ಗುತ್ತಿಗಾರು: ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ಶನಿವಾರ ಸಂಘದ ಆವರಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮುಳಿಯ ಕೇಶವ ಭಟ್ ವಹಿಸಿದ್ದರು. ಸಂಘವು ಸದ್ರಿ ವರ್ಷದಲ್ಲಿ 1, 01,59,122 ರೂಪಾಯಿ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.6 ಡಿವಿಡೆಂಡ್ ಘೋಷಣೆ ಮಾಡಲಾಯಿತು.
ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಒಟ್ಟು 5503 ಸದಸ್ಯರಿದ್ದು ಒಟ್ಟು 8.04 ಕೋಟಿ ಪಾಲುಬಂಡವಾಳ ಹೊಂದಿದೆ. ವರ್ಷಾಂತ್ಯದಲ್ಲಿ ಒಟ್ಟು 308.63 ಕೋಟಿ ವ್ಯವಹಾರ ನಡೆಸಿ 1.01 ಕೋಟಿ ರೂಪಾಯಿ ಲಾಭ ಗಳಿಸಿದೆ.
ರಸಗೊಬ್ಬರ , ಕೃಷಿ ಬಳಕೆ ಮಾರಾಟ ಇತ್ಯಾದಿಗಳಿಂದ ಒಟ್ಟು92.41 ಲಕ್ಷ ರೂಪಾಯಿ ವ್ಯವಹಾರ ನಡೆಸಿ 7.06 ಲಕ್ಷ ರೂಪಾಯಿ ಲಾಭ ಗಳಿಸಿದ್ದರೆ, ಪೆಟ್ರೋಲಿಯಂ ವ್ಯವಹಾರದಲ್ಲಿ ಒಟ್ಟು 8.89 ಕೋಟಿ ರೂಪಾಯಿ ವ್ಯವಹಾರ ನಡೆಸಿ 23.73 ಲಕ್ಷ ರೂಪಾಯಿ ಲಾಭ ಗಳಿಸಿದೆ. ಸಂಘದ 1612 ಮಂದಿ ಸದಸ್ಯರು ಸಾಲಾ ಮನ್ನಾಕ್ಕೆ ಅರ್ಹತೆ ಪಡೆದಿದ್ದಾರೆ.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಎಂ.ಡಿ ಮಂಜುಳ ಮುತ್ಲಾಜೆ, ನಿರ್ದೇಶಕರುಗಳಾದ ಬಿ.ಕೆ ಬೆಳ್ಯಪ್ಪ ಗೌಡ, ಭರತ್ ಮುಂಡೋಡಿ, ಕೃಷ್ಣಯ್ಯ ಮೂಲೆತೋಟ, ದಿನೇಶ್ ಕೆ ಸರಸ್ವತಿ ಮಹಲ್, ಆನಂದ ಕೆಂಬಾರೆ, ಶೈಲಜಾ ಮುಂಡೋಡಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶರತ್ ಎ.ಕೆ ಉಪಸ್ಥಿತರಿದ್ದರು.
ಅಧ್ಯಕ್ಷ ಮುಳಿಯ ಕೇಶವ ಭಟ್ ಸ್ವಾಗತಿಸಿ ಪ್ರಸ್ತಾವನೆಗೈದರು.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶರತ್ ಎ.ಕೆ ವರದಿ ವಾಚಿಸಿ ವಂದಿಸಿದರು. ಕಿಶೋರ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ಪ್ರಸ್ತುತ ವರ್ಷ ಮೃತಪಟ್ಟ ಸದಸ್ಯರಿಗೆ ಹಾಗೂ ವೀರ ಮರಣ ಹೊಂದಿದ ಯೋಧರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಇದೇ ಸಂದರ್ಭ ಸಂಘದ ಪೆಟ್ರೋಲ್ ಪಂಪ್ ನಿಂದ ಹೆಚ್ಚು ಡೀಸೆಲ್/ಪೆಟ್ರೋಲ್ ಖರೀದಿ ಮಾಡಿದವರನ್ನು ಗುರುತಿಸಲಾಯಿತು. ವರ್ಷಕ್ಕೆ 37 ಲಕ್ಷಕ್ಕೂ ಅಧಿಕ ಮೌಲ್ಯದ ಡೀಸೆಲ್ ಖರೀದಿ ಮಾಡಿದ ಸೌರಭ ವ್ಯಾನ್ ಮಾಲಕ ಕುಮಾರ್ , 26 ಲಕ್ಷಕ್ಕೂ ಅಧಿಕ ಮೌಲ್ಯದ ಡೀಸೆಲ್ ಖರೀದಿ ಮಾಡಿದ ದೇವಿಪ್ರಸಾದ್ ಚಿಕ್ಮುಳಿ, 8 ಲಕ್ಷಕ್ಕೂ ಅಧಿಕ ಮೌಲ್ಯದ ಡೀಸೆಲ್ ಖರೀದಿ ಮಾಡಿದ ಜ್ಞಾನದೀಪ ವಿದ್ಯಾಸಂಸ್ಥೆಯನ್ನು ಗೌರವಿಸಲಾಯಿತು.
ಕ್ಯಾಂಪ್ಕೋ ಶಾಖೆಗೆ ಅಧಿಕ ಪ್ರಮಾಣದಲ್ಲಿ ಅಡಿಕೆ ಹಾಕಿದ ಕೃಷಿಕರಾದ ಉಣ್ಣಿಕೃಷ್ಣನ್, ರತ್ಮಾ ಎಂ ಡಿ ಹಾಗೂ ಪರಮೇಶ್ವರ ಭಟ್ ವಳಲಂಬೆ ಅವರನ್ನು ಗುರುತಿಸಲಾಯಿತು.ಕ್ಯಾಂಪ್ಕೋ ಶಾಖೆಗೆ ಅಧಿಕ ಪ್ರಮಾಣದಲ್ಲಿ ಕೊಕೋ ಹಾಕಿದ ಕಮಲಾಕ್ಷ ಸಂಪ್ಯಾಡಿ, ತಿರುಮಲೇಶ್ವರ ಚಣಿಲ , ಕೇಶವ ಮುಳಿಯ ಅವರನ್ನು ಗುರುತಿಸಲಾಯಿತು. ಅಧಿಕ ಗೊಬ್ಬರ ಖರೀದಿ ಮಾಡಿದ ಸುರೇಶ್ ಸಾಲ್ತಾಡಿ, ತೀರ್ಥರಾಮ ಕಮಿಲ, ಸುಬ್ಬಣ್ಣ ಗೌಡ ಎಂಡಿ ಅವರನ್ನು ಕೂಡಾ ಗೌರವಿಸಲಾಯಿತು.