ಸುಳ್ಯ: ಪ್ರತಿ ವರ್ಷ 4,000 ದಿಂದ 4,500 ಮಿ.ಮಿ.ಮಳೆ ಸುರಿಯುವ ನಾಡಿನಲ್ಲಿ ಮಳೆ ನಿಂತು ಕೆಲವೇ ತಿಂಗಳಲ್ಲಿ ಬರ ಬಡಿಯತ್ತದೆ. ಮಳೆಗಾಲದಲ್ಲಿ ತುಂಬಿ ತುಳುಕಿ ಭೋರ್ಗರೆದು ಹರಿಯುವ ನದಿಗಳು ಬೇಸಿಗೆ ಆರಂಭದಲ್ಲಿಯೇ ಬತ್ತಲು ಆರಂಭಿಸುತ್ತದೆ.
ಕರ್ನಾಟಕ ಮತ್ತು ಕೇರಳ ರಾಜ್ಯಗಳ ಲಕ್ಷಾಂತರ ಮಂದಿಗೆ ಜೀವ ಜಲ ನೀಡುವ, ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸುವ ಪಯಸ್ವಿನಿ ನದಿಯ ಸ್ಥಿತಿಯೂ ಭಿನ್ನವಾಗಿಲ್ಲ. ಮಳೆ ನಿಂತು ಕೆಲವೇ ತಿಂಗಳಲ್ಲಿ ನದಿ ಬತ್ತಿ ಹೋಗುತ್ತದೆ. ತ್ಯಾಜ್ಯವನ್ನೂ, ತ್ಯಾಜ್ಯ ನೀರನ್ನು ಹರಿಯ ಬಿಟ್ಟು ನದಿಯನ್ನು ಕಲುಷಿತಗೊಳಿಸಲಾಗುತ್ತದೆ. ಬೇಸಿಗೆಯಲ್ಲಿ ತ್ಯಾಜ್ಯ ಎಸೆದು ಮತ್ತು ನದಿಯ ಬಗೆಗಿನ ತಾತ್ಸಾರ ಮನೋಭಾವದಿಂದ ಪಯಸ್ವಿನಿ ವಿನಾಶದೆಡೆಗೆ ಮುಖ ಮಾಡಿದೆ. ಇದೀಗ ನದಿಯ ಒಡಲಾಳದ ನೋವನ್ನು ಅರಿತು ಪಯಸ್ವಿನಿ ಉಳಿಸಿ ಆಂದೋಲನಕ್ಕೆ ಸುಳ್ಯದಲ್ಲಿ ಚಾಲನೆ ನೀಡಲಾಗಿದೆ. ಇದರ ಅಂಗವಾಗಿ ಪಯಸ್ವಿನಿ ಉತ್ಸವವನ್ನು ಆಚರಿಸಲಾಗಿದೆ. ನದಿ ಮತ್ತು ಜಲಮೂಲಗಳನ್ನು ಸಂರಕ್ಷಿಸದ ಕಾರಣ ನಾಡಿಗೆ ಬರ ಬಡಿದು ಬೇಸಿಗೆಯಲ್ಲಿ ಒಂದೊಂದು ಹನಿ ನೀರಿಗೂ ಹಾಹಾಕಾರ ಪಡುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ಕುರಿತು ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ವರ್ಷಪೂರ್ತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗವುದು.
ಏನೆಲ್ಲಾ ಮಾಡಬಹುದು..? : ಪಯಸ್ವಿನಿ ಉತ್ಸವ ಸಂದರ್ಭದಲ್ಲಿ ನಡೆದ ಉಪನ್ಯಾಸ, ಚರ್ಚೆ, ಸಂವಾದದಲ್ಲಿ ಪಯಸ್ವಿನಿ ನದಿಯ ಉಳಿವಿಗೆ ಹಲವಾರು ಸಲಹೆ ಸೂಚನೆ, ಅಭಿಪ್ರಾಯಗಳು ವ್ಯಕ್ತವಾಯಿತು. ಪಯಸ್ವಿನಿ ನದಿಗೆ ತ್ಯಾಜ್ಯ ಎಸೆಯುವುದನ್ನು ತಡೆಯಲು ಬೃಹತ್ ತ್ಯಾಜ್ಯ ನಿರ್ವಹಣಾ ಘಟಕದ ಸ್ಥಾಪನೆಯಾಗಬೇಕು. ಮಲಿನ ನೀರು ಶುದ್ದೀಕರಣಕ್ಕೆ ಅಲ್ಲಲ್ಲಿ ಶುದ್ದೀಕರಣ ಘಟಕ ಸ್ಥಾಪನೆ ಮಾಡಬೇಕು. ವಾಹನಗಳನ್ನು ನದಿಯಲ್ಲಿ ತೊಳೆಯದಂತೆ ವಾಹನ ಚಾಲಕರಿಗೆ ಜಾಗೃತಿ ಮೂಡಿಸಬೇಕು, ಸ್ಪೋಟಕಗಳನ್ನು ಬಳಸಿ ಮೀನುಗಾರಿಕೆ ಮತ್ತು ಬಲೆ ಹಾಕಿ ಮೀನು ಹಿಡಿಯುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ನದಿಯಲ್ಲಿ ತುಂಬಿರುವ ಮರಳು ಮತ್ತು ಹೂಳನ್ನು ತೆಗೆಯಬೇಕು. ನದಿಯಲ್ಲಿ ನೀರಿನ ಹರಿವು ಉಳಿಸಲು ಮತ್ತು ಅಂತರ್ಜಲ ಹೆಚ್ಚಿಸಲು ನದಿಯಲ್ಲಿ 10 ಕಿ.ಮಿ. ದೂರಕ್ಕೆ ಒಂದರಂತೆ ಕಿಂಡಿ ಅಣೆಕಟ್ಟುಗಳು ನಿರ್ಮಾಣವಾಗಬೇಕು. ಅಲ್ಲದೆ ಪಯಸ್ವಿನಿ ನದಿಯಲ್ಲಿ ಚೆನ್ನಕೇಶವ ಮತ್ತು ಕಾಂತಮಂಗಲ ಸುಬ್ರಹ್ಮಣ್ಯ ದೇವರ ಜಳಕದ ಗುಂಡಿಯನ್ನು ಅಭಿವೃದ್ಧಿಪಡಿಸಿ ಪವಿತ್ರ ಸಂಗಮ ಕ್ಷೇತ್ರದ ಸೃಷ್ಠಿ ಮಾಡಿದರೆ ನದಿಯ ಪಾವಿತ್ರ್ಯತೆಯನ್ನು ಉಳಿಸಬಹುದು ಮತ್ತಿತರ ಸಲಹೆಗಳನ್ನು ಪ್ರಮುಖರು ಮುಂದಿರಿಸಿದರು.
ಏನೆಲ್ಲಾ ಮಾಡುತ್ತಾರೆ.? : ಪಯಸ್ವಿನಿ ನದಿಯ ಸಂರಕ್ಷಣೆಗೆ ಮತ್ತು ನದಿಯ ಪಾವಿತ್ರ್ಯತೆಯನ್ನು ಉಳಿಸಲು ಸುಳ್ಯದ ಹಲವು ಸಂಘಟನೆಗಳು ಒಂದು ವರ್ಷದ ಯೋಜನೆಯನ್ನು ಪ್ರಸ್ತುತಿ ಪಡಿಸಿದರು. ಪಯಸ್ವಿನಿ ನದಿಯ ಚರಿತ್ರೆ ಮತ್ತು ಪ್ರಾಮುಖ್ಯತೆಯನ್ನು ಪ್ರಚುರಪಡಿಸಲಾಗುವುದು. ನದಿಯ ಉಳಿಸುವಿಕೆಯ ಸಂದೇಶವನ್ನು ಸಾರುವ ಫಲಕಗಳನ್ನು ನದಿಯ ಬದಿಯಲ್ಲಿ ಅಲ್ಲಲ್ಲಿ ಅಳವಡಿಸಲಾಗುವುದು. ಮಕ್ಕಳಲ್ಲಿ ನದಿಯ ಬಗ್ಗೆ ಅರಿವು, ಜಾಗೃತಿ ಮೂಡಿಸಲು ಶಾಲೆಗಳಿಂದ ಮಕ್ಕಳ ನದಿ ಯಾತ್ರೆ, ನದಿಯ ಬಗ್ಗೆ ಪ್ರಬಂಧ, ರಸಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವುದು. ನದಿಯಲ್ಲಿ ನಿರಂತರ ಸ್ವಚ್ಛತೆ, ನದಿಯ ಬಗ್ಗೆ ಕಾರ್ಯಾಗಾರ, ಚರ್ಚೆ, ಜಾಥಾ ನಡೆಸಲಾಗುವುದು. ನದಿಗೆ ತ್ಯಾಜ್ಯ ಎಸೆಯುವುದು, ತ್ಯಾಜ್ಯ ನೀರು ಬಿಡುವುದು ಮತ್ತು ಮೀನುಗಾರಿಕೆ ತಡೆಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ, ನದಿ ಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ನದಿಯ ಒಡಲಾಳದ ನೋವು ಕೇಳಿಸಿಕೊಳ್ಳಿ: ಕೊಡಗು ಜಿಲ್ಲೆಯ ತಾಳತ್‍ಮನೆಯಲ್ಲಿ ಹುಟ್ಟಿ ಕರ್ನಾಟಕ, ಕೇರಳ ರಾಜ್ಯಗಳಲ್ಲಿ 87 ಕಿ.ಮಿ ಹರಿದು ಸಮುದ್ರ ಸೇರುವ ಮುನ್ನ ಕೊಡಗು, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಹಲವಾರು ಗ್ರಾಮಗಳ ಲಕ್ಷಾಂತರ ಮಂದಿಗೆ ಮತ್ತು ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸುವ ಪಯಸ್ವಿನಿ ನದಿ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಆದರೆ ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ನದಿಯ ಒಡಲು ಬತ್ತಲು ಆರಂಭಗೊಳ್ಳುತ್ತದೆ. ಹೆಚ್ಚುತ್ತಿರುವ ತಾಪಮಾನ, ಹವಾಮಾನ ವೈಪರೀತ್ಯ ಮತ್ತಿತರ ಕಾರಣಗಳಿಂದ ಪಯಸ್ವಿನಿ ನದಿಯ ನೀರು ಬೇಗನೆ ಕಡಿಮೆಯಾಗಲು ಕಾರಣವಾಗುತಿದೆ. ನದಿಗೆ ಎಸೆಯುವ ತ್ಯಾಜ್ಯ, ಎಗ್ಗಿಲ್ಲದೆ ಹರಿಯ ಬಿಡುವ ತ್ಯಾಜ್ಯ ನೀರು, ಕೋಳಿ ತ್ಯಾಜ್ಯಗಳು, ಅವೈಜ್ಞಾನಿಕವಾಗಿ ನಡೆಯುವ ಮರಳುಗಾರಿಕೆ ಪಯಸ್ವಿನಿ ನದಿಯ ನಾಶಕ್ಕೆ ಕಾರಣವಾಗುತಿದೆ. ನದಿಯಲ್ಲಿ ಇಳಿಸಿ ವಾಹನಗಳನ್ನು ತೊಳೆಯುವುದರಿಂದಲೂ ನದಿ ಕಲುಷಿತಗೊಳ್ಳುತಿದೆ ಎಂಬುದು ಹಲವಾರು ವರುಷಗಳಿಂದಲೂ ಕೇಳಿ ಬರುವ ನದಿಯ ಒಡಲಿನ ನೋವು.
ವಿಷ ಬೆರೆಸಿ ಮತ್ತು ಸ್ಫೋಟಕಗಳನ್ನು ಬಳಸಿ ನದಿಯಲ್ಲಿ ನಡೆಸುವ ಮೀನುಗಾರಿಕೆ ನದಿಯ ಒಡಲನ್ನು ಸೀಳುವ ಮತ್ತೊಂದು ಕ್ರೌರ್ಯ. ವಿಷ ಬೆರೆಸುವುದರಿಂದ ಮತ್ತು ಸ್ಫೋಟಕ ನಡೆಸುವುದರಿಂದ ಚಿಕ್ಕ ಮೀನುಗಳು ಸೇರಿದಂತೆ ನದಿಯಲ್ಲಿನ ಜೀವಜಾಲಕ್ಕೆ ಕುತ್ತು ಬರುತ್ತದೆ. ಅವು ಸತ್ತು ಕರಗಿ ನೀರು ಮಲಿನಗೊಳ್ಳುವುದರ ಜೊತೆಗೆ ನದಿಯ ಅಪೂರ್ವ ಮತ್ಸ್ಯ ಸಂಪತ್ತು ನಾಶವಾಗುತ್ತದೆ. ಬೇರೆ ಬೇರೆ ಪ್ರದೇಶಗಳಿಂದ ಬಂದು ಬಲೆ ಹಾಕಿ ಮೀನು ಹಿಡಿಯುವುದು ಕೂಡ ಪಯಸ್ವಿನಿ ನದಿಯ ಮೀನುಗಳಿಗೆ ಕುತ್ತು ತರುತಿದೆ. ಈ ರೀತಿ ಹಲವು ರೀತಿಯಲ್ಲಿ ಪಯಸ್ವಿನಿ ನೀರು ಕಲುಷಿತಗೊಳ್ಳುವುದರಿಂದ ಬೇಸಿಗೆಯಲ್ಲಿ ಹಲವು ರೋಗಗಳು ಹರಡಲು ಕೂಡ ಕಾರಣವಾಗುತಿದೆ. 2018ರಲ್ಲಿ ಉಂಟಾದ ಜಲಪ್ರಳಯ, ಭೂಕುಸಿತದಿಂದ ನದಿಯ ನೀರಲ್ಲಿ ಮಣ್ಣು, ಮರಳು ಹರಿದು ಬಂದು ನದಿಯ ದೊಡ್ಡ ದೊಡ್ಡ ಹೊಂಡಗಳು ಮುಚ್ಚಿ ಹೋಗಿ ನೀರಿನ ಸಂಗ್ರಹವೇ ಇಲ್ಲದಂತಾಗಿದೆ. ಇದು ಕೂಡ ನೀರಿನ ಶೇಖರಣೆ, ಹರಿವು ಕಡಿಮೆಯಾಗಲು ಕಾರಣವಾಗಿದೆ. ನದಿಯ ತೀರ ಹಲವೆಡೆ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಯಾಗಿದೆ.
ನದಿಗಳು ನಾಶವಾದರೆ ಜೊತೆಯಲ್ಲಿ ನಾಗರಿಕತೆ, ಸಂಸ್ಕøತಿ ಅನೇಕ ಜೈವಿಕ ಸಂಪತ್ತು ಎಲ್ಲವೂ ನಾಶವಾಗುತ್ತದೆ. ಆದುದರಿಂದ ನದಿಯನ್ನು ಮೃತ ನದಿಯಾಗಲು ಬಿಡಬಾರದು. ಜೀವ ನದಿಯಾಗಿದ್ದರೆ ಮಾತ್ರ ಪ್ರಕೃತಿಯೂ, ಜೀವಿಗಳು ಬದುಕಲು ಸಾಧ್ಯ. ನದಿ, ಜಲ, ನೆಲ ಇವೆಲ್ಲದಕ್ಕೂ ಮುಂದಿನ ತಲೆಮಾರಿಗೂ ಹಕ್ಕಿದೆ. ಆದುದರಿಂದ ನದಿಯನ್ನು ಉಳಿಸಿ ಮುಂದಿನ ಜನಾಂಗಕ್ಕೆ ಹಸ್ತಾಂತರಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎನ್ನುತ್ತಾರೆ ಸಾಹಿತಿ, ಅರ್ಥಶಾಸ್ತ್ರಜ್ಞ ಡಾ.ಪ್ರಭಾಕರ ಶಿಶಿಲ
P