ಪುತ್ತೂರು: ಜನತೆಯ ನಡುವೆ ಜಾತ್ಯಾತೀತ ಮನೋಭಾವನೆಯನ್ನು ಬೆಳೆಸುವುದರ ಜೊತೆಗೆ ಹಲವು ಕುಟುಂಬಗಳನ್ನು ಒಂದು ಕುಟುಂಬವನ್ನಾಗಿಸಿದ ಹೆಗ್ಗಳಿಕೆ ಗ್ರಾಮಾಭಿವೃದ್ಧಿ ಯೋಜನೆಯದ್ದಾಗಿದೆ ಎಂದಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಹೇಳಿದರು.
ಅವರು ಪುತ್ತೂರು ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ಶನಿವಾರ ನಡೆದ ಭಜನಾ ಸತ್ಸಂಗ ಸಮಾವೇಶದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ತಾಲೂಕು ಕೇಂದ್ರ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. ವ್ಯವಹಾರ ಜ್ಞಾನ ಮತ್ತು ಆತ್ಮವಿಶ್ವಾಸ ಮೂಡಿಸುವ ಮೂಲಕ ಮಹಿಳಾ ಸಬಲೀಕರಣ, ಕುಟುಂಬದ ಆರ್ಥಿಕ ಬಲಿಷ್ಟತೆ ಮತ್ತು ಸ್ವಯಂ ಸೇವಾಕಾರ್ಯಗಳ ಮೂಲಕ ವಿಶಿಷ್ಟತೆಯನ್ನು ಹೊಂದಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಭಾಗದ ಜನತೆಯ ಪರಿವರ್ತನೆಯ ಜೊತೆ ಅವರ ಬದುಕನ್ನು ಅರ್ಥಪೂರ್ಣವಾಗಿ ಕಟ್ಟಿ ಕೊಡುತ್ತಿದೆ ಎಂದರು.
ಪುತ್ತೂರು ತಾಲೂಕಿನಲ್ಲಿ ಕಳೆದ 18 ವರ್ಷಗಳ ಹಿಂದೆ ಯೋಜನೆ ಪ್ರಾರಂಭವಾಗಿದ್ದು, ಪ್ರಸ್ತುತ 28 ಸಾವಿರ ಸದಸ್ಯರ ಕುಟುಂಬಗಳು ಈ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. 18 ವರ್ಷದಲ್ಲಿ ರೂ.19 ಕೋಟಿ ಉಳಿತಾಯ ಮಾಡುವ ಮೂಲಕ ತಮ್ಮ ಪ್ರಗತಿ ಸಾಧಿಸಿವೆ. ಪ್ರಸ್ತುತ ಸ್ವಸಹಾಯ ಮತ್ತು ಪ್ರಗತಿ ಬಂಧುಯೋಜನೆಯ ಜನತೆಗಾಗಿ `ಪ್ರಗತಿ ರಕ್ಷಾ ಕವಚ’ ಎಂಬ ಹೊಸ ವಿಮಾ ಯೋಜನೆಯನ್ನು ಅನುಷ್ಟಾನ ಮಾಡಲಾಗಿದೆ. ಈ ಹಿಂದಿನ ವಿಮಾಯೋಜನೆಯಡಿಯಲ್ಲಿ ಪುತ್ತೂರು ತಾಲೂಕಿಗೆ ರೂ.87 ಲಕ್ಷ ಹಾಗೂ ಜಿಲ್ಲೆಯಲ್ಲಿ ರೂ.50 ಕೋಟಿ ಪರಿಹಾರ ದೊರೆತಿದೆ. ಕೃಷಿಗೆ ಸಂಬಂಧಿಸಿ ಶ್ರೀಪದ್ಧತಿ, ಸ್ವ ಉದ್ಯೋಗಕ್ಕಾಗಿ ರೂ.5 ಲಕ್ಷ ಸಾಲಯೋಜನೆ ಇಂತಹ ಯೋಜನೆಗಳನ್ನು ಅನುಷ್ಟಾನ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಕೇಂದ್ರ ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ವ್ಯಸನಮುಕ್ತ ಸಮಾಜ, ಮೌಲ್ಯಾಧಾರಿತ ಸ್ವಾವಲಂಬಿ ಬದುಕು ಕಟ್ಟಕೊಡುವ ಸಮಾಜದಲ್ಲಿ ಪ್ರೀತಿ ಭಾವೈಕ್ಯತೆ ಬೆಳೆಸುವ ಮಹಾತ್ಕಾರ್ಯ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರ ಯೋಜನೆಯ ಮೂಲಕ ನಡೆದಿದೆ. ಧರ್ಮಾಧಾರಿತ ಬದುಕನ್ನು ಅರ್ಥಪೂರ್ಣಗೊಳಿಸುವ ಜತೆಗೆ ಋಷಿ -ಕೃಷಿ ಪರಂಪರೆಯನ್ನು ಬೆಳೆಸುವ ಕಾರ್ಯ ಯೋಜನೆಯ ಮೂಲಕ ನಡೆಯುತ್ತಿದೆ ಎಂದು ಹೇಳಿದರು.
ಆಶೀರ್ವಚನ ನೀಡಿದ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು ನಮ್ಮ ಇಂದಿನ ಜೀವನಪದ್ಧತಿ, ಆಹಾರ ಪದ್ಧತಿಯಿಂದಾಗಿ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಸಾವಯವ ಕೃಷಿ ಪದ್ಧತಿಯನ್ನು ಉತ್ತೇಜಿಸುವ ಕಾರ್ಯ ಯೋಜನೆ ಮೂಲಕ ನಡೆಯುತ್ತಿರುವುದು ಉತ್ತಮ ಬೆಳೆವಣಿಗೆಯಾಗಿದೆ. ಪಾಶ್ಚಾತ್ಯ ಸಂಸ್ಕೃತಿಯ ಕಾಲಘಟ್ಟದಲ್ಲಿರುವ ನಾವು ನಮ್ಮ ಮಣ್ಣಿನ ಸಂಸ್ಕೃತಿ ಏನು ಉಳಿದಿದೆ ಎಂದು ಚಿಂತನೆ ಮಾಡಬೇಕಾಗಿದೆ. ಸತ್ಕಾರ್ಯಗಳ ಮೂಲಕ ನಮ್ಮ ಜೀವನಪದ್ಧತಿಯನ್ನು ಉನ್ನತೀಕರಿಸಬೇಕಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಎಚ್. ಮಂಜುನಾಥ ಅವರು ಶುಭಾಶಂಸನೆಗೈದರು.
ಕೇಂದ್ರ ಒಕ್ಕೂಟದ ನಿರ್ಗಮನ ಅಧ್ಯಕ್ಷ, ರಾಮಣ್ಣ ಗೌಡ ಗುಂಡೋಳೆ, ನೂತನ ಅಧ್ಯಕ್ಷ ಬಾಲಕೃಷ್ಣ ಗೌಡ ನೆಲ್ಯಾಡಿ ಮಾತನಾಡಿದರು. ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಮಲ್ಲಿಕಾ ಪ್ರಸಾದ್, ಭಜನಾ ಸತ್ಸಂಗ ಸಮಿತಿ ಅಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಸಂಚಾಲಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಸಾಜ ರಾಧಾಕೃಷ್ಣ ಆಳ್ವ, ಪದ್ಮನಾಭ ಶೆಟ್ಟಿ, ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಮಹಾಬಲ ರೈ ಒಳತ್ತಡ್ಕ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಬೆತ್ತೋಡಿ, ಭಜನಾ ಪರಿಷತ್ತಿನ ಅಧ್ಯಕ್ಷ ಬಾಲಕೃಷ್ಣ ಪಂಜ, ಪ್ರಧಾನ ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯ, ತಾಲೂಕು ಯೋಜನಾಧಿಕಾರಿ ಜನಾರ್ಧನ ಎಸ್ ಮತ್ತಿತರರು ಉಪಸ್ಥಿತರಿದ್ದರು.
ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಸ್ವಾಗತಿಸಿದರು. ಉಡುಪಿ ವಿಭಾಗದ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್ ವಂದಿಸಿದರು. ಉಮೇಶ್ ಮತ್ತು ಬಾಬು ಕಾರ್ಯಕ್ರಮ ನಿರೂಪಿಸಿದರು.
ಪೂರ್ವಾಹ್ನ ಭಜನಾ ಸತ್ಸಂಗ ಸಮಾವೇಶ ಮತ್ತು ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಪಠಣ ಕಾರ್ಯಕ್ರಮವನ್ನು ಶ್ರೀ ಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಭಜನೆಯು ಯಾರನ್ನೂ ವಿಭಜಿಸದೆ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿನ ಭಜನಾ ಮಂಡಳಿಗಳು ಮತ್ತು ಮಂದಿರಗಳು ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಕೆಲಸವನ್ನು ಭಜನಾ ಭಕ್ತಿ ಮಾರ್ಗದ ಮೂಲಕ ಮಾಡುತ್ತಿವೆ. ಈ ಮೂಲಕ ಭಜನೆಯು ಸಮಾಜವನ್ನು ಶಕ್ತಿಯುತವಾಗಿ ಸಂಘಟಿಸುತ್ತಿದೆ. ದೇವರನ್ನು ಒಲಿಸಿಕೊಳ್ಳುವ ಸರಳ ಭಕ್ತಿ ಮಾರ್ಗವಾದ ಭಜನೆಯನ್ನು ಮಾಡುವ ಮೂಲಕ ಆತ್ಮ ಸಾಕ್ಷಾತ್ಕಾರವನ್ನು ಪಡೆಯಲು ಸಾಧ್ಯ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಪ್ರಯತ್ನದ ಫಲವಾಗಿ ಇಂದು ಭಜನಾ ಮಂದಿರಗಳು ಗ್ರಾಮ ಗ್ರಾಮಗಳಲ್ಲಿ ನಿರ್ಮಾಣವಾಗಿವೆ. ಭಜನೆಯ ಕುರಿತಂತೆ ವಿಶೇಷ ಅಭಿಯಾನಗಳನ್ನು ಶ್ರೀ ಕ್ಷೇತ್ರದ ಮೂಲಕ ಕಳೆದ 20 ವರ್ಷಗಳಿಂದ ನಡೆಸಲಾಗುತ್ತಿದೆ ಎಂದು ಹೇಳಿದರು.ವೇದಿಕೆಯಲ್ಲಿ ಭಜನಾ ಸತ್ಸಂಗ ಸಮಾವೇಶದ ಅಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಬೆತ್ತೋಡಿ, ಜಿಲ್ಲಾ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು, ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ. ಜಯರಾಮ ನೆಲ್ಲಿತ್ತಾಯ, ತಾಲೂಕು ಯೋಜನಾಧಿಕಾರಿ ಜನಾರ್ದನ ಎಸ್. ಸತಸಸಂಗ ಮಿತಿ ಜಿಲ್ಲಾ ಸಂಚಾಲಕರಾದ ಸಾಜ ರಾಧಾಕೃಷ್ಣ ಆಳ್ವ, ಶಶಿಕುಮಾರ್ ರೈ ಬಾಲ್ಯೊಟ್ಟು, ಪದ್ಮನಾಭ ಶೆಟ್ಟಿ ಯೋಜನೆಯ ನಿರ್ದೇಶಕ ಸತೀಶ್ ಶೆಟ್ಟಿ, ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಬ್ಬಯ್ಯ ರೈ ಪಡುಮಲೆ, ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.
Advertisement