ಪರಿಸರ ತಜ್ಞ, ಪರಿಸರ ಪ್ರೇಮಿ ದಿನೇಶ್ ಹೊಳ್ಳ ಚಾರ್ಮಾಡಿ ಘಾಟಿಯಲ್ಲಾದ ಹಾನಿಯ ಬಗ್ಗೆ ಪೇಸ್ ಬುಕ್ ನಲ್ಲಿ ಬರೆದಿದ್ದಾರೆ. ಅವರ ಅನುಮತಿ ಮೇರೆಗೆ ನಾವು ಇಲ್ಲಿ ಯಥಾವತ್ತಾಗಿ ಪ್ರಕಟ ಮಾಡುತ್ತಿದ್ದೇವೆ. ಕಾರಣ ಇಷ್ಟೇ,
ಪರಿಸರದಲ್ಲಾಗುವ ಪ್ರತಿಯೊಂದು ಸೂಕ್ಷ್ಮ ಬದಲಾವಣೆಗಳೂ ನಮ್ಮ ಮೇಲೆ ಪರಿಣಾಮ ಬೀರುತ್ತವೆ. ಅಂದದ ಪರಿಸರ ನಮ್ಮ ಮನಸ್ಸಿಗೆ ಎಷ್ಟು ಖುಷಿ ಕೊಡುತ್ತದೋ, ಅದು ಹಾನಿಯಾದಾಗಲೂ ಅಷ್ಟೇ ನೋವು ನೊಡುತ್ತದೆ. ಅದನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡುವಷ್ಟು ನಾವು ದೊಡ್ಡವರಲ್ಲ. ಆದರೆ ದಿನೇಶ್ ಹೊಳ್ಳ ಅವರಂತಹವರು ಅಧಿಕೃತವಾಗಿ ಹೇಳಬಲ್ಲರು. ಇನ್ನು ನಾವೇನು ಮಾಡಬಹುದು , ಏನು ಮಾಡಬೇಕು ಎಂಬುದೂ ಇವರ ಮಾತಿನಲ್ಲಿದೆ. ಅರ್ಥ ಮಾಡಿಕೊಳ್ಳೋಣ…..
ಚಾರ್ಮಾಡಿ ಘಾಟಿ ಯ ಬೆಟ್ಟ ಕಣಿವೆಗಳು ಬಹುತೇಕ ಕುಸಿದಿವೆ. ಕೆಲವು ಕಡೆ ರಸ್ತೆಯೇ ಮಾಯವಾಗಿವೆ. ಹಿಮ್ಮುರಿ ತಿರುವುಗಳಿಂದ ಮಲಯ ಮಾರುತದ ವರೆಗೆ ಭೂಕುಸಿತ ಆಗಿವೆ. ನಾವು ಕಳೆದ 24 ವರ್ಷಗಳಿಂದ ಚಾರ್ಮಾಡಿ ಘಾಟಿಯ ಬೆಟ್ಟ, ಕಾಡು, ಕಣಿವೆ ಸುತ್ತಾಡುತ್ತಿದ್ದ ಕಾರಣ ಚಾರ್ಮಾಡಿ ಘಾಟಿ ನಮಗೆ ಮನೆಯ ಅಂಗಳವೇ ಆಗಿದ್ದು ಇಂದು ತುಂಬಾ ಬೇಸರವಾಗುತ್ತದೆ.
ಸುಂದರವಾದ ಒಂದು ಕಲಾಕೃತಿಗೆ ಯಾರೋ ಗೀಚಿ, ಗೀರಿದ ಹಾಗೆ ಆಗಿದೆ ಇಂದು ಚಾರ್ಮಾಡಿ ದೃಶ್ಯ. ಚಾರ್ಮಾಡಿ ಘಾಟಿಯ ಏರಿಕಲ್ಲಿನ ಹುಲಿ ದನ ಬಂಡೆ, ಮಿಂಚುಕಲ್ಲಿನ ದೀರ್ಘ ಪ್ರಪಾತ, ಬಾಳೆ ಗುಡ್ಡದ ಅಮೋಘ ದೃಶ್ಯ, ಕೊಡೆ ಕಲ್ಲಿನ ಕೊರಕಲು ಶಿಲೆ, ದೊಡ್ಡೇರಿ ಬೆಟ್ಟದ ಗಡಸು ಹಾದಿ, ಹೊಸ್ಮನೆ ಬೆಟ್ಟದ ಹಸಿರು ಹೊದಿಕೆ, ರಾಮನಬೆಟ್ಟದ ಪಟ್ಟದ ಕಲ್ಲು, ಸೊಪ್ಪಿನ ಗುಡ್ಡದ ಸೊಡರು, ಕುಂಭಕಲ್ಲಿನ ಕುಂಭ, ಬಾರಿ ಮಲೆ, ಬಾಂಜಾರು ಮಲೆ, ಅಂಬಾಟಿ ಮಲೆ, ಇಳಿಮಲೆಯ ದಟ್ಟ ಶೋಲಾ ಅಡವಿ, ಬಾಳೂರು,ಮಧುಗುಂದಿ, ಮಳೆಮನೆ, ದೇವರಮನೆ , ಅಣಿಯೂರು, ದೇವಗಿರಿ ಕಣಿವೆಯ ನೀರಿನ ಹರಿವು, ಬಿದಿರು ತಳ, ಹೊರಟ್ಟಿ ……. ಎಲ್ಲವೂ ಪಶ್ಚಿಮ ಘಟ್ಟದ ಸೂಕ್ಷ್ಮ ಜೀವ ವೈವಿಧ್ಯತೆಯ ಪ್ರದೇಶ ಗಳಾಗಿದ್ದು ನೇತ್ರಾವತಿ ನದಿಯ ಉಪನಡಿಗಳಾದ ಮೃತ್ಯುಂಜಯ, ಅಣಿಯೂರು, ಸುನಾಲ, ನೆರಿಯ ಹೊಳೆಗಳ ಉಗಮ ಸ್ಥಾನವಾಗಿರುತ್ತವೆ. ಇಲ್ಲಿನ ಬೆಟ್ಟಗಳ ಮೇಲ್ಮೈ ಪದರದ ಹುಲ್ಲುಗಾವಲು ಮತ್ತು ಕಣಿವೆಗಳ ಶೋಲಾ ಅರಣ್ಯ ನಡುವೆ ಒಂದಕ್ಕೊಂದು ಸಂಬಂಧವಿದೆ.
ಮಳೆಗಾಲದ ಮಳೆ ನೀರನ್ನು ಬೆಟ್ಟದ ಮೇಲಿನ ಹುಲ್ಲುಗಾವಲು ( ಬೆಟ್ಟಕ್ಕೆ ಹುಲ್ಲು ಮನುಜನ ಶರೀರಕ್ಕೆ ಚರ್ಮ ಹೇಗೆ ರಕ್ಷಣೆಯೂ ಹಾಗೆ ಹುಲ್ಲುಗಾವಲು ರಕ್ಷಣೆ ) ತನ್ನ ಒಳ ಪದರದ ಜಲ ಪಥಗಳಲ್ಲಿ ಕೆಳಗಡೆ ಇರುವ ಶೋಲಾ ಅರಣ್ಯಕ್ಕೆ ಸರಬರಾಜು ಮಾಡುತ್ತವೆ. ಈ ಶೋಲಾ ಅರಣ್ಯದ ಒಳಗಡೆ ಇರುವ ಶಿಲಾ ಪದರಗಳಲ್ಲಿ ಶೇಖರಣೆ ಆದ ನೀರು ಈ ಮಳೆಗಾಲ ಮುಗಿದು ಇನ್ನೊಂದು ಮಳೆಗಾಲದ ವರೆಗೆ ಹೊಳೆಗೆ ನೀರು ಹರಿಸಿ ಹೊಳೆಯನ್ನು ವರ್ಷ ಪೂರ್ತಿ ಜೀವಂತವಾಗಿ ಇಟ್ಟುಕೊಳ್ಳುವ ಸಾಮರ್ಥ್ಯ ಇರುವಂತವು. ಈ ಶೋಲಾ ಅಡವಿ ಇದ್ದ ಕಾರಣ ಅಲ್ಲಿ ಒಂದಷ್ಟು ಜಲಪಾತಗಳಿದ್ದು ಈ ಜಲಪಾತದ ನೀರು ವರ್ಷವಿಡೀ ನೇತ್ರಾವತಿಯ ಉಪನದಿಗಳು ಆಗಿ ಹರಿದು ಪ್ರಧಾನ ನದಿಗೆ ಸೇರುತ್ತವೆ.
ಈ ಸಲ ಈ ರೀತಿ ಭೂಕುಸಿತ ಆಗಲು ಕಾರಣ …
ಪಶ್ಚಿಮ ಘಟ್ಟದ ಮೇಲ್ಮೈ ಪದರ ಸಡಿಲವಾಗಿ ಹುಲ್ಲುಗಾವಲು ಪ್ರದೇಶ ಗಾಧತೆಯನ್ನು ಕಳೆದುಕೊಳ್ಳುತ್ತಾ ಬರುತ್ತಿರುವುದರಿಂದ ವರ್ಷ ವರ್ಷ ಶೋಲಾ ಅಡವಿಯ ಒಳಗಿನ ಶಿಲಾ ಪದರದ ಅಂತರ ಹೆಚ್ಚಾಗುತ್ತಿವೆ, ಈ ರೀತಿ ಅಂತರ ಹೆಚ್ಚಾದಂತೆ ಗಾಢವಾಗಿ ಮಳೆ ಸುರಿದಾಗ ಬಿರುಕಿನ ನಡುವ ಧಾರಣಾ ಶಕ್ತಿಗಿಂತ ಹೆಚ್ಚು ನೀರು ಪ್ರವಹಿಸಿದಾಗ ಜಲ ಸ್ಫೋಟವಾಗಿ ಭೂಕುಸಿತ ಉಂಟಾಗುತ್ತವೆ. ಇಂತಹ ಸಂದರ್ಭದಲ್ಲಿ ಒಳಗಿರುವ ಗಾಢ ಪದರದಲ್ಲಿ ( ಶಿಲೆ ಹೊದಿಕೆ ಇರುವಲ್ಲಿ ) ನೀರು ಹರಿಯದೇ ಮೆದು ಪದರದಲ್ಲಿ ( ಮಣ್ಣಿನ ಹೊದಿಕೆ ) ನೀರು ಹರಿದಾಗ ಭೂಕುಸಿತ ಆಗಿ ಅದರ ಜೊತೆ ನೀರು ಹರಿದು ಪ್ರವಾಹ ಆಗುತ್ತದೆ. ನದೀ ಮೂಲ ಇರುವ ಸೂಕ್ಷ್ಮ ಪ್ರದೇಶಗಳಲ್ಲಿ ಅರಣ್ಯ ಅತಿಕ್ರಮಣ, ಜಲವಿದ್ಯುತ್ ಯೋಜನೆ, ರೆಸಾರ್ಟ್ ನಿರ್ಮಾಣ ಕೂಡಾ ಈ ರೀತಿಯ ಘಟನೆ ಆಗಲು ಕಾರಣ.
ನಿರಂತರ ಪಶ್ಚಿಮ ಘಟ್ಟದಲ್ಲಿ ಆಗುತ್ತಿರುವ ಕಾಡ್ಗಿಚ್ಚು ಕೂಡಾ ಭೂಕುಸಿತಕ್ಕೆ ಕಾರಣ. ಹಿಂದೆಲ್ಲಾ ಅಪರೂಪಕ್ಕೊಮ್ಮೆ ಕಾಡ್ಗಿಚ್ಚು ಆಗುತಿತ್ತು, ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಒಂದೇ ಬೆಟ್ಟಕ್ಕೆ ನಿರಂತರ 3 ರಿಂದ 4 ಸಲ ಕಾಡ್ಗಿಚ್ಚು ಆಗಿ ಬೆಟ್ಟದ ಮೇಲಿನ ಹುಲ್ಲು ಸಂಪೂರ್ಣ ಕಾಂಡ, ಬೇರು ಸಹಿತ ಸುಟ್ಟು ಹೋದರೆ ವಾಪಾಸು ಚಿಗುರಲು ಅವಕಾಶ ಇಲ್ಲದೇ ಧಾರಾಕಾರ ಮಳೆ ಸುರಿಯುವ ಸಂದರ್ಭದಲ್ಲಿ ಬೆಟ್ಟದ ಮೇಲ್ಮೈ ಪದರ ಕುಸಿದು ಶೋಲಾ ಕಾಡಿಗೆ ಸೇರಿ ಮಣ್ಣಿನ ಕುಸಿತ ಆಗುತ್ತಿದೆ. ಈ ರೀತಿ ಆದಾಗ ಮಳೆ ನೀರನ್ನು ಹಿಡಿದು ಇಟ್ಟುಕೊಳ್ಳುವ ಪಶ್ಚಿಮ ಘಟ್ಟದ ಮಳೆ ಕಾಡಿನ ಜಲ ಬಟ್ಟಲು ( ವಾಟರ್ ಟ್ಯಾಂಕ್ ತರಹ ,) ಒಮ್ಮೆಲೇ ಸ್ಫೋಟ ಗೊಂಡಾಗ ಸಡನ್ ಆಗಿ ನೀರಿನ ಪ್ರವಾಹ ಹೆಚ್ಚಾಗಿ ತಗ್ಗು ಪ್ರದೇಶಗಳಿಗೆ ಹರಿಯುತ್ತವೆ. ( ಕಳೆದ ವರ್ಷ ಮಡಿಕೇರಿ, ಕೇರಳ ದುರಂತ ) ಇನ್ನು ಶಿರಾಡಿ ಘಾಟಿಯಲ್ಲಿ ಎತ್ತಿನ ಹೊಳೆ ಯೋಜನೆಯ ಕಾಮಗಾರಿಯೇ ಭೂಕುಸಿತಕ್ಕೆ ನೇರ ಕಾರಣ. ಕೆಂಪುಹೊಳೆ ಹರಿವು ಪ್ರದೇಶದ ಮಳೆ ನೀರಿನ ಇಂಗಿತ ಪ್ರದೇಶ ( ನೀರಿನ ಕ್ಯಾಚ್ಮೆಂಟ್ area)ಕಾಮಗಾರಿ ನೆಪದಲ್ಲಿ ಸಂಪೂರ್ಣ ನಾಶ ಆಗಿ ಭೂಕುಸಿತ ಆಗಿವೆ. ಆನೆಮಹಲ್, ಹೆಗ್ಗದ್ದೆ, ಸತ್ತಿಗಾಲ, ಹೆಬ್ಬಸಾಲೆ, ಮಾರ್ನಳ್ಳಿ, ಹಿರಿದನ ಹಳ್ಳಿ ಇಂತಹ ಪ್ರದೇಶಗಳಲ್ಲೇ ಭೂಕುಸಿತ ಆಗಿವೆ, ಈ ಪ್ರದೇಶ ಗಳಲ್ಲೆಲ್ಲಾ ಎತ್ತಿನ ಹೊಳೆ ಕಾಮಗಾರಿ ಮಾಡಿ ಅಲ್ಲಿನ ಹುಲ್ಲುಗಾವಲು, ಮಳೆನೀರನ್ನು ಇಂಗಿಸುವ ಶೋಲಾ ಕಾಡು ಎಲ್ಲವನ್ನೂ ನಾಶ ಮಾಡಿ ಕಾಮಗಾರಿಯ ತ್ಯಾಜ್ಯಗಳನ್ನು ನದಿ ಹರಿವಿನ ಪ್ರದೇಶಕ್ಕೆ ಬಿಟ್ಟ ಕಾರಣ ಕಾಮಗಾರಿ ಆಗುತ್ತಿರುವ ಪ್ರದೇಶಗಳಲ್ಲೇ ಭೂಕುಸಿತ ಆಗಿವೆ.
ಆದುದರಿಂದ ಈ ಎಲ್ಲಾ ದುರಂತಗಳಿಗೆ ಸರಕಾರದ ಅಸಂಬದ್ಧ ಯೋಜನೆ ಮತ್ತು ಪಶ್ಚಿಮ ಘಟ್ಟದ ಬಗ್ಗೆ ನಿರ್ಲ್ಯಕ್ಷ ಮನೋಭಾವ ಹಾಗೂ ಜನ ಸಾಮಾನ್ಯರ ಪಶ್ಚಿಮ ಘಟ್ಟದ ತಾತ್ಸಾರ ಭಾವನೆಗಳೇ ಕಾರಣ. ಇಂತಹ ದುರಂತ ಆದಾಗ ಮಳೆಯನ್ನು, ನದಿಯನ್ನು ದೂರುವುದು ಸರಿಯಲ್ಲ. ಮಳೆ ಬಾರದಿದ್ದರೂ, ಅತೀ ಮಳೆ ಬಂದರೂ ಮಳೆಗೆ ಬಯ್ಯುವ ಮಾನವ ಜನಾಂಗ ನದಿ ನೀರು ಅಥವಾ ಮಳೆ ನೀರು ಹರಿಯುವ ಜಲ ಪಥ ಗಲನ್ನು ಎಷ್ಟು ಸಮರ್ಪಕವಾಗಿ ನಿರ್ವಹಿಸಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಬೇಕು. ಇದು ಪ್ರಕೃತಿಯ ಒಂದು ಎಚ್ಚರಿಕೆ ಗಂಟೆ. ಇನ್ನಾದರೂ ನಾವು ಎಚ್ಚರ ಆಗದೇ ಇದ್ದಲ್ಲಿ ಮುಂದೆ ಇನ್ನಷ್ಟು ದೊಡ್ಡ ಪ್ರಾಕೃತಿಕ ದುರಂತವನ್ನು ಎದುರಿಸಲೇಬೇಕು.
Advertisement