ಪುತ್ತೂರು: ಪುತ್ತೂರು ನಗರದ ಹಾರಾಡಿಯಿಂದ ಸೇಡಿಯಾಪು ತನಕ ಚತುಷ್ಪಥ ರಸ್ತೆ ನಿರ್ಮಾಣ ಸಂದರ್ಭದಲ್ಲಿ ರಸ್ತೆಗಳ ಇಕ್ಕೆಲಗಳ ಮರಗಳನ್ನು ಕಡಿದು ನಾಶಗೊಳಿಸಲಾಗಿರುವುದಕ್ಕೆ ಪರ್ಯಾಯವಾಗಿ ಒಂದೇ ಒಂದು ಮರಗಳನ್ನು ನೆಡದೆ ಇರುವುದು ಪರಿಸರಾಸಕ್ತರಾದ ನಮಗೆ ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಆತಂಕ ಮತ್ತು ನೋವುಂಟು ಮಾಡಿದೆ. ಸದ್ರಿ ಚತುಷ್ಪಥಗೊಳಿಸುವ ಕೇಪುಳು ಎಂಬ ಪ್ರದೇಶದಿಂದ ಸೇಡಿಯಾಪು ಪ್ರದೇಶದವರೆಗೆ ಕಾಮಗಾರಿ ಆರಂಭಗೊಂಡಿದ್ದು, ಈ ಸಂದರ್ಭದಲ್ಲಿ ಸಹ ಸಾಕಷ್ಟು ಮರಗಳು ಹಾನಿಯಾಗುವ ಸಂಭವವಿದೆ. ಈ ಬಗ್ಗೆ ಅರಣ್ಯ ಇಲಾಖೆಯು ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಸಂಶಯ ಮೂಡುವಂತಾಗಿದೆ. ಪರಿಸರ, ಪ್ರಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರ ಮತ್ತು ಇಲಾಖೆಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕಾಗಿದೆ ಹಾಗೂ ಈ ಬಗ್ಗೆ ಸಂಬಂಧಿಸಿದ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪುತ್ತೂರು ಪ್ರಜಾ ಸೇವಾ ವೇದಿಕೆಯ ಮುರಳೀಧರ ರೈ ಮಠಂತಬೆಟ್ಟು ಆಗ್ರಹಿಸಿದರು.
ಅವರು ಇಂದು ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ವಿಚಾರ ಪ್ರಸ್ತಾಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರೂಪೇಶ್ ರೈ ಅಲಿಮಾರ್ ,ವಿಷ್ಣು ಭಟ್ ಪಾದೆಕಲ್ಲು, ನ್ಯಾಯವಾದಿ ಭಾಸ್ಕರ ಗೌಡ ಕೋಡಿಂಬಾಳ, ಪ್ರಗತಿಪರ ಕೃಷಿಕ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ಉಪಸ್ಥಿತರಿದ್ದರು. ಪತ್ರಿಕಾಗೋಷ್ಠಿಯ ಬಳಿಕ ಪುತ್ತೂರು ಸಹಾಯಕ ಆಯುಕ್ತರು, ಲೋಕೋಪಯೋಗಿ ಇಲಾಖೆ ಮತ್ತು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಯಿತು.