ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಬ್ರಹ್ಮ’
ಪ್ರಸಂಗ : ಬ್ರಹ್ಮಕಪಾಲ
(ಶಾರದೆಗೆ ವಿದ್ಯಾಧಿದೇವತೆಯ ಸ್ಥಾನವನ್ನು ಕೊಡಲುದ್ಯುಕ್ತನಾದ ಬ್ರಹ್ಮನು ಮನ್ಮಥ ಮತ್ತು ಈಶ್ವರನಿಗೆ ಪಟ್ಟಾಭಿಷೇಕ ಸಮಾರಂಭಕ್ಕೆ ಆಮಂತ್ರಣವಿಲ್ಲ – ಎನ್ನುವ ಸಂದರ್ಭ)
“… ಶಾರದಾ…. ನಿನ್ನ ಪಟ್ಟಾಭಿಷೇಕಕ್ಕೆ ಕಾಮ ಬರಕೂಡದು. ಕಾಮದ ನಂತರ ಕ್ರೋಧ. ಕ್ರೋಧ ಬಂದಾಗ ಬುದ್ಧಿ ನಷ್ಟ. ಬುದ್ಧಿ ನಷ್ಟವಾದರೆ ಸರ್ವನಾಶ. ಈ ಕಾಮಕ್ಕೆ ಗಂಡು ಹೆಣ್ಣನ್ನು ಒಂದುಗೂಡಿಸುವ ಕೆಲಸ. ನೀನು ಕಾಳನ್ನು ನೋಡಿರಬಹುದು. ಅದರಲ್ಲಿ ಹೊಟ್ಟು ಇದ್ದರೆ ಪ್ರಯೋಜನವಿಲ್ಲ. ಈ ಹೊಟ್ಟಿಗೂ ಕಾಳಿಗೂ ಸಂಬಂಧ ಕಲ್ಪಿಸುವ ಯಾವ ಸ್ನಿಗ್ಧ ಪದಾರ್ಥ ಇದೆಯೋ ಅದಕ್ಕೆ ‘ಸ್ನೇಹ’ ಅಂತ ಹೆಸರು. ಇದು ಕಾಮದ ಸೂಕ್ಷ್ಮ ಸ್ವರೂಪ. ಆ ಸ್ನಿಗ್ಧ ಪದಾರ್ಥ ಹುರಿಯುವುದರಿಂದಲೋ, ಸುಡುವುದರಿಂದಲೋ ನಷ್ಟವಾದರೆ ಬಿತ್ತಿದರೆ ಬೆಳೆ ಬರುವುದಿಲ್ಲ ಎಂಬ ನ್ಯಾಯೇಣ ಕಾಮನ ಸಂಪರ್ಕವೂ ಈ ವಿದ್ಯಾಪೀಠಕ್ಕೆ ಬರಕೂಡದು. ಆದ್ದರಿಂದ ಅವನು ತಿರಸ್ಕರಣೀಯ.
ಮತ್ತೊಬ್ಬನಿದ್ದಾನೆ. ತತ್ವತಃ ನಾವೆಲ್ಲಾ ಒಂದೇ. ‘ಸತ್ಯಂ ಶಿವಂ ಸುಂದರಂ’. ಅವನೀಗ ರುದ್ರನಾಗಿ ಪ್ರಪಂಚವನ್ನೇ ನಾಶ ಮಾಡುವಂತಹ ಒಂದು ಕರ್ತವ್ಯ ವಹಿಸಿಕೊಂಡಿದ್ದಾನೆ. ‘ಶಿವ’ನೆಂಬ ಅರ್ಥದಲ್ಲೂ ಅವನಿಗೆ ಜ್ಞಾನದೇವತೆಯ ಅವಶ್ಯಕತೆಯಿಲ್ಲ. ಪ್ರಾಪಂಚಿಕವಾಗಿ ರುದ್ರನಾಗಿದ್ದ ಅವನಿಗೆ ಯಾಕೆ ವಿದ್ಯಾಪೀಠ? ತಮೋಗುಣದಿಂದ ಎಲ್ಲವನ್ನೂ ನಾಶಮಾಡುವವನು. ಹಾಗಾಗಿ ತಮೋಗುಣ ಅಧಿಷ್ಠಾನನೆನಿಸಿದ ಶಂಕರನಿಗೂ ಆಮಂತ್ರಣವಿಲ್ಲ. ಕಾಮನಿಗೂ ಆಮಂತ್ರಣವಿಲ್ಲ.
ನರಕಕ್ಕೆ ಮೂರು ಹೆಬ್ಬಾಗಿಲು. ಕಾಮ, ಕ್ರೋಧ, ಲೋಭ. ಈ ಕಾಮ ಕ್ರೋಧಗಳ ವ್ಯತಿರಿಕ್ತ ಸ್ವಭಾವಗಳ ಸ್ವರೂಪವೇ ರುದ್ರ ಮತ್ತು ಕಾಮ. ಇವರನ್ನು ಬಿಟ್ಟು ಮಿಕ್ಕವರಿಗೆಲ್ಲಾ ಆಮಂತ್ರಣ ಕೊಟ್ಟಿದ್ದೇನೆ..”