ. ನಿರಂತರವಾಗಿ ಕೊಳವೆಬಾವಿ ತೆಗೆದೆ. ಈಚೆಗೆ ತೆಗೆದ ಕೊಳವೆಬಾವಿಯಲ್ಲಿ ಉತ್ತಮ ನೀರಿತ್ತು. ಆದರೆ ನಂತರ ಕಡಿಮೆಯಾಗುತ್ತಾ ಸಾಗಿದೆ. ಈಗ ಜ್ಞಾನೋದಯವಾಗಿದೆ, ನಾವು ತೆಗೆದ ನೀರನ್ನು ಭೂಮಿಗೆ ಮತ್ತೆ ತುಂಬಿಸಲೇಬೇಕು.ಈ ರೀತಿ ಮಾಡುವುದರಿಂದ ನನಗೆ ಮಾತ್ರಾ ಪ್ರಯೋಜನ ಎಂದು ಭಾವಿಸಬಾರದು. ಇದೊಂದು ಸಾಮಾಜಿಕ ಕಾರ್ಯ ಎಂದು ಈ ಕೆಲಸ ಮಾಡಬೇಕು, ಈ ಮೂಲಕ ಭೂಮಿಯ ಋಣ ತೀರಿಸಬೇಕು ಎನ್ನುತ್ತಾರೆ.
Advertisement
ಅವರೇ ಲೆಕ್ಕ ಹಾಕಿ ಹೇಳುವ ಪ್ರಕಾರ
1 ಮೀಟರ್ ಪ್ರದೇಶದಲ್ಲಿ (ಸುಮಾರು10*10) ಸರಾಸರಿ ವರ್ಷದಲ್ಲಿ (ಜೂನ್-ಜೂನ್) 4500 ಲೀಟರ್ ಮಳೆ ನೀರು ಸಂಗ್ರಹವಾಗುತ್ತದೆ. ಒಬ್ಬನಿಗೆ ಒಂದು ದಿನಕ್ಕೆ ಸರಾಸರಿ 90 ರಿಂದ 100 ಲೀಟರ್ ನೀರು ಬೇಕಾಗುತ್ತದೆ. ಹೀಗಾಗಿ ಒಂದು ವರ್ಷ ಸಂಗ್ರಹವಾದ ಮಳೆ ನೀರು ಒಬ್ಬ ವ್ಯಕ್ತಿಗೆ 45 ದಿನಕ್ಕೆ ಸಾಕಾಗಬಹುದು. ಈ ಪ್ರಕಾರ ವರ್ಷಕ್ಕೆ ಎಷ್ಟು ನೀರು ಬೇಕಾಗುತ್ತದೆ ಎನ್ನುವುದನ್ನು ಲೆಕ್ಕ ಹಾಕಿ ಅಷ್ಟು ಪ್ರದೇಶದ ನೀರು ಸಂಗ್ರಹ ಮಾಡಿ ಬಳಕೆ ಮಾಡಬಹುದು ಎನ್ನುತ್ತಾರೆ ವೆಂಕಟ್ರಮಣ ಭಟ್.
ಜಲಮರುಪೂರಣದ ಬಗ್ಗೆ ಯಾವುದೇ ಸಂದರ್ಭದಲ್ಲಿ ಉಚಿತ ಮಾಹಿತಿ ನೀಡಲು ವೆಂಕಟ್ರಮಣ ಭಟ್ ಅವರು ಸಿದ್ಧರಿದ್ದಾರೆ. ಈ ಬಗ್ಗೆ ಕರೆ ಮಾಡಿ ನಂತರ ಭೇಟಿ ನೀಡಬಹುದು ಎಂದು ಅವರ ಸಂಪರ್ಕ ಸಂಖ್ಯೆ : 9686477505