ಸುಳ್ಯ: ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಗುರುಂಪುನಿಂದ-ನಾಗಪಟ್ಟಣದವರೆಗೆ 15 ದಿನಗಳೊಳಗೆ ರಸ್ತೆ ದುರಸ್ಥಿ ಆರಂಭಗೊಳಿಸುತ್ತೇವೆ ಎಂದು ಭರವಸೆ ನೀಡಿದ ನ.ಪಂ
ಅಧಿಕಾರಿಗಳು ಇನ್ನೂ ಕಾಮಗಾರಿ ಆರಂಭಿಸದಿರುವ ಹಿನ್ನಲೆಯಲ್ಲಿ ನ.ಪಂ. ವಿರುದ್ಧ ನಗರ ಪಂಚಾಯತ್ ಮುಂಭಾಗ ನಾಗರಿಕರು ಶನಿವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈಯವರು ಕಳೆದ ಬಾರಿ ಸೇತುವೆ ಬಳಿ ಪ್ರತಿಭಟನೆ ನಡೆಸಿದಾಗ 15 ದಿನದಲ್ಲಿ ಗುರುಂಪಿನಿಂದ ನಾಗಪಟ್ಟಣದವರೆಗಿನ ರಸ್ತೆ ಹೊಂಡ ಮುಚ್ಚುವ ಕಾಮಗಾರಿ ನಡೆಸುವ ಭರವಸೆ ನೀಡಿದ್ದರೂ ಆರಂಭಿಸಿಲ್ಲ. ನಾವು ಗ್ರಾಮಸ್ಥರ ಜತೆ ಸೇರಿ ರಸ್ತೆ ಅಭಿವೃದ್ಧಿ ಗೆ ಒತ್ತಾಯಿಸಿದರೆ ಅದಕ್ಕೆ ಶಾಸಕರು ಕಾಂಗ್ರೆಸ್ ಪ್ರತಿಭಟನೆ ಎಂದು ಹೇಳಿಕೆ ನೀಡುತ್ತಾರೆ. ಆ ರೀತಿಯ ಹೇಳಿಕೆ ನೀಡುವುದಕ್ಕಿಂತ ಶಾಸಕರು ಕೆಲಸ ಮಾಡಿ ತೋರಿಸಲಿ ಎಂದು ಆಗ್ರಹಿಸಿದರು.
ನ.ಪಂ.ಸದಸ್ಯ ಎಂ.ವೆಂಕಪ್ಪ ಗೌಡ ಮಾತನಾಡಿ ಕೂಡಲೇ ರಸ್ತೆ ದುರಸ್ಥಿ ಆರಂಭಿಸುವಂತೆ ಒತ್ತಾಯಿಸಿದರು. ಪ್ರಮುಖರಾದ ತೇಜಕುಮಾರ್ ಬಡ್ಡಡ್ಕ, ಸತ್ಯಕುಮಾರ್ ಆಡಿಂಜ, ಡೇವಿಡ್ ಧೀರಾ ಕ್ರಾಸ್ತ ಮಾತನಾಡಿದರು. ಮುಖಂಡರಾದ ಬೆಟ್ಟ ರಾಜಾರಾಂ ಭಟ್, ಬೀರಾ ಮೊಯ್ದೀನ್, ಶರೀಫ್ ಕಂಠಿ, ಧರ್ಮಪಾಲ ಕೊಯಿಂಗಾಜೆ, ಶ್ರೀಲತಾ ಪ್ರಸನ್ನ, ತಿರುಮಲೇಶ್ವರಿ, ನಂದರಾಜ ಸಂಕೇಶ, ಭವಾನಿಶಂಕರ ಕಲ್ಮಡ್ಕ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಳಿಕ ಆಗಮಿಸಿದ ನ.ಪಂ.ಮುಖ್ಯಾಧಿಕಾರಿ ಮತ್ತಡಿಯವರನ್ನು ರಸ್ತೆ ಅಭಿವೃದ್ಧಿ ಪಡಿಸದ ಕುರಿತು ಪ್ರಶ್ನಿಸಿದರು. ಮಾತುಕತೆ ನಡೆದು ರಸ್ತೆ ದುರಸ್ಥಿ ನಡೆಸುವುದಾಗಿ ಮುಖ್ಯಾಧಿಕಾರಿ ಭರವಸೆ ನೀಡಿದರು.