ಗುತ್ತಿಗಾರು: ಗುತ್ತಿಗಾರು-ಕಮಿಲ-ಬಳ್ಪ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಭಾನುವಾರ ಸಂಜೆ ನೆರವೇರಿತು. ಶಾಸಕ ಎಸ್ ಅಂಗಾರ ಗುದ್ದಲಿ ಪೂಜೆ ನೆರವೇರಿಸಿದರು.
1.20 ಕೋಟಿ ರೂಪಾಯಿಯಲ್ಲಿ ಅಭಿವೃದ್ಧಿಗೊಳ್ಳುವ ರಸ್ತೆಯು ಗುತ್ತಿಗಾರಿನಿಂದ ದೇವಸ್ಯದವರೆಗೆ ಲೋಕೊಪಯೋಗಿ ಇಲಾಖೆಯ ಮೂಲಕ ಕಾಂಕ್ರೀಟೀಕರಣ ಹಾಗೂ ಕಮಿಲ ಶಾಲೆಯವರೆಗೆ ಜಿಪಂ ಮೂಲಕ ಕಾಂಕ್ರೀಟೀಕರಣ ಹಾಗೂ ಕಮಿಲದಲ್ಲಿ ಕಾಂಕ್ರೀಟೀಕರಣ ಮಾಡಿ ನಂತರ ಉಳಿಕೆ ಭಾಗವನ್ನು ಸುಗ್ರಾಮ ಯೋಜನೆಯ ಮೂಲಕ ಅಥವಾ ಬೇರೆ ಯಾವುದಾದರೂ ಅನುದಾನದ ಮೂಲಕ ದುರಸ್ತಿ ಮಾಡಿಸುವುದಾಗಿ ಶಾಸಕ ಅಂಗಾರ ಹೇಳಿದರು.
ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಅಂಗಾರ, ಗ್ರಾಮಗಳ ಅಭಿವೃದ್ಧಿ ಕಡೆಗೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಆದರೆ ಯಾವ ಯೋಜನೆಗಳು ಕೂಡಾ ತಾತ್ಕಾಲಿಕವಾಗಿ ಆಗಿರದೆ ಶಾಶ್ವತವಾಗಿರಬೇಕು ಎಂಬ ಕಾರಣಕ್ಕೆ ಕೆಲವೊಮ್ಮೆ ವಿಳಂಬ ಆಗಬಹುದು.ಆದರೆ ಅದನ್ನೇ ಗೇಲಿ ಮಾಡುವುದು ಹಾಗೂ ಅಪಹಾಸ್ಯ ಮಾಡುವುದು ಸಮಂಜಸವಲ್ಲ ಎಂದ ಅವರು ಅಭಿವೃದ್ಧಿ ಮಾಡುವುದಕ್ಕೆ ನಾವೇ ಆಗಬೇಕಾಗಿದೆ. ಹೀಗಾಗಿ ಏನೇ ಟೀಕೆಗಳು ಬಂದರೂ ಅಭಿವೃದ್ಧಿ ಕಾರ್ಯದ ಮೂಲಕವೇ ಉತ್ತರ ನೀಡಲಾಗುವುದು ಎಂದು ಅಂಗಾರ ಹೇಳಿದರು.
ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ, ಅನೇಕ ಸಮಯದ ಬೇಡಿಕೆಯಾಗಿದ್ದ ಕಮಿಲ-ಬಳ್ಪ ರಸ್ತೆ ಅಭಿವೃದ್ದಿ ಮಾತ್ರವಲ್ಲ ಶಾಶ್ವತವಾದ ಕಾಮಗಾರಿಯನ್ನು ಈಗ ಶಾಸಕರು ಅನುದಾನ ನೀಡಿ ಮಾಡಲಾಗುತ್ತಿದೆ. ಹೀಗಾಗಿ ಕ್ಷುಲ್ಲಕ ಟೀಕೆ, ಅಬಿವೃದ್ದಿ ಕಾರ್ಯಗಳಿಗೆ ಅಡ್ಡ ಮಾಡುವುದರ ಬದಲಾಗಿ ಸಹಕಾರ ಮಾಡಬೇಕಿದೆ ಎಂದರು.
ಈ ಸಂದರ್ಭ ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ತಾ.ಪಂ. ಸದಸ್ಯೆ ಯಶೋಧ ಬಾಳೆಗುಡ್ಡೆ, ಗ್ರಾ. ಪಂ. ಅಧ್ಯಕ್ಷ ಅಚ್ಚುತ ಗುತ್ತಿಗಾರು, ಉಪಾಧ್ಯಕ್ಷೆ ಸವಿತಾ ಕುಳ್ಳಂಪಾಡಿ, ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ದಿವಾಕರ ಮುಂಡೋಡಿ, ಗುತ್ತಿಗಾರು ಗ್ರಾ.ಪಂ. ಸದಸ್ಯರಾದ ಜಯಪ್ರಕಾಶ್ ಮೊಗ್ರ, ರಾಕೇಶ್ ಮೆಟ್ಟಿನಡ್ಕ, ಶ್ರೀದೇವಿ ಕೊಂಬೆಟ್ಟು, ಭಾಗೀರಥಿ ಕಾಜಿಮಡ್ಕ, ಯಮಿತಾ ಪೂರ್ಣಚಂದ್ರ , ಜಿಪಂ ಇಂಜಿನಿಯರ್ , ದೇವಿಪ್ರಸಾದ್ ಚಿಕ್ಮುಳಿ ಮೊದಲಾದವರು ಉಪಸ್ಥಿತರಿದ್ದರು.