ಮಂಗಳೂರು: ಪ್ರಾಮಾಣಿಕತೆ ಎನ್ನುವುದು ಮನುಷ್ಯನ ಹುಟ್ಟಿನಲ್ಲೇ ಬರಬೇಕಾದ ಗುಣ. ಈಚೆಗೆ ಪ್ರಾಮಾಣಿಕತೆಯೂ ಸುದ್ದಿಯಾಗುತ್ತದೆ. ಆದರೆ ಇದು ಹಾಗಲ್ಲ, ಲಾಕ್ಡೌನ್ ನಡುವೆ, ಎಲ್ಲಾ ಒತ್ತಡದ ನಡುವೆ ತನ್ನ ಅಟೋದಲ್ಲಿ ಪ್ರಯಾಣಿಸಿದ ಪ್ರಯಾಣಿಕನ ಜೀವರಕ್ಷಕ ಔಷಧಿ ಮನೆಗೆ ತಲುಪಿಸಿದ ಪ್ರಾಮಾಣಿಕ ಸೇವೆ. ಇದು ನಡೆದದ್ದು ಮೂಡಬಿದರೆಯಲ್ಲಿ.
ವ್ಯಕ್ತಿಯೋರ್ವರು ತಮ್ಮ ಔಷಧಿ ಹಾಗೂ ವೈದ್ಯಕೀಯ ದಾಖಲೆಗಳನ್ನು ಮನೆಗೆ ಹೋಗುವ ತುರಾತುರಿಯಲ್ಲಿ ರಿಕ್ಷಾದಲ್ಲೇ ಬಿಟ್ಟು ಹೋಗಿದ್ದು, ಇದನ್ನು ನಂತರ ಗಮನಿಸಿದ ಚಾಲಕ ವೈದ್ಯಕೀಯ ದಾಖಲೆಗಳನ್ನು ಹಿಂತಿರುಗಿಸಿದ್ದಾರೆ. ಇತ್ತೀಚೆಗೆ ಆಂಜಿಯೋಪ್ಲಾಸ್ಟಿ ಆದ ವ್ಯಕ್ತಿ ತಮ್ಮ ಔಷಧಿ ಹಾಗೂ ವೈದ್ಯಕೀಯ ದಾಖಲೆಗಳನ್ನು ರಿಕ್ಷಾದಲ್ಲಿ ಮರೆತು ಹೋಗಿದ್ದರು. ಈ ಔಷಧಿಗಳು ಜೀವರಕ್ಷಕ ಔಷಧಿಯಾಗಿದ್ದು ಲಾಕ್ಡೌನ್ ನಡುವೆ ಪರಿಶ್ರಮದಿಂದ ರೋಗಿಯು ಖರೀದಿ ಮಾಡಿ ಅವಸರದಲ್ಲಿ ಮನೆಗೆ ಹೋಗುವ ಸಂದರ್ಭ ರಿಕ್ಷಾದಲ್ಲೇ ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ರಿಕ್ಷಾ ಚಾಲಕ ಯೂಸುಫ್ ಕೂಡಲೇ ಅದರಲ್ಲಿ ನಮೂದಿಸಿದ ವೈದ್ಯರ ಮೊಬೈಲಿಗೆ(ಡಾ.ಪದ್ಮನಾಭ ಕಾಮತ್) ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ವಿಷಯವನ್ನು ತಿಳಿದ ಕೂಡಲೇ ಆಸ್ಪತ್ರೆಯ ಹೌಸ್ ಕೀಪಿಂಗ್ ಸಹಾಯಕಿ ಭಾರತಿ ಅವರು ತಕ್ಷಣ ರೋಗಿಯ ಮೊಬೈಲ್ ನಂಬರನ್ನು ದಾಖಲೆಯಿಂದ ಪರಿಶೀಲಿಸಿ ಎರಡೂ ಪಂಗಡದವರಿಗೆ ತಿಳಿಸಿರುತ್ತಾರೆ . ಅಟೋ ಚಾಲಕ ಯೂಸುಫ್ ಅವರು ರೋಗಿಯ ಮೊಬೈಲ್ ನಂಬರ್ ಪಡೆದುಕೊಂಡು ಅವರ ವಿಳಾಸಕ್ಕೆ ವೈದ್ಯಕೀಯ ದಾಖಲೆಗಳನ್ನು ಹಿಂತಿರುಗಿಸಿ ಪ್ರಾಮಾಣಿಕ ಸೇವೆ ಮಾಡಿದ್ದಾರೆ.