ಸುಳ್ಯ: ಹಿಂದೆಂದಿಗಿಂತಲೂ ಮಹಾತ್ಮಾ ಗಾಂಧೀಜಿಯವರ ಚಿಂತನೆ ಇಂದು ಪ್ರಸ್ತುತವಾಗಿದೆ. ಮಹಾತ್ಮಾ ಗಾಂಧೀಜಿಯವರ ಆರ್ಥಿಕ ಚಿಂತನೆ ಅನುಷ್ಠಾನವಾಗದ ಕಾರಣ ದೇಶದಲ್ಲಿ ಆರ್ಥಿಕ ಅಭಿವೃದ್ಧಿಯಲ್ಲಿ ಹಿನ್ನಡೆ ಉಂಟಾಗುತ್ತಿದೆ, ನಿರುದ್ಯೋಗ ಸಮಸ್ಯೆ ಉಲ್ಬಣಿಸಿದೆ ಎಂದು ಆರ್ಥಿಕ ತಜ್ಞ, ಸಾಹಿತಿ ಡಾ.ಪ್ರಭಾಕರ ಶಿಶಿಲ ಅಭಿಪ್ರಾಯಪಟ್ಟಿದ್ದಾರೆ.
ಸುಳ್ಯದ ಗಾಂಧಿ ಚಿಂತನ ವೇದಿಕೆಯ ನೇತೃತ್ವದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ದಿನವಾದ ಗುರುವಾರ ಯುವಜನ ಸಂಯುಕ್ತ ಮಂಡಳಿ ಸಮೀಪದ ಮೈದಾನದಲ್ಲಿ ನಡೆದ ಸದ್ಭಾವನಾ ಉಪವಾಸ ಮತ್ತು ಗಾಂಧಿ ಸ್ಮರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಮೂಲಕ ಪ್ರತಿಯೊಬ್ಬರೂ ಉತ್ಪಾದಕರಾಗಬೇಕು ಎಂಬ ತತ್ವವನ್ನು ಗಾಂಧೀಜಿ ಬೋಧಿಸಿದ್ದರು. ಆದರೆ ನಾವು ಬೃಹತ್ ಕೈಗಾರಿಕೆಗಳಿಗೆ ಒತ್ತು ನೀಡಿದ ಕಾರಣ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ನಿಂತು ಹೋಗಲು ಕಾರಣವಾಯಿತು. ಇದರಿಂದ ಆರ್ಥಿಕ ಹಿನ್ನಡೆ, ನಿರುದ್ಯೋಗ ಸಮಸ್ಯೆ ಉಂಟಾಗಿದೆ ಎಂದು ಅವರು ಹೇಳಿದರು. ಗಾಂಧೀಜಿಯವರು 20ನೇ ಶತಮಾನದ ಅತೀ ದೊಡ್ಡ ಸಂತ ಎಂದು ಜಗತ್ತೇ ಒಪ್ಪಿಕೊಂಡಿದೆ. ಉಪವಾಸ, ಅಹಿಂಸೆಯ ಮೂಲಕ ಅವರು ಇಡೀ ಜಗತ್ತನ್ನೇ ಗೆದ್ದುಕೊಂಡಿದ್ದರು. ಉಪವಾಸದಿಂದ ಸಂಯಮ ಗಳಿಸಲು ಸಾಧ್ಯ. ಸಂಯಮ ಇದ್ದರೆ ಏನನ್ನು ಬೇಕಾದರು ಸಾಧಿಸಬಹುದು ಎಂದು ಡಾ.ಶಿಶಿಲ ಹೇಳಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ನೆಹರೂ ಸ್ಮಾರಕ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ಗಿರಿಧರ ಗೌಡ, ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎ.ಜ್ಞಾನೇಶ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿ, ಸುಳ್ಯ ಎಸ್‍ಐ ಎಂ.ಆರ್.ಹರೀಶ್, ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ಮಾತನಾಡಿದರು. ಪತ್ರಕರ್ತ ಡಾ.ಯು.ಪಿ.ಶಿವಾನಂದ ಅಧ್ಯಕ್ಷತೆ ವಹಿಸಿದ್ದರು. ಗಾಂಧಿ ಚಿಂತನ ವೇದಿಕೆಯ ಸಂಚಾಲಕರಾದ ಹರೀಶ್ ಬಂಟ್ವಾಳ್, ದಿನೇಶ್ ಮಡಪ್ಪಾಡಿ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಶಂಕರ್ ಪೆರಾಜೆ, ಉಪನ್ಯಾಸಕ ಸಂಜೀವ ಕುದ್ಪಾಜೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಸದ್ಭಾವನಾ ಉಪವಾಸ, ಸರ್ವಧರ್ಮ ಪ್ರಾರ್ಥನೆ, ಮೀರಾ ಭಜನ್, ಗಾಂಧೀಜಿ ಕುರಿತು ಉಪನ್ಯಾಸ ನಡೆಯಿತು.