ಸುಳ್ಯ: ಜನರ ಮೇಲೆ ಒತ್ತಡ ಹೇರಿ ಸಾಲ ವಸೂಲಿ ಮಾಡಲು ಮುಂದಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿದೆ. ಇದೇ ರೀತಿ ಮುಂದುವರಿದರೆ ಅಂತವರ ಮೇಲೆ ಕೇಸು ದಾಖಲಿಸಿ ಕ್ರಮ ಜರುಗಿಸಲಾಗುವುದು ಎಂದು ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಕಿರು ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಕಚೇರಿಗೆ ಫೈನಾನ್ಸ್ ಪ್ರತಿನಿಧಿಗಳನ್ನು ಕರೆಸಿ ಮಾತನಾಡಿದ ತಹಶೀಲ್ದಾರ್ ಯಾವ ರೀತಿ ವ್ಯವಹಾರ ನಡೆಸುತ್ತಿದ್ದೀರಿ ಮತ್ತು ಕೊಟ್ಟ ಸಾಲಕ್ಕೆ ಎಷ್ಟು ಬಡ್ಡಿ ಹಾಕುತ್ತಿದ್ದೀರಿ, ಜತೆಗೆ ಆರ್‌ಬಿಐ ನಿಂದ ಪಡೆದ ಪರವಾನಿಗೆ ಪತ್ರ ಮತ್ತು ಅದರ ನಿಯಮದಂತೆ ವ್ಯವಹರಿಸುತ್ತಿರುವುದಕ್ಕೆ ದಾಖಲೆ ನೀಡಬೇಕು. ಅದನ್ನು ನಾವೂ ಪರಿಶೀಲಿಸುತ್ತೇವೆ. ನೀವು ನಿಯಮ ಮೀರಿ ವ್ಯವಹಾರ ನಡೆಸಿದ್ದು ಮತ್ತು ಜನರ ಮೇಲೆ ಒತ್ತಡ ಹೇರಿ ಸಾಲ ವಸೂಲಿ ಮಾಡುತ್ತಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಕೂಡ ತಮ್ಮ ಅಹವಾಲುಗಳನ್ನು ತಹಶೀಲ್ದಾರ್ ಮುಂದೆ ಇರಿಸಿದರು.