Advertisement
ಅಂಕಣ

ಚಪ್ಪಲಿ ಎಲ್ಲಿ ಕಚ್ಚುತ್ತದೆ ಎನ್ನುವುದು ಚಪ್ಪಲಿ ಧರಿಸಿದವನಿಗೆ ಮಾತ್ರ ಗೊತ್ತು!

Share

ಅದೊಂದು ಪೆಟ್ರೋಲ್ ಅಂಗಡಿ (ಪಂಪ್). ವಾಹನಗಳ ಭರಾಟೆ ಕಡಿಮೆಯಿತ್ತು. ತುಂತುರು ಮಳೆಯ ಸಿಂಚನ ಬೇರೆ. ಆ ಅಂಗಡಿಯಲ್ಲಿ ಪುರುಷರಲ್ಲದೆ, ಮಹಿಳೆಯರು ಕೂಡಾ ಉದ್ಯೋಗಿಗಳು.

Advertisement
Advertisement

ಐಷರಾಮಿ ಕಾರೊಂದು ಹೊಟ್ಟೆಗೆ ಪೆಟ್ರೋಲು ಸೇರಿಸಿಕೊಳ್ಳುತ್ತಿತ್ತು. ಅದೇ ಹೊತ್ತಿಗೆ ಸುಮಾರು ಇಪ್ಪತ್ತರಂಚಿನ ತರುಣಿಯು ಕಾರಿನ ಎದುರಿನ ಗ್ಲಾಸನ್ನು ಶುಚಿಗೊಳಿಸಲು ಅಣಿಯಾದಳು. ಬಹುಶಃ ಕಾರಿನ ಯಜಮಾನನ ಕೋರಿಕೆಯಿದ್ದಿರಬಹುದು.

Advertisement

ಅವಳು ಸಾಬೂನಿನ ದ್ರಾವಣವನ್ನು ಸಿಂಪಡಿಸಿ ಗ್ಲಾಸನ್ನು ಶುಚಿಗೊಳಿಸುತ್ತಿದ್ದಳು. ಕಾರಿನೊಳಗೆ ನಾಲ್ಕೈದು ಮಂದಿ ಮಹಿಳೆಯರು ಇವಳನ್ನು ನೋಡುತ್ತಾ ಮುಸಿಮುಸಿ ನಕ್ಕಂತೆ ಕಂಡಿತು. ಅಪಹಾಸ್ಯ ಮಾಡಿದಂತೆ ಗೋಚರವಾಯಿತು. ಕೆಟ್ಟ ಕುತೂಹಲದಿಂದ ಕಾರಿನ ಹತ್ತಿರ ಹಾದಿ ಮಾಡಿಕೊಂಡು ಸಾಗಿದೆ. ನನ್ನ ಊಹೆ ಸರಿಯಾಗಿತ್ತು. ಅವಳು ತನ್ನ ಶುಚಿ ಕೆಲಸವನ್ನು ಮುಗಿಸಿದಳು. ಕಾರೂ ಹೊರಟು ಹೋಯಿತು.

ಆ ಹುಡುಗಿಯ ಶ್ರಮಕ್ಕೆ ಪೆಟ್ರೋಲ್ ಅಂಗಡಿಯಿಂದ ಭಕ್ಷೀಸೋ, ಸಂಬಳವೋ ಸಿಗಬಹುದು. ಆದರೆ ಇವಳನ್ನು ನೋಡಿ ಅಪಹಾಸ್ಯ ಮಾಡುವಷ್ಟು ಹಗುರ ಯಾಕೆ? ಅವಳು ಮಾಡುವ ವೃತ್ತಿ ಕೀಳೆಂದೇ? ಅವಳು ಬಡವಳೆಂದೇ? ಅವಳಿಗೂ ಸ್ವಾಭಿಮಾನವಿಲ್ವೇ? ಅಲ್ಲ, ತಮ್ಮ ಅಂತಸ್ತನ್ನು ಪ್ರಕಟಪಡಿಸಲು ಅವಳು ಮಾಧ್ಯಮವಾದಳೇ? ಇವೆಲ್ಲಾ ನನ್ನೊಳಗೆ ರಿಂಗಣಿಸುತ್ತಿರುವ ವಿಚಾರಗಳು.

Advertisement

ತನ್ನ ವಾಹನದ ಕನ್ನಡಿಯನ್ನು ಶುಚಿಗೊಳಿಸಿದ್ದಕ್ಕೆ ಹಣ ಬೇಡ, ಒಂದು ಕೃತಜ್ಞತೆಯನ್ನಾದರೂ ಸೂಚಿಸುವ ಮನಸ್ಸು ಯಾಕೆ ಬರಲಿಲ್ಲ? ಕಾರಿನೊಳಗೆ ಪಟ್ಟೆಸೀರೆ ಉಟ್ಟ, ಆಭರಣಗಳನ್ನು ಧರಿಸಿದ ಮಾತೆಯರಿಗೆ ಇವಳೂ ತನ್ನ ಮಗಳಂತೆ ಎಂದು ಕಾಣಲಿಲ್ಲ? ಯಾಕೆಂದರೆ ಕಾಂಚಣ ತಂದಿತ್ತ ಲಹರಿ. ಆ ಹುಡುಗಿಗೆ ಹೆಚ್ಚು ಬೇಡ, ಐದೋ ಹತ್ತೋ ರೂಪಾಯಿ ಭಕ್ಷೀಸು ಕೈಗಿಡುತ್ತಿದ್ದರೆ ಅವಳ ಹಸನ್ಮುಖತೆಯೇ ವರವಾಗುತ್ತಿತ್ತು.

ಐದಾರು ಲಕ್ಷದ ಕಾರಿನೊಳಗೆ ಕುಳಿತು ನೂರೋ ನೂರಿಪ್ಪತೋ ಕಿಲೋಮೀಟರ್ ವೇಗದಲ್ಲಿ ಸಾಗಿದಾಗ ಆಕಾಶದಲ್ಲಿ ತೇಲಿದ ಅನುಭವವಾಗಬಹುದು. ಮನಸ್ಸು ಪುಳಕಗೊಳ್ಳಬಹುದು. ಆರ್ಥಿಕವಾಗಿ ತಮಗಿಂತ ಕೆಳಗಿರುವವರ ಬಗ್ಗೆ ಔದಾಸೀನ್ಯ ತೋರಬಹುದು. ಅದೆಲ್ಲಾ ಎಷ್ಟು ದಿವಸ ಬಂಧುಗಳೇ, ‘ಪಾಸ್‍ಬುಕ್’ ತುಂಬಿರುವ ತನಕ! ಪಾಸ್‍ಬುಕ್ ತುಂಬಲಿ. ಆದರೆ ‘ತುಂಬಿ’ ತುಳುಕಬಾರದು. ತುಳುಕಿದರೆ ಏನಾಗ್ತದೆ? ಕಾರಿನೊಳಗೆ ಬೆಚ್ಚಗೆ ಕುಳಿತು ಆ ಹುಡುಗಿಯನ್ನು ಅಪಹಾಸ್ಯ ಮಾಡುವಂತಹ ಮನಃಸ್ಥಿತಿ ಗೊತ್ತಿಲ್ಲದೆ ಬದುಕಿನಲ್ಲಿ ಅಂಟಿಬಿಡುತ್ತದೆ. ಯಾವಾಗ ಕೀಳು ಮನಸ್ಥಿತಿ ಅಂಟಿತೋ ಆ ಕ್ಷಣದಿಂದ ಬದುಕಿಗೆ ಹಿಮ್ಮುಖ ಚಲನೆ. ಅದು ಹಿಮ್ಮುಖ ಅಂತ ಗೊತ್ತಾಗುವಾಗ ಹೊತ್ತಾಗಿರುತ್ತದೆ!

Advertisement

ಸಮಾಜದಲ್ಲಿ ಇಂತಹ ಮನಃಸ್ಥಿತಿ ಹೊಂದಿರುವ ಅನೇಕರನ್ನು ನೋಡುತ್ತಿದ್ದೇನೆ. ಹೋಟೇಲಿಗೆ ಹೋದರೆ ಅಗತ್ಯಕ್ಕಿಂತ ಹೆಚ್ಚು ಆರ್ಡರ್ ಮಾಡಿ, ಅರ್ಧಂಬರ್ಧ ತಿಂದು, ಒಂದಷ್ಟು ಬಟ್ಟಲಿನಲ್ಲೇ ಉಳಿಸಿ ಹೋಗದಿದ್ದರೆ ಹೋಟೆಲ್‍ವಾಸದ ಶಾಂತಿ ಸಿಗದು. ಅದೇ ಟೇಬಲಿನ ಆಚೆ ಬದಿಯಲ್ಲಿ ಹತ್ತೋ ಹದಿನೈದೋ ರೂಪಾಯಿ ಕೈಯಲ್ಲಿ ಹಿಡಿದು ಚಹಾ ಮಾತ್ರ ಹೀರುವ ಮುಖಗಳು ಕಾಣುವುದಿಲ್ಲ. ಕಾಣಬೇದಾದ್ದೂ ಇಲ್ಲ. ನೀವು ಆದೇಶಿದಂತೆ ಎಲ್ಲವನ್ನೂ ತಂದು ಕೊಡುವ ಸಪ್ಲೈಯರಿನ ಮುಖ ಎಂದಾದರೂ ನೋಡಿದ್ದೀರಾ? ಆ ಮುಖದ ಒಳಗಿನ ಭಾವವನ್ನು ಎಂದಾದರೂ ಕಂಡಿದ್ದೀರಾ?

ಕಾಂಚಾಣದ ಸದ್ದು ಇರುವಲ್ಲಿಯ ತನಕ ಆ ಭಾವಗಳು ಕಾಣಲಾರವು. ಯಾಕೆಂದರೆ ನಮ್ಮ ಭಾವವು ಶುಷ್ಕದತ್ತ ಜಾರಿ ಅದೆಷ್ಟೋ ಸಮಯವಾಗಿರುತ್ತದೆ! ಬದುಕಿನಲ್ಲಿ ಹಣ ಬೇಕು. ಎಷ್ಟೇ ಹಣ ಇರಲಿ, ಅದು ತಂತಮ್ಮ ಪಾಸ್‍ಬುಕ್ಕಿನೊಳಗಿದ್ದರೆ ಸಾಕು. ಹಣದ ಪ್ರತಿಷ್ಠೆಯಿಂದ ಇನ್ನೊಬ್ಬರ ಮೇಲೆ ಸವಾರಿ ಮಾಡುವುದು ಸುಶಿಕ್ಷಿತ ಅಲ್ಲ.

Advertisement

ಹಣವು ಇರುವಾಗ ಆದರ್ಶಗಳು ಮಾತನಾಡುತ್ತವೆ. ಮಾದರಿಗಳು ಸೃಷ್ಟಿಯಾಗುತ್ತವೆ. ಹೊಸ ಹೊಸ ಭಾವಗಳು ಇಣುಕುತ್ತವೆ. ಹೊಸ ನೋಟಗಳು ರೂಪುಗೊಳ್ಳುತ್ತವೆ. ಇಂತಹ ಆಟೋಪಗಳನ್ನು, ‘ಪ್ರಾತ್ಯಕ್ಷಿಕೆ’ಯನ್ನು ದೂರದಿಂದ ನೋಡುತ್ತ ನಗುವ ಮನಸ್ಸುಗಳು ನೂರಾರಿವೆ ಎನ್ನುವುದನ್ನು ಮರೆಯಕೂಡದು.

ಇದನ್ನು ಓದುವ ಹೊತ್ತಿಗೆ ಒಂದು ಅಭಿಪ್ರಾಯಕ್ಕೆ ನೀವು ಬಂದಿರುತ್ತೀರಿ – “ಈತನ ಪಾಸ್‍ಬುಕ್ ಗಟ್ಟಿಯಿಲ್ಲ. ಹಾಗಾಗಿ ಉಳ್ಳವರ ಮೇಲಿನ ಸಂಕಟವನ್ನು ಈ ರೂಪದಲ್ಲಿ ವಮನ ಮಾಡಿದ್ದಾನೆ.” ಖಂಡಿತಾ ಅಲ್ಲ. ನಿತ್ಯದ ಬದುಕಿನಲ್ಲಿ ಇಂತಹವರನ್ನು ಕಾಣುತ್ತಾ, ಅವರನ್ನು ಒಪ್ಪಿಕೊಳ್ಳುತ್ತಾ, ನೋವು ಅನುಭವಿಸುತ್ತಿರುವ ಮಂದಿ ನೂರಾರು. ಚಪ್ಪಲಿ ಎಲ್ಲಿ ಕಚ್ಚುತ್ತದೆ ಎನ್ನುವುದು ಚಪ್ಪಲಿ ಧರಿಸಿದವನಿಗೆ ಮಾತ್ರ ಗೊತ್ತಾಗುತ್ತದೆ! ಮಿಕ್ಕವರಿಗೆ ಚಪ್ಪಲಿ ಹೊಸತಾಗಿ ಕಾಣುತ್ತದೆ.

Advertisement

 

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ

Published by
ನಾ.ಕಾರಂತ ಪೆರಾಜೆ

Recent Posts

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

13 hours ago

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

15 hours ago

ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |

ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ  ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…

1 day ago

ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ

04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…

2 days ago

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |

03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

3 days ago

ಬಿದಿರು ಕೃಷಿ | ತರಕಾರಿ ಕೃಷಿಯಾಗಿ ಬಿದಿರು

ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…

3 days ago